ಭಟ್ಕಳ: ತಾಲೂಕಿನ ತೆಂಗಿನಗುಂಡಿ ಸಮೀಪ ಸೋಮವಾರ ಬೆಳಗಿನ ಜಾವ ಅಕ್ರಮವಾಗಿ ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳನ್ನು ಭಟ್ಕಳ ಪೊಲೀಸ್ ಇನ್ಸ್ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ರಕ್ಷಣೆ ಮಾಡಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ : ತೆಂಗಿನಗುಂಡಿಯಲ್ಲಿ ಮತ್ತೆ ಹಾರಾಡಿದ ಭಗವಾಧ್ವಜ
ವಿಡಿಯೋ ಕೂಡ ನೋಡಿ : ಮತ್ತೆ ಹಾರಾಡಿದ ಭಗವಾಧ್ವಜ https://fb.watch/qCnT579ySx/?mibextid=Nif5oz
ಕಂಟೇನರ್ ಚಾಲಕ ಬೀದರ ಜಿಲ್ಲೆಯ ಹುಮ್ನಾಬಾದ ನಿವಾಸಿ ನಾಗಶೆಟ್ಟಿ ಶರಣಪ್ಪ ಗೋವಿ, ಹೈದ್ರಾಬಾದಿನ ನಿವಾಸಿ ಮಹ್ಮದ್ ಸರ್ದಾರ ಮತ್ತು ಮಹಾರಾಷ್ಟ್ರದ ಜಬ್ಬಾರ ಮಿಯಾ ಬಂಧಿತ ಆರೋಪಿಗಳು. ಇವರು ಲಾರಿಯಲ್ಲಿ ಹೊನ್ನಾವರ ಕಡೆಯಿಂದ ಮಂಗಳೂರು ಕಡೆಗೆ ಎತ್ತುಗಳನ್ನು ಪರವಾನಗಿ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ.
ಒಟ್ಟು ೩.೭೫ ಲಕ್ಷ ರೂ. ಮೌಲ್ಯದ ೧೫ ಎತ್ತುಗಳನ್ನು ಸಾಗಾಟ ಮಾಡಲಾಗುತ್ತಿತ್ತು. ರಕ್ಷಣೆ ಮಾಡಿದ ಜಾನುವಾರುಗಳನ್ನು ನ್ಯಾಯಾಲಯದ ಅನುಮತಿ ಪಡೆದು ಬ್ರಹ್ಮಾವರದ ನೀಲಾವರ ಗೋ ಶಾಲೆಗೆ ಸೇರಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಾಹನ ಚಾಲಕ ಕಿರಣ ಕುಮಾರ, ಸಿಬ್ಬಂದಿಯಾದ ಅರುಣ ಪಿಂಟೋ, ಉದಯ ನಾಯ್ಕ ಹಾಗೂ ಇತರರು ಇದ್ದರು. ಪಿಎಸ್‌ಐ ಶಿವಾನಂದ ನಾವದಾರಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.