ಭಟ್ಕಳ : ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ಭಗವಾಧ್ವಜ ಹಾರಾಡುತ್ತಿದೆ. ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ ಸಮ್ಮುಖದಲ್ಲಿ ಇಂದು (ಮಾ.೪) ಬಿಜೆಪಿ ಕಾರ್ಯಕರ್ತರು ತಾಲೂಕಾಡಳಿ ಧ್ವಜ ತೆರವುಗೊಳಿಸಿದ್ದ ಪ್ರದೇಶದಲ್ಲಿ ಹನುಮನ ಚಿತ್ರವಿರು ಭಗವಾದ್ವಜ (ಹನುಮಧ್ವಜ) ಆರೋಹಣ ಮಾಡಿಸಿದ್ದಾರೆ.
ಈ ವಿಡಿಯೋ ನೋಡಿ : ತೆಂಗಿನಗುಂಡಿಯಲ್ಲಿ ಹಾರಾಡಿದ ಭಗವಾಧ್ವಜ https://www.facebook.com/share/r/GjiW3TtUXbH5sF4p/?mibextid=oFDknk
ಭಟ್ಕಳದಲ್ಲಿ ಮತ್ತೆ ಧ್ಬಜದಂಗಲ್ ನಡೆಯುವ ಲಕ್ಷಣ ಗೋಚರಿಸಿದ್ದು, ತಾಲೂಕಾಡಳಿತಕ್ಕೆ ನೀಡಿದ ಗಡುವು ಮುಗಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಧ್ವಜ ಆರೋಹಣ ಮಾಡಿಸಿದ್ದಾರೆ. ಅಲ್ಲದೇ ಧ್ವಜದ ಕಟ್ಟೆಯ ಮೇಲೆ ವೀರ ಸಾವರ್ಕರ್ ಬೀಚ್ ಎಂಬ ನಾಮಫಲಕ ಅಳವಡಿಸಿದ್ದಾರೆ.
ಪ್ರಕರಣವೇನು?
ಜನವರಿ ೨೭ ಶನಿವಾರದಂದು ತಾಲೂಕಿನ ತೆಂಗಿನಗುಂಡಿ ಬಂದರು ಸಮೀಪ ತೆಂಗಿನಗುಂಡಿ ಬೀಚ್ ಬಳಿ ಸಾವರ್ಕರ್ ಬೀಚ್ ಎಂದು ಬರೆದ ಬೋರ್ಡನ್ನು ನಿಲ್ಲಿಸಿ ಅದೇ ಕಂಬಕ್ಕೆ ಕೇಸರಿ ಬಟ್ಟೆಯನ್ನು ಸುತ್ತಿ ಭಗವಾದ್ವಜವನ್ನು ಹಾಕಲಾಗಿತ್ತು. ಈ ವಿಷಯವು ಹೆಬಳೆ ಪಂಚಾಯತ ಪಿ.ಡಿ.ಒ. ಅವರಿಗೆ ತಿಳಿದು ಅವರು ಸರಕಾರಿ ರಜೆಯ ಮಧ್ಯೆಯೂ ಪೊಲೀಸ್ ಬಂದೋಬಸ್ತನಲ್ಲಿ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಹಾಕಲಾದ ಬೋರ್ಡ್, ಭಗವಾ ಧ್ವಜ ಕಟ್ಟೆಯನ್ನು ತೆರವುಗೊಳಿಸಿದ್ದರು. ಆ ಬಳಿಕ ಜ.೩೦ ಮಂಗಳವಾರದಂದು ಈ ವಿಚಾರವನ್ನು ಪ್ರಶ್ನಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಹಿಂದು ಕಾರ್ಯಕರ್ತರ ಆರೋಪವೇನು?
ಜನವರಿ 24 ರಂದು ಹೆಬಳೆ ಗ್ರಾಮ ಪಂಚಾಯತ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಅರ್ಜಿಯಂತೆ ಅನಧಿಕೃತವಾಗಿರುವ ನಾಮಫಲಕವನ್ನು ತೆರವುಗೊಳಿಸಿ ಎಂಬುದಾಗಿ ಬಂದ ದೂರಿನ ಅರ್ಜಿಯನ್ನು ಚರ್ಚಿಸಿ ಅತಿ ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸಲು ಅಧ್ಯಕ್ಷರು ಹಾಗೂ ಸದಸ್ಯರು ಪಿಡಿಓಗಳಿಗೆ ಸೂಚಿಸಿದ್ದರು. ಆದರೆ ಪಂಚಾಯತ ಪಿಡಿಓ ಅಧಿಕಾರಿಗಳು ಅಂತಹ ನಾಮಫಲಕ ತೆರವುಗೊಳಿಸದೇ ಏಕಾಏಕಿ ತೆಂಗಿನಗುಂಡಿ ಬೀಚ್ ನಲ್ಲಿ ಹಾಕಲಾದ ನಾಮಫಲಕ ತೆರವಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಿ :
ವೀರ ಸಾವರ್ಕರ ನಾಮಫಲಕ, ಭಗವಾಧ್ವಜ ತೆರವು – ಪಿಡಿಒ ವಿರುದ್ದ ಧರಣಿ ಕುಳಿತ ಪಂಚಾಯತ ಸದಸ್ಯರು
ಭಟ್ಕಳ ಭಗವಾಧ್ವಜ ತೆರವಿನಲ್ಲಿ ಉಸ್ತುವಾರಿ ಸಚಿವರ ಕೈವಾಡ: ಹರಿಪ್ರಕಾಶ್ ಕೋಣೆಮನೆ ಆರೋಪ
ಬಿಜೆಪಿಗೆ ಆಗ ಸಾವರ್ಕರ ಮೇಲೆ ಇಲ್ಲದ ಪ್ರೇಮ ಈಗ ದಿಢೀರ್ ಹೇಗೆ ಬಂತು?
ಈ ವಿಚಾರವಾಗಿ ಹೆಬಳೆ 12 ಸದಸ್ಯರು ಪಿಡಿಓ ಅಧಿಕಾರಿಗಳ ಬಳಿ ಮಂಗಳವಾರದಂದು ಬಿಜೆಪಿ ಮಂಡಲ ಅಧ್ಯಕ್ಷ ಮತ್ತು ಹೆಬಳೆ ಪಂಚಾಯತ ಸದಸ್ಯ ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಪಂಚಾಯತ್ ಎದುರು ಪಿಡಿಓ ಕ್ರಮದ ವಿರುದ್ದ ಧರಣಿ ಕುಳಿತಿದ್ದರು.
ಸತತ 2 ಗಂಟೆಗಳ ಕಾಲ ಧರಣಿ ಕುಳಿತಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಸಂಜೆ 4 ಗಂಟೆಯ ತನಕ ಧರಣಿ ನಡೆಸಿದ ಸದಸ್ಯರು ಆ ಬಳಿಕ ತೆಂಗಿನಗುಂಡಿ ಬೀಚ್ ಬಳಿ ತೆರವು ಮಾಡಿದ್ದ ಧ್ವಜ ಸ್ಥಂಭದ ಕಟ್ಟೆಯನ್ನು ಸಾರ್ವಜನಿಕರು ಹಾಗೂ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಪುನಃ ನಿರ್ಮಿಸಿದ್ದರು.
ಸ್ಥಳಕ್ಕೆ ಬಂದ ತಹಸೀಲ್ದಾರ ತಿಪ್ಪೇಸ್ವಾಮಿ ಅವರು ಪ್ರತಿಭಟನಾಕಾರರ ಜೊತೆಗೆ ಚರ್ಚಿಸಿದರು. ಈ ವೇಳೆ ಹೆಬಳೆ ಗ್ರಾಮ ಪಂಚಾಯತಿ ಸಭೆಯಲ್ಲಿ ತೀರ್ಮಾನಿಸಿದಂತೆ ಅನಧಿಕೃತ ನಾಮಫಲಕ ತೆರವಿಗೆ 15 ದಿನದ ಕಾಲಾವಕಾಶ ನೀಡಿದ್ದರು. ನಂತರ ಅವೆಲ್ಲವು ಖುಲ್ಲಾ ಆದ ಬಳಿಕ ವೀರ ಸಾವರ್ಕರ ಬೀಚನ ಕಟ್ಟೆ ಮತ್ತು ನಾಮ ಫಲಕದ ವಿಚಾರ ಮುಂದುವರೆಯಬೇಕು. ಈ ಕುರಿತಾಗಿ ಪಂಚಾಯತನಿಂದ ಪರವಾನಿಗೆ ಪಡೆಯುವ ಸಂಬಂಧ ಸದಸ್ಯರು ಮುಂದುವರೆಯಲಿದ್ದೇವೆ ಎಂದು ತಹಸೀಲ್ದಾರ ಅವರಿಗೆ ಪಂಚಾಯತ ಸದಸ್ಯ, ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಹೇಳಿದ್ದರು. ಇದೇ ವೇಳೆ ಪ್ರತಿಭಟನಾಕಾರರು ಧ್ವಜ ಕಟ್ಟೆ ಪುನಃ ನಿರ್ಮಿಸಿದರು.
ನಂತರ ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಮಾತನಾಡಿ ‘ ಉಳಿದೆಲ್ಲ ಅನಧೀಕ್ರತ ನಾಮಫಲಕ ತೆರವು ಮಾಡಿ ಖುಲ್ಲಾ ಆಗುವ ತನಕ ಈಗ ನಿರ್ಮಿಸಲಾದ ಧ್ವಜ ಕಟ್ಟೆಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. 15 ದಿನದ ಮುಂಚಿತವಾಗಿ ನೋಟಿಸ್ ನೀಡಿ ತೆರವು ಮಾಡಬೇಕಾಗಿದ್ದ ಪಿಡಿಓ ಅಧಿಕಾರಿಗಳು ಏಕಾಏಕಿ ತೆರವು ಮಾಡಿರುವುದು ಅಪರಾಧ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಈಗಾಗಲೇ ರಾಜ್ಯದಲ್ಲಿ ಕೇಸರಿ ಧ್ವಜ ಹಾಗೂ ಭಗವಾ ಧ್ವಜ ಕಂಡರೆ ಅವರಿಗೆ ಮೈಯೆಲ್ಲ ಉರಿಯುತ್ತದೆ. ಇದರ ಹಿನ್ನೆಲೆ ಮಂಡ್ಯದಲ್ಲಿಯೂ ಸಹ ಪರಿಸ್ಥಿತಿ ದೊಡ್ಡದಾಗಿದೆ. ಅದರಂತೆ ಭಟ್ಕಳದಂತಹ ಸೂಕ್ಷ್ಮ ಪ್ರದೇಶದಲ್ಲಿ ಈ ರೀತಿಯ ಘಟನೆಗೆ ಅಧಿಕಾರಿಗಳು ದಾರಿ ಮಾಡಿಕೊಡದೇ ಪಂಚಾಯತ್ ಸಭೆಯಲ್ಲಿ ತೀರ್ಮಾನವಾದಂತೆ ಅನಧಿಕೃತವಾಗಿ ನಾಮ ಫಲಕ 15 ದಿನದೊಳಗಾಗಿ ತೆರವಾಗಿದ್ದಲ್ಲಿ ತೆಂಗಿನಗುಂಡಿ ಬೀಚ ಬಳಿಯಲ್ಲಿ ವೀರ ಸಾವರ್ಕರ ಬೀಚ್ ಮತ್ತು ಭಗವಾ ಧ್ವಜವನ್ನು ಹಾಕಲಾಗುವುದು. ಇದನ್ನು ತಡೆಯುವವರು ಮುಂದೆ ಬರಲಿ ಎಂದು ಎಚ್ಚರಿಸಿದ್ದರು.