ಭಟ್ಕಳ: ಇಲ್ಲಿನ ಗ್ರಾಮದೇವ ಶ್ರೀ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವವು ಬುಧವಾರದಂದು ರಾಮನವಮಿಯ ಪರ್ವಕಾಲದಲ್ಲಿ ಭಕ್ತರ ಹರ್ಷೋದ್ಘಾರಗಳೊಂದಿಗೆ ಅದ್ದೂರಿಯಾಗಿ ಸಂಪನ್ನಗೊಂಡಿತು.
ವಿಡಿಯೋ ನೋಡಿ : ಭಟ್ಕಳ ಜಾತ್ರೆ….. ಬ್ರಹ್ಮರಥೋತ್ಸವ
ಶ್ರೀ ಚನ್ನಪಟ್ಟಣ ಹನುಮಂತ ದೇವರ ರಥೋತ್ಸವಕ್ಕೆ ಯುಗಾದಿಯ ಮಾರನೆಯ ದಿನದಂದು ಆರಂಭಗೊಳ್ಳುವ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗರುಡನ ಪಟವನ್ನು ಧ್ವಜಸ್ತಂಭಕ್ಕೆ ಕಟ್ಟುವ ಮೂಲಕ ಚಾಲನೆ ನೀಡಲಾಗಿತ್ತು.
ಪ್ರತಿ ದಿನವೂ ಕೂಡಾ ಒಂದೊಂದು ಉತ್ಸವವಾದಿಗಳು ನಡೆದು, ಸಪ್ತಮಿ ಹಾಗೂ ಅಷ್ಟಮಿಯಂದು ಹೂವಿನ ರಥೋತ್ಸವ ಸಹಸ್ರಾರು ಭಕ್ರವೃಂದದೊಂದಿಗೆ ನಡೆಯಿತು.
ರೀಲ್ಸ್ ನೋಡಿ : ಭಟ್ಕಳ ಜಾತ್ರೆ
ರಾಮನವಮಿ ದಿನವಾದ ಇಂದು(ಏ.೧೭) ಬೆಳಿಗ್ಗೆ ದೇವರು ರಥಾರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಸಂಜೆ ಸಹಸ್ರಕ್ಕೂ ಅಧಿಕ ಭಕ್ತರ ಹರ್ಷೋದ್ಘಾರಗಳ ನಡುವೆ ರಾಮಭಕ್ತನ ಹನುಮನ ರಥೋತ್ಸವ ಜರುಗಿತು. ಅದಕ್ಕೂ ಮುನ್ನ ಸಂಪ್ರದಾಯದಂತೆ ಜೈನ ಹಾಗು ಮುಸ್ಲಿಂ ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ : ತಿಂಗಳ ಬೆಳಕು – ಹಿರಿಯ ಸಾಹಿತಿ ವಿ.ಗ.ನಾಯಕರ ವಿಮರ್ಶೆ
ಸಹಸ್ರಾರು ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥವನ್ನ ಕಂಡು ಭಕ್ತರು ಪುನೀತರಾದರು. ದೇವರಿಗೆ ನಿಂತಲ್ಲಿಯೇ ಕೈಮುಗಿದು ನಮಸ್ಕರಿಸಿದರು. ಬ್ರಹ್ಮರಥವನ್ನ ಹೂವಿನ ಪೇಟೆ, ಮುಖ್ಯ ರಸ್ತೆ ಮಾರ್ಗ, ರಥಬೀದಿಯ ಮೂಲಕ ದೇವಾಲಯದ ಮುಂಭಾಗದವರೆಗೂ ಎಳೆಯಲಾಯಿತು. ಜಾತ್ರೆಯಲ್ಲಿ ಪಾಲ್ಗೊಳ್ಳುವ ಸಹಸ್ರಾರು ಸಂಖ್ಯೆಯ ಭಕ್ತರು ರಥವನ್ನ ಎಳೆದು ಪುನೀತರಾಗುವರದ ಜೊತೆಗೆ ಉತ್ಸಾಹದಿಂದ ಪಾಲ್ಗೊಂಡರು. ವಾದ್ಯಗೊಷ್ಟಿ, ತಟ್ಟಿರಾಯ, ಹುಲಿವೇಷ, ಚಂಡೆವಾದ್ಯ ಹಾಗೂ ಕೇರಳ ಶೈಲಿಯ ಕೆಲ ಗೊಂಬೆಗಳು ಬ್ರಹ್ಮರಥೋತ್ಸವಕ್ಕೆ ಮೆರುಗು ತಂದವು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು. ಹೆಚ್ಚುವರಿ ಎಸ್ಪಿ ಸಿ.ಟಿ.ಜಯಕುಮಾರ್ ಮೆರವಣಿಗೆಯುದ್ದಕ್ಕೂ ಹಾಜರಿದ್ದು, ಬಂದೋಬಸ್ತ್ ನೇತೃತ್ವ ವಹಿಸಿದ್ದರು.
ಸೌಹಾರ್ದತೆಗೆ ಸಾಕ್ಷಿ:
ಪ್ರತಿವರ್ಷ ರಾಮನವಮಿಯಂದು ಜರುಗುವ ಜಾತ್ರೆಯಲ್ಲಿ ಪರಸ್ಪರ ಸೌಹಾರ್ಧತೆಗೆ ಭಟ್ಕಳ ರಥೋತ್ಸವ ಪ್ರಮುಖವಾದದ್ದು. ಬುಧವಾರ ಸಂಜೆ ದೇವರ ಬ್ರಹ್ಮರಥೋತ್ಸವಕ್ಕೂ ಮುನ್ನ ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯವರು ವಾದ್ಯಘೋಷಗಳ ಮೂಲಕ ತೆರಳಿ ಮುಸ್ಲಿಂ ಸಮುದಾಯದ ಚರ್ಕಿನ್, ಜೈನ ಹಾಗೂ ಪ್ರಭು ಕುಟುಂಬಕ್ಕೆ ವೀಳ್ಯ ಸಮೇತ ಆಹ್ವಾನ ನೀಡಿದರು. ಆ ಬಳಿಕ ರಥದಲ್ಲಿ ಹನುಮಂತ ವಿರಾಜಮಾನರಾಗಿ ಕುಳಿತು ಪೂಜಾ ವಿಧಿ ವಿಧಾನದ ನಂತರ ಸಹಸ್ರಾರು ಭಕ್ತರು ಜೈ ಶ್ರೀ ರಾಮ ಘೋಷಣೆ ಕೂಗುತ್ತಾ ರಥವನ್ನು ಎಳೆದು ಹನುಮಂತನ ಸವಾರಿಯ ಮೂಲಕ ರಥೋತ್ಸವ ನಡೆಯಿತು. ಎಲ್ಲ ಧರ್ಮದವರೂ ಪಾಲ್ಗೊಳ್ಳುವುದು ಭಟ್ಕಳ ಜಾತ್ರೆಯ ವಿಶೇಷವಾಗಿದೆ.