ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದಿಂದ ಯಾವುದೇ ಜನಪರ ಅಭಿವೃದ್ಧಿ ಕಾರ್ಯ ಅಗತಾ ಇಲ್ಲ. ನಾನು ಈ ಸಲ ಜನರ ಸಲುವಾಗಿ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಂಜುನಾಥ ಸಿ. ಕುನ್ನೂರ ಹೇಳಿದರು.

ಇದನ್ನೂ ಓದಿ : ಸಚಿವ ಜೋಶಿ ವಿರುದ್ಧ ಏ.೨ರಂದು ಸಭೆ : ದಿಂಗಾಲೇಶ್ವರ ಶ್ರೀ

ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧಾರವಾಡ ಲೋಕಸಭೆ ಟಿಕೇಟಿಗಾಗಿ ಅರ್ಜಿ ಹಾಕಿದ್ದೆ. ಆದರೆ ನನಗೆ ಅನ್ಯಾಯವಾಗಿದೆ ಎಂದು ಕೆಲವು ಹಿತೈಷಿಗಳು ಹಾಗೂ ಸ್ನೇಹಿತರು ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ. ನಾನು ಸಹ ಆತ್ಮಾವಲೋಕನ ಮಾಡಿಕೊಂಡೆ. ರಾಜಕೀಯ ಜೀವನದಲ್ಲಿ ಬೆಳೆದು ಬಂದಿರುವ ನಾನು ಈ ಬಾರಿ ಸ್ಪರ್ಧಿಸಬೇಕೆಂಬ ಇಚ್ಛೆ ಹೊಂದಿದ್ದೇನೆ ಎಂದರು.

ನೈಜ ಮತ್ತು ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಇಂದು ಕಾಂಗ್ರೆಸ್ಸಿನಲ್ಲಿ ಕುಟುಂಬ ರಾಜಕಾರಣ ಮಿತಿಮೀರಿದೆ. ಹಣಬಲ, ತೋಳ್ಳಲ ಹಾಗೂ ಪ್ರಭಾವ ರಾಜಕಾರಣ ಸಹ ಮಿತಿಮೀರಿದೆ. ಹಿರಿತನ ರಾಜಕಾರಣಕ್ಕೆ ಬೆಲೆ ಇಲ್ಲವಾಗಿದೆ. ಹೊಂದಾಣಿಕೆ ರಾಜಕಾರಣ ಸಹ ಇಂದಿನ ಚುನಾವಣೆಗಳಲ್ಲಿ ಹೆಚ್ಚಿದೆ. ಇದರಿಂದ ಮನನೊಂದು ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂದು ತೀರ್ಮಾನಿಸಿದ್ದೇನೆ ಎಂದು ಹೇಳಿದರು.

ಇದು ನನ್ನ ಕೊನೆಯ ಚುನಾವಣೆ. ಕಾರಣ ನನ್ನ ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ಚರ್ಚಿಸಿದ್ದೇನೆ. ಅವರು ಈ ಬಗ್ಗೆ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಾನು ಈ ಹಿಂದೆ ಹಾವೇರಿ ಲೋಕಸಭಾ ಕ್ಷೇತ್ರದ ಸಂಸತ್ ಸದಸ್ಯನಾಗಿದ್ದ ಅವಧಿಯಲ್ಲಿ ಶಿಗ್ಗಾಂವಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರ ನನ್ನ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದವು. ಅವುಗಳ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ್ದೇನೆ. ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಜನರೊಟ್ಟಿಗೆ ಭಾವನಾತ್ಮಕವಾದ ಒಡನಾಟ ಹೊಂದಿದ್ದೇನೆ ಎಂದರು.
ಪ್ರಸ್ತುತ ರಾಜಿಕೀಯ ವಿದ್ಯಮಾನಗಳನ್ನು ಅವಲೋಕಿಸಿದಾಗ ಈ ದೇಶದಲ್ಲಿ ಭಾರತೀಯ ಜನತಾ ಪಕ್ಷ ಹಾಗೂ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಉಭಯ ಪಕ್ಷಗಳೆರಡು ರಾಷ್ಟ್ರೀಯ ಪಕ್ಷಗಳಾಗಿ ಹೊರಹೊಮ್ಮಿವೆ. ಈ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಆ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಶ್ರಮಿಸದೆ ಜನರಿಗೆ ಸಮರ್ಪಕವಾಗಿ ಸ್ಪಂದಿಸದಿದ್ದಾಗ ಅನಿವಾರ್ಯವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಹೊಸ ಸದಸ್ಯರನ್ನು ಆಯ್ಕೆ ಮಾಡುವುದು ಸಹಜವಾಗಿದೆ. ಈ ಸಂದರ್ಭದಲ್ಲಿ ನಾನು ಜನರ ಒತ್ತಾಸೆ ಮೇರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ತೀರ್ಮಾನ ಮಾಡಿದ್ದೇನೆ ಎಂದರು.

‌ ನಾನು ಸಂಸದನಾಗಿದ್ದ ಅವಧಿಯಲ್ಲಿ ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ನಾಡಿನ ಜನರ ಮೆಚ್ಚುಗೆ ಗಳಿಸಿತ್ತು.
ಸಂಸತ್ತಿನಲ್ಲಿ ಪ್ರಸ್ತಾಪಿಸುವ ಮೂಲಕ ಬಸವೇಶ್ವರ ನಾಣ್ಯ ಬಿಡುಗಡೆಗೊಳಿಸಲಾಗಿತ್ತು. ಕನ್ನಡದ ಅಸ್ಥಿತೆಗಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನವನ್ನು ನೀಡಬೇಕೆನ್ನುವ ಮುಂಚೂಣಿ ಹೋರಾಟವನ್ನು ಪ್ರಾರಂಭಿಸಿದ್ದೆ. ಸಂಸತ್ತಿನಲ್ಲಿ ಹಲವಾರು ಬಾರಿ ಪ್ರಸ್ತಾಪಿಸುವ ಮೂಲಕ ಧರಣಿ ಕೈಗೊಳ್ಳಲಾಗಿತ್ತು. ಇದಕ್ಕೆ ಕೈಜೋಡಿಸಿದ ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳು ಕೈಗೊಂಡ ಹೋರಾಟದ ಫಲವಾಗಿ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಒದಗಿ ಬಂದಿತು. ಇದರ ಜೊತೆಗೆ ತೊಂಬತ್ತರ ದಶಕದಲ್ಲೇ ವಿಧಾನಸಭೆಯಲ್ಲಿ ನಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಾ ಹಾವೇರಿ ಸ್ವತಂತ್ರ ಜಿಲ್ಲೆಯಾಗುವುದು, ಶಿಗ್ಗಾಂವಿ ತಾಲೂಕನ್ನು ಹಾವೇರಿ ಜಿಲ್ಲೆಗೆ ಸೇರಿಸುವುದು ಹಾಗೂ ತುಂಗಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವುದು ಸೇರಿದಂತೆ ಹತ್ತಾರು ಹೋರಾಟಗಳ ಮೂಲಕ ಗಮನ ಸೆಳೆಯಲಾಗಿದೆ. ನೀರಾವರಿಯಲ್ಲಿ ವಿಶೇಷವಾಗಿ ಆಸಕ್ತಿ ವಹಿಸಿ ಬೇಡ್ತಿ ವರದಾ ನದಿ ಜೋಡಣೆ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಿಗೆ ನೀರು ಒದಗಿಸುವಂತೆ ಹೋರಾಟ ಕೈಗೊಳ್ಳಲಾಯಿತು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಪತ್ರ ಬರೆದು ಗಮನ ಸೆಳೆಯಲಾಗಿತ್ತು. ಕಳಸಾ ಬಂಡೂರಿ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದು, ಮಹದಾಯಿಂದ ಮಲಪ್ರಭೆ ನದಿಗೆ ನೀರು ಹಾಯಿಸಿ ವಿಶೇಷವಾಗಿ ಹುಬ್ಬಳ್ಳಿ ಧಾರವಾಡ ನಗರಗಳಿಗೆ ಕುಡಿಯುವ ನೀರು ಒದಗಿಸಬೇಕೆಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಜನರ ಸಮಸ್ಯೆ ಬಗೆಗೆ ಮನವರಿಕೆ ಮಾಡಲಾಯಿತು. ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಆಡಳಿತ ವರ್ಗದ ಗಮನ ಸೆಳೆಯಲಾಗಿತ್ತು ಎಂದು ಮಂಜುನಾಥ ಕುನ್ನೂರು ಹೇಳಿದರು.