ಕುಮಟಾ : ಜೂನ್ ೨೮ರಂದು ರಾತ್ರಿ ತಾಲೂಕಿನ ಗೋರೆ ಗುಡ್ಡದ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅಂಕೋಲಾ ಬೆಳಂಬಾರ ಮೂಲದ ಹಾಲಿ ಧಾರೇಶ್ವರದ ನಿವಾಸಿ ವಿವೇಕಾನಂದ ದುರ್ಗಯ್ಯ ಖಾರ್ವಿ(೨೬) ಮತ್ತು ಹೊನ್ನಾವರ ತಾಲೂಕಿನ ಹಳದೀಪುರ ಅಗ್ರಹಾರದ ಈಶ್ವರ ಅಮಾಸೆ ಮುಕ್ರಿ ಬಂಧಿತರು. ಇವರಿಂದ ಕಳ್ಳತನ ಮಾಡಿ ಮನೆಯಲ್ಲಿ ಬಚ್ಚಿಟ್ಟ ೮೬ ಸಾ.ರೂ.ಮೌಲ್ಯದ ದೇವರ ಚಿನ್ನಾಭರಣ ಹಾಗೂ ೩.೫ ಸಾ.ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತರನ್ನು ಕುಮಟಾ ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ೧೫ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.
ಇದನ್ನೂ ಓದಿ : ಗೋರೆ ದೇವಸ್ಥಾನದಲ್ಲಿ ಕಳ್ಳತನ ನಡೆದಾಗ ಇದ್ದ ಬೈಕ್ ಯಾರದ್ದು?
ಏನಿದು ಪ್ರಕರಣ ?
ಜೂನ್ ೨೮ರಂದು ರಾತ್ರಿ ವೇಳೆಯಲ್ಲಿ ಕಳ್ಳರು ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯ ಧಾರೇಶ್ವರದ ಗೋರೆ ಗುಡ್ಡದ ಗೋಪಾಲಕೃಷ್ಣ ದೇವಸ್ಥಾನದ ಹೆಂಚು ತೆಗೆದು, ದೇವಸ್ಥಾನದ ಒಳಗೆ ಇಳಿದಿದ್ದರು. ಗರ್ಭಗುಡಿಯ ಬಾಗಿಲು ಮುರಿದು, ದೇವಸ್ಥಾನದ ಟ್ರಸರಿ ಡಬ್ಬದಲ್ಲಿದ್ದ ಸುಮಾರು ೧.೨೭ ಲ.ರೂ. ಮೌಲ್ಯದ ಚಿನ್ನದ ಚೈನ್, ಬಂಗಾರದ ನಾಮ, ಚಿನ್ನದ ಕಣ್ಣು, ಚಿನ್ನದ ತಾಳಿ ಚಿಪ್ಪು, ಬೆಳ್ಳಿಯ ಚೈನುಗಳನ್ನು ಕಳ್ಳತನ ಮಾಡಿದ್ದರು. ಈ ಕುರಿತು ದೇವಸ್ಥಾನದ ಅರ್ಚಕ ಶ್ರೀಧರ ವಿಷ್ಣು ಭಟ್ ಜುಲೈ ೧ರಂದು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ : ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಸ್ತುಪ್ರದರ್ಶನ ಯಶಸ್ವಿ
ಆರೋಪಿತರ ಪತ್ತೆ ಹೇಗೆ? :
ಪ್ರಕರಣ ದಾಖಲಿಸಿಕೊಂಡ ಕುಮಟಾ ಪಿ.ಎಸ್.ಐ. ಸುನಿಲ್ ಬಂಡಿವಡ್ಡರ್ ಹಾಗೂ ಅವರ ತಂಡ ಕಾರ್ಯಾಚರಣೆಗೆ ಇಳಿಯಿತು. ದೇವಸ್ಥಾನವನ್ನು ಪರಿಶೀಲಿಸಿದರು ಅಲ್ಲಿದ್ದ ಸಿ.ಸಿ. ಕ್ಯಾಮರಾದ ಫೂಟೇಜ್ನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕಳ್ಳನ ಸುಳಿವು ಪೊಲೀಸರಿಗೆ ಸಿಕ್ಕಿತು. ಕುಮಟಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು. ಜುಲೈ ೭ರಂದು ಧಾರೇಶ್ವರದ ಮಂಗಳೂರು ಹೋಟೆಲ್ ಬಳಿ ಆರೋಪಿತರನ್ನು ಬಂಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಶ್ರೇಷ್ಠ ವೈದ್ಯ ಪ್ರಶಸ್ತಿ ಪುರಸ್ಕೃತ ಡಾ.ಅರುಣಕುಮಾರಗೆ ಹೃದಯಸ್ಪರ್ಶಿ ಸ್ವಾಗತ
ಬಂಧಿತನ ಮೇಲೆ ಹಲವು ಪ್ರಕರಣ :
ಆರೋಪಿತನಾದ ವಿವೇಕಾನಂದ ದುರ್ಗಯ್ಯ ಖಾರ್ವಿ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ದೇವಸ್ಥಾನ ಕಳುವು ಪ್ರಕರಣ ದಾಖಲಾಗಿವೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಒಂದು ದೇವಸ್ಥಾನ ಕಳುವು ಪ್ರಕರಣ ಹಾಗೂ ಕುಮಟಾ ಪೊಲೀಸ್ ಠಾಣೆಯಲ್ಲಿ ೨ ದೇವಸ್ಥಾನ ಕಳುವು ಪ್ರಕರಣಗಳು ಇವೆ. ಅಲ್ಲದೇ ಈತ ಅಂಕೋಲಾ ನ್ಯಾಯಾಲಯದ ಮೂರು ನಾನ್ ಬೇಲೆಬಲ್ ವಾರಂಟ್ ಗಳಲ್ಲಿ, ಕುಮಟಾ ನ್ಯಾಯಾಲಯದಲ್ಲಿ ಮೂರು ನಾನ್ ಬೇಲೆಬಲ್ ವಾರಂಟ್ ಗಳಲ್ಲಿ ಬೇಕಾದ ಆರೋಪಿಯಾಗಿದ್ದಾನೆ.
ಇದನ್ನೂ ಓದಿ : ಭಟ್ಕಳ ಮಾರಿಜಾತ್ರೆ ಜುಲೈ ೩೧ರಿಂದ ಆರಂಭ
ಈ ಪ್ರಕರಣದ ಕಾರ್ಯಾಚರಣೆಯಲ್ಲಿ ಭಾಗಿಯಾದ ಕುಮಟಾ ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಪಿ.ಎಸ್.ಐ. ಸುನಿಲ್ ಬಂಡಿವಡ್ಡರ್ ಹಾಗೂ ಸಿಬ್ಬಂದಿ ಗಣೇಶ ನಾಯ್ಕ, ದಯಾನಂದ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ಅವರನ್ನು ಉತ್ತರ ಕನ್ನಡ ಹೆಚ್ಚುವರಿ ಎಸ್ಪಿ ಮತ್ತು ಭಟ್ಕಳ ಡಿವೈಎಸ್ಪಿ ಪ್ರಶಂಸಿಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಿದ್ದಕ್ಕೆ ಗೋರೆ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತವರ್ಗ ಕುಮಟಾ ಪೊಲೀಸರನ್ನು ಅಭಿನಂದಿಸಿದ್ದಾರೆ.