ವಿವೇಕ ಮಹಾಲೆ
ಸಂಪಾದಕರು, ಭಟ್ಕಳಡೈರಿ
ಇಮೇಲ್ : vivekchampak@gmail
ಮೊ.: 8884123132
ಭಟ್ಕಳದಲ್ಲಿ ಅದೊಂದು ಕಾಲವಿತ್ತು. ಜೆಡಿಎಸ್ ಅಂದ್ರೆ ಇನಾಯತುಲ್ಲಾ ಶಾಬಂದ್ರಿ. ಇನಾಯತುಲ್ಲಾ ಅಂದ್ರೆ ಜೆಡಿಎಸ್. ಜೆಡಿಎಸ್ ಮೂಲಕ ರಾಜಕಾರಣ ಆರಂಭಿಸಿದ್ದ ಇನಾಯತುಲ್ಲಾ ಶಾಬಂದ್ರಿ ಇಲ್ಲಿಯವರೆಗೂ ಜೆಡಿಎಸ್ಸಿನಲ್ಲಿದ್ರು. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಟ್ಟಾ ಅನುಯಾಯಿ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅತ್ಯಾಪ್ತರು. ಆದರೀಗ ಬದಲಾದ ರಾಜಕೀಯ ಸ್ಥಿತ್ಯಂತರದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ‘ತೆನೆ’ ಇಳಿಸಿ ‘ಕೈ’ ಹಿಡಿದ ಇನಾಯತುಲ್ಲಾ ಶಾಬಂದ್ರಿಗೆ ರಾಜಕೀಯದಲ್ಲಿ ಲಾಭ ಆಗುತ್ತಾ? ಇವರ ಸೇರ್ಪಡೆಯಿಂದ ಕಾಂಗ್ರೆಸ್ಸಿಗೆ ಎಷ್ಟು ಲಾಭ? ಈ ಕುರಿತು ಭಟ್ಕಳದಲ್ಲಿ ಚರ್ಚೆ ಆರಂಭಗೊಂಡಿದೆ.
ಇದನ್ನೂ ಓದಿ : ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ
ಹೌದು… ಭಟ್ಕಳದ ಜೆಡಿಎಸ್ ಮುಖಂಡರಾಗಿದ್ದ ಇನಾಯತುಲ್ಲಾ ಶಾಬಂದ್ರಿ ಕುಮಟಾದಲ್ಲಿ ಶುಕ್ರವಾರ ನಡೆದ ಪ್ರಜಾಧ್ವನಿ- ೨ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇನಾಯತುಲ್ಲಾ ಶಾಬಂದ್ರಿ ಆರಂಭದಿದಲೂ ಜೆಡಿಎಸ್ಸಲ್ಲಿ ಸಕ್ರಿಯರಾಗಿದ್ದರು. ಈ ಹಿಂದೆ ಚುನಾವಣೆಗೂ ಸ್ಪರ್ಧಿಸಿದ್ದರು. ಪ್ರಸಕ್ತ ಭಟ್ಕಳದ ಮುಸ್ಲಿಮರ ಪರಮೋಚ್ಛ ಸಂಸ್ಥೆ ತಂಜೀಮ್ ಅಧ್ಯಕ್ಷರೂ ಆಗಿದ್ದಾರೆ. ಜೆಡಿಎಸ್‌ನಲ್ಲಿನ ಬೆಳವಣಿಗೆಯಿಂದ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಜೆಡಿಎಸ್ಸಿನಿಂದ ಅಂತರ ಕಾದುಕೊಂಡ ಶಾಬಂದ್ರಿ :
ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಇನಾಯತುಲ್ಲಾ ಶಾಬಂದ್ರಿ ಅವರು ಜೆಡಿಎಸ್‌ನಿಂದ ದೂರ ಸರಿದಿದ್ದರು. ಅದಕ್ಕೆ ಕಾರಣವೂ ಇದೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಸುದ್ದಿ ಹೊರಬರುತ್ತಿದ್ದಂತೆ ಇನಾಯತುಲ್ಲಾ ನಿಲುವಿನ ಬಗ್ಗೆ ಅವರ ಸಮುದಾಯದಲ್ಲೇ ಪ್ರಶ್ನೆ ಎದ್ದಿತ್ತು ಸಾಮಾಜಿಕ ಜಾಲತಾಣಗಳಲ್ಲಿ ಇನಾಯತುಲ್ಲಾ ಅವರ ಸ್ಪಷ್ಟೀಕರಣಕ್ಕಾಗಿ ಆಗ್ರಹಿಸಲಾಗಿತ್ತು. ಹೇಳಿಕೇಳಿ… ಭಟ್ಕಳದ ಮುಸ್ಲಿಮರ ಪರಮೋಚ್ಚ ಸಂಸ್ಥೆಯ ಅಧ್ಯಕ್ಷರು. ಹೀಗಾಗಿ, ಬಿಜೆಪಿಯೊಂದಿಗೆ ಪ್ರಚಾರ ನಡೆಸುವ ಸಂಧಿಗ್ಧತೆಯಲ್ಲಿ ಇನಾಯತುಲ್ಲಾ ಶಾಬಂದ್ರಿ ಇದ್ದರು. ಒಂದು ವೇಳೆ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ್ರೆ ತಂಜೀಮ್ ಅಧ್ಯಕ್ಷ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇತ್ತು. ತಂಜೀಮ್ ಸದಸ್ಯರು ಕೂಡ ಸ್ಪಷ್ಟೀಕರಣವನ್ನು ನೀಡುವಂತೆ ಅವರ ಮೇಲೆ ಒತ್ತಡ ಹೇರಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಇನಾಯತುಲ್ಲಾ ಶಾಬಂದ್ರಿ ಮಾತ್ರ ಈ ವಿಷಯದಲ್ಲಿ ತಮ್ಮ ನಿಲುವಿನ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿರಲಿಲ್ಲ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕೊನೆಗೂ ಜೆಡಿಎಸ್ ಗೆ ರಾಜೀನಾಮೆ :
ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾದ ಬೆನ್ನಲ್ಲೇ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಇನಾಯತುಲ್ಲಾ ಶಾಬಂದ್ರಿ ಪಕ್ಷಕ್ಕೆ ರಾಜೀನಾಮೆ ಕೊಟ್ಟೇ ಬಿಟ್ಟರು. ಜೆಡಿಎಸ್ಸಿನ ಭಟ್ಕಳದ ಪ್ರಮುಖ ನಾಯಕರಾಗಿದ್ದ, ೨೮ ವರ್ಷಗಳಿಂದ ಜನತಾ ಪರಿವಾರದ ದೀರ್ಘಕಾಲದ ಸದಸ್ಯರಾಗಿದ್ದ ಇನಾಯತುಲ್ಲಾ ಶಾಬಂದ್ರಿ ಜೆಡಿಎಸ್ ತೊರೆದರು. ಬಿಜೆಪಿ ಜತೆಗಿನ ಮೈತ್ರಿ ನೋಡಿದರೆ ಜೆಡಿಎಸ್‌ನಲ್ಲಿ ಮುಂದುವರಿಯುವುದು ವ್ಯರ್ಥ ಎಂದು ಇನಾಯತುಲ್ಲಾ ಶಾಬಂದ್ರಿ ಮೊದಲ ಬಾರಿಗೆ ಬಹಿರಂಗವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪಕ್ಷಕ್ಕಿಂತ ತಮ್ಮ ಸಮುದಾಯದ ಆದ್ಯತೆಗೆ ಒತ್ತು ನೀಡುವುದು ಅವರಿಗೆ ಅನಿವಾರ್ಯವಾಯ್ತು.
ಇದನ್ನೂ ಓದಿ : ಮರಾಠಿ ನಾಟಕಕ್ಕೆ ಯಕ್ಷಗಾನವೇ ಮೂಲ…!
ಕಾಂಗ್ರೆಸ್ಸಿಗೆ ಆಹ್ವಾನ :
ಇನಾಯತುಲ್ಲಾ ಶಾಬಂದ್ರಿ ಜೆಡಿಎಸ್ ತೊರೆಯುತ್ತಿದ್ದಂತೆ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ರೆಡ್ ಕಾರ್ಪೆಟ್ ಹಾಸಿದ್ದು ಸುಳ್ಳಲ್ಲ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕ ಮಂಕಾಳ ವೈದ್ಯ ತುದಿಗಾಲಲ್ಲಿ ನಿಂತರು. ಹಾಗಂತ, ಕಾಂಗ್ರೆಸ್ ಸೇರುವಂತೆ ಇನಾಯತುಲ್ಲಾ ಶಾಬಂದ್ರಿಗೆ ಆಹ್ವಾನ ಬಂದಿದ್ದು ಇದೇ ಮೊದಲಲ್ಲ. ಅವರ ಮನವೊಲಿಸಲು ವರ್ಷಗಳ ಕಾಲ ಪ್ರಯತ್ನಗಳು ನಡೆದಿತ್ತು. ಆದರೆ, ಅವರು ಜೆಡಿಎಸ್ ಮತ್ತು ದೇವೇಗೌಡರಿಗೆ ಬದ್ಧರಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಜೆಡಿಎಸ್-ಬಿಜೆಪಿ ಮೈತ್ರಿ ಸುದ್ದಿ ಬಂದಾಗ ಅದು ಅಸಾಧ್ಯದ ಮಾತು ಎಂದು ಅವರು ನಂಬಿದ್ದರು. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮೇಲೆ ಅವರು ವಿಶ್ವಾಸ ಹೊಂದಿದ್ದರು. ಆದರೆ, ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಆ ವಿಶ್ವಾಸಕ್ಕೆ ಧಕ್ಕೆ ಉಂಟಾಯಿತು. ದೇವೇಗೌಡ, ಕುಮಾರಸ್ವಾಮಿ ಅವರು ಬಿಜೆಪಿ ಮೈತ್ರಿ ಘೋಷಣೆ ಮಾಡಿದರು. ಇದರಿಂದ ಇನಾಯತುಲ್ಲಾ ಶಾಬಂದ್ರಿ ಅವರಿಗೆ ಪಕ್ಷ ತೊರೆಯದೇ ಬೇರೆ ದಾರಿ ಇರಲಿಲ್ಲ.
ಸಿದ್ದರಾಮಯ್ಯ ಭೇಟಿ, ಮಾತುಕತೆ :
ತಿಂಗಳುಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇನಾಯತುಲ್ಲಾ ಶಾಬಂದ್ರಿ ನೇತೃತ್ವದ ತಂಜೀಮ್ ನಿಯೋಗ ಭೇಟಿ ಮಾಡಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸಚಿವರಾದ ಮಂಕಾಳ ವೈದ್ಯ, ಜಮೀರ್ ಅಹ್ಮದ್ ಈ ಸಂದರ್ಭದಲ್ಲಿ ನಿಯೋಗದ ಜೊತೆ ಇದ್ದರು. ಜೆಡಿಎಸ್‌ಗೆ ರಾಜೀನಾಮೆ ನೀಡುವ ಬಗ್ಗೆ ಅಂದು ಸಿದ್ದರಾಮಯ್ಯ ಅವರು, ಇನಾಯತುಲ್ಲಾ ಅವರನ್ನು ಕೇಳಿದ್ರು. ಜೆಡಿಎಸ್ ನಿರ್ಗಮನ ಖಚಿತಪಡಿಸಿದಾಗ ಕಾಂಗ್ರೆಸ್ ಸೇರುವಂತೆ ಸಿದ್ದರಾಮಯ್ಯ ಆಹ್ವಾನ ನೀಡಿದ್ದರು. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೆ ಕಣದಿಂದ ದೂರ ಉಳಿದಿದ್ದಕ್ಕೆ ಇನಾಯತುಲ್ಲಾ ಅವರಿಗೆ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದಾದ ನಂತರ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹಲವು ಚರ್ಚೆಗಳು ಕಾಂಗ್ರೆಸ್ ಮುಖಂಡರೊಂದಿಗೆ ನಡೆದಿತ್ತು.
ಜೆಡಿಎಸ್ ಅಭ್ಯರ್ಥಿಯಾಗಿದ್ದರು :
ಇನಾಯತುಲ್ಲಾ ಅವರು ಈ ಹಿಂದೆ ತಂಝೀಮ್‌ನ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ೨೦೧೩ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭಟ್ಕಳ- ಹೊನ್ನಾವರ ಕ್ಷೇತ್ರದಿಂದ ತಂಝೀಮ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದರು. ಆದರೆ, ಪಕ್ಷೇತರ ಅಭ್ಯರ್ಥಿಯಾಗಿದ್ದ ಮಂಕಾಳ ವೈದ್ಯರ ವಿರುದ್ಧ ಸೋಲನ್ನು ಕಂಡಿದ್ದರು.
ಕಾಂಗ್ರೆಸ್ಸಿಗೆ ಆನೆಬಲ :
ಇನಾಯತುಲ್ಲಾ ಶಾಬಂದ್ರಿ ಸೇರ್ಪಡೆಯಿಂದ ಕಾಂಗ್ರೆಸ್ಸಿಗೆ ಬಲ ಬಂದಿರುವುದಂತೂ ಸುಳ್ಳಲ್ಲ. ಸ್ವತಃ ತಂಜೀಮ್ ಅಧ್ಯಕ್ಷ ಜೆಡಿಎಸ್ಸಿನಿಂದ ಕಾಂಗ್ರೆಸ್ ಗೆ ಬಂದಿರುವುದು ಮುಸ್ಲಿಮರ ಮತಗಳು ಏಕಪಕ್ಷೀಯವಾಗಿ ಕಾಂಗ್ರೆಸ್ಸಿಗೆ ಸಿಗುವ ಸಾಧ್ಯತೆಯೇ ಹೆಚ್ಚು. ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವಂತೆ ತಂಜೀಮ್ ಮುಸ್ಲಿಮರಿಗೆ ಕರೆ ನೀಡುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿಯೇ ತಂಜೀಮ್ ಇಂಥದ್ದೊಂದು ನಿರ್ಣಯ ಕೈಗೊಂಡಿತ್ತು. ಮುಸ್ಲಿಮ್ ಅಭ್ಯರ್ಥಿಗೆ ಬೆಂಬಲಿಸದೆ ಜಾತ್ಯತೀತ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ನಿರ್ಧಾರವನ್ನು ತಂಜೀಮ್ ಕೈಗೊಂಡಿತ್ತು. ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಂಕಾಳ ವೈದ್ಯ ಅವರನ್ನು ಬೆಂಬಲಿಸಿತ್ತು. ವಿಶೇಷವೆಂದರೆ, ತಂಜೀಮ್ ಅಧ್ಯಕ್ಷರಾಗಿದ್ದ ಇನಾಯತುಲ್ಲಾ ಶಾಬಂದ್ರಿ ಜೆಡಿಎಸ್ಸಿನಲ್ಲಿದ್ದರು. ಏತನ್ಮಧ್ಯೆ, ತಂಜೀಮ್ ನಿರ್ಧಾರವನ್ನು ವಿರೋಧಿಸಿ ಭಟ್ಕಳದಲ್ಲಿ ಮಹಿಳೆಯರು ತಂಝೀಮ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ್ದು ಗಮನಾರ್ಹ.
ಯಾರಿಗೆ ಲಾಭ? ಯಾರಿಗೆ ನಷ್ಟ?
‘ಕೈ’ ಹಿಡಿದ ಇನಾಯತುಲ್ಲಾ ಶಾಬಂದ್ರಿ ಅವರಿಗೆ ರಾಜಕೀಯ ನೆಲೆ ಸಿಕ್ಕಂತಾಗಿದೆ. ಆದರೆ, ಇನಾಯತುಲ್ಲಾ ಅವರಿಗೆ ಯಾವ ಸ್ಥಾನಮಾನ ಕಾಂಗ್ರೆಸ್ಸಿನಲ್ಲಿ ಸಿಗಲಿದೆ ಎಂಬುದು ಸದ್ಯಕ್ಕೆ ನಿಗೂಢ. ಇನಾಯತುಲ್ಲಾ ಶಾಬಂದ್ರಿ ಕಾಂಗ್ರೆಸ್ ಸೇರ್ಪಡೆಯಿಂದ ಮುಸ್ಲಿಮರ ಜೆಡಿಎಸ್ ಮತಗಳು ಕಾಂಗ್ರೆಸ್ಸಿಗೆ ಸಿಗುವ ಸಾಧ್ಯತೆ ಹೆಚ್ಚು. ಇನಾಯತುಲ್ಲಾ ನಿರ್ಗಮನ ಜೆಡಿಎಸ್ಸಿಗಂತೂ ದೊಡ್ಡ ಹಿನ್ಮೆಡೆ. ಆದರೆ, ಬಿಜೆಪಿಗೆ ಇದರಿಂದ ಯಾವ ನಷ್ಟವೂ ಇಲ್ಲ ಎನ್ನುತ್ತಾರೆ ಬಿಜೆಪಿ ಮುಖಂಡರು. ಯಾವುದಕ್ಕೂ ಚುನಾವಣೆ ಮುಗಿದು, ಫಲಿತಾಂಶ ಘೋಷಣೆ ಆದ ನಂತರವೇ ಇದಕ್ಕೆಲ್ಲ ಉತ್ತರ ಸಿಗಲಿದೆ.