ಕುಮಟಾ: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕುಮಟಾದ ಕಾರ್ಯನಿರತ ಪತ್ರಕರ್ತರ ಸಂಘದಿಂದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶಿರಸಿಯ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಮಂಡಳಿ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪತ್ರಿಕೆಗಳು ಪತ್ರಿಕೋದ್ಯಮವಾದ ನಂತರ ಪತ್ರಿಕೆಗಳ ವಿಶ್ವಾಸಾರ್ಹತೆ ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ವಿಷಾದಿಸಿದರು.
ಇದನ್ನೂ ಓದಿ : ಹೆಂಡತಿ ಹೆರಿಗೆಯಾದ ಆಸ್ಪತ್ರೆಗೆ ೧೫ ಸೀಲಿಂಗ್ ಫ್ಯಾನ್ ಉಡುಗೊರೆ
ಇಂದು ಪತ್ರಿಕೆಗಳನ್ನು ಒದುತ್ತಿರುವವರು ವಯಸ್ಸಾದವರೇ ಹೊರತು, ಯುವ ಸಮುದಾಯ ಪತ್ರಿಕೆ ಓದುವುದರಿಂದ ದೂರ ಸರಿದಿರುವುದು ಬೇಸರದ ಸಂಗತಿ. ಇದು ಪತ್ರಿಕೆಗಳು ಹಳಿ ತಪ್ಪಿರುವುದನ್ನು ಸೂಚಿಸುತ್ತದೆ. ನಮಗೆ ಇತಿಗಾಸ ಗೊತ್ತಿಲ್ಲದಿದ್ದರೆ ನಮ್ಮ ಬಾಳು ಶೂನ್ಯ. ಪತ್ರಿಕೆಗಳು ಅನೇಕ ಇತಿಹಾಸವನ್ನು ಓದುಗರಿಗೆ ನೀಡುತ್ತವೆ. ಪತ್ರಿಕೆ ಓದುವುದರಲ್ಲಿ ಒಂದು ರೀತಿಯ ಥ್ರಿಲ್ ಇದೆ. ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದರೆ ನಿತ್ಯವೂ ಪತ್ರಿಕೆಗಳನ್ನು ಓದಬೇಕು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಹೇಳಿದರು.
ಸ್ಥಳೀಯ ಸರಸ್ವತಿ ಪಿಯು ಕಾಲೇಜಿನ ಉಪನ್ಯಾಸಕ ಚಿದಾನಂದ ಭಂಡಾರಿ “ಸಮಾಜವನ್ನು ಒಳಗೊಂಡಂತೆ ಮಾಧ್ಯಮ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ನಮ್ಮ ಜೀವನ ರಕ್ಷಣೆಗೆ ಸಮಾಜ ಬೇಕು. ಚಂದದ ಸಮಾಜದಲ್ಲಿನ ವಿಕೃತಿಯನ್ನು ಹೊರತೆಗೆಯಲು ಪತ್ರಿಕೆಗಳು ಬೇಕೇ ಬೇಕು. ಎಲ್ಲವನ್ನೂ ಸಮತೋಲನದಲ್ಲಿ ನಿಯಂತ್ರಿಸುವ ಪತ್ರಿಕೆಗಳು ಇಂದು ಉದ್ಯಮವಾಗಿ ಬದಲಾಗಿದೆ. ಇದರಿಂದ ನಮ್ಮ ಭಾಗದಲ್ಲಿ ದೊಡ್ಡ ಹಾಗೂ ಸಕಲ ವ್ಯವಸ್ಥೆಯನ್ನು ಒಳಗೊಂಡ ಆಸ್ಪತ್ರೆ ನಿರ್ಮಿಸಲು ನಮ್ಮಲ್ಲಿ ಎಲ್ಲಾ ವ್ಯವಸ್ಥೆಗಳಿದ್ದರೂ ಅದರ ಕುರಿತು ಕ್ಷಕಿರಣ ಬೀರಬೇಕಾದ ವ್ಯವಸ್ಥೆ ನಮ್ಮಲ್ಲಿರದಿರುವುದು ವಿಷಾದದ ಸಂಗತಿ ಎಂದರು.
ಸುಂದರ ಸಮಾಜದ ನಿರ್ಮಾಣಕ್ಕಾಗಿ ಕೆಲಸ ಮಾಡುವ ಪತ್ರಿಕೆ ಮತ್ತು ಪತ್ರಕರ್ತನನ್ನು ನಾವೆಷ್ಟು ಬಲಗೊಳಿಸಿದ್ದೇವೆ ಎಂಬ ಪ್ರಶ್ನೆಯನ್ನು ಈ ಸಮಾದಲ್ಲಿರುವ ನಾವೆಲ್ಲರೂ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಸಮಾಜದ ಒಳಿತಿಗಾಗಿ ಶಾಸಕ, ಸಂಸದರಿಗಿಂತ ಹೆಚ್ಚು ಕೆಲಸ ಮಾಡುವ ಪತ್ರಕರ್ತರಿಗೆ ಸರ್ಕಾರ ಎಲ್ಲಾ ರೀತಿಯ ಭದ್ರತೆಯನ್ನು ಒದಗಿಸಬೇಕು. ಮುಂದಿನ ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ದಿನದ ೧ ಗಂಟೆಯಾದರೂ ಪತ್ರಿಕೆಗಳನ್ನು ಓದುವಂತೆ ವಿದ್ಯಾರ್ಥಿಗಳಿಗೆ ಚಿದಾನಂದ ಭಂಡಾರಿ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಪ್ರಾಚಾರ್ಯೆ ವಿಜಯಾ ನಾಯ್ಕ ಮಾತನಾಡುತ್ತ, ಮೊಬೈಲ್ ಪೋನ್ಗಳು ನಮ್ಮನ್ನು ಆಳುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಕೇಳುವ ಮನಸ್ಥಿತಿ ಮಾಯವಾಗಿದೆ. ಇಂತಹ ಸ್ಥಿತಿಯಲ್ಲಿರುವ ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಎಂಬುದನ್ನು ನಾವು ತುರುಕಬೇಕಾಗಿದೆ ಎಂದರು.
ಒಬ್ಬ ಭ್ರಷ್ಟ ಪತ್ರಕರ್ತ ನೂರು ಭಯೋತ್ಪಾದಕನಿಗೆ ಸಮ ಎಂದು ಡಾ. ಅಂಬೇಡ್ಕರ ಹೇಳಿರುವುದನ್ನು ಉಲ್ಲೇಖಿಸಿದ ಪ್ರಾಚಾರ್ಯೆ ವಿಜಯಾ ನಾಯ್ಕ, ಇಂದು ಪ್ರಾಮಾಣಿಕತೆ ಎಲ್ಲಿದೆ ಎಂಬುದನ್ನು ಹುಡುಕಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ಪತ್ರಿಕಾರಂಗಕ್ಕಿಂತ ಶಿಕ್ಷಣ ರಂಗ ಶ್ರೇಷ್ಠ ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ಪತ್ರಿಕೋಧ್ಯಮ ಎಂಬುದು ಪತ್ರಿಕಾಧರ್ಮವಾಗಿ ಪರಿವರ್ತನೆಗೊಳ್ಳಲಿ ಎಂದು ವಿಜಯಾ ನಾಯ್ಕ ಅಶಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಮಾತನಾಡಿ, ನ್ಯಾಯಾಂಗವನ್ನು ಹೊರತುಪಡಿಸಿ ನಮ್ಮ ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲಾ ವ್ಯವಸ್ಥೆಯನ್ನು ರಾಜಕೀಯಸ್ಥರು ಭ್ರಷ್ಟವಾಗಿಸಿದ್ದಾರೆ. ಹಾಗಾಗಿ ನ್ಯಾಯಾಂಗ ಭ್ರಷ್ಟವಾಗದಂತೆ ನೋಡಿಕೊಳ್ಳಲು ಪತ್ರಕರ್ತರು, ವಿದ್ಯಾರ್ಥಿಗಳು ಸದಾ ಜಾಗೃತರಾಗಿರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಮಟಾದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬೇಡಿಕೆಗಷ್ಟೇ ಪ್ರತಿಭಟಿಸದೆ, ಸಮಾಜದಲ್ಲಿನ ಎಲ್ಲಾ ಸಮಸ್ಯೆಯ ನಿವಾರಣೆಗೂ ಪ್ರತಿಭಟನೆ ನಡೆಸಬೇಕು. ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸಮಾಜದ ಹಿತಕ್ಕಾಗಿ ಜಾಗೃತರಾಗಿದ್ದರೆ ಪತ್ರಿಕಾರಂಗ ಸೇರಿದಂತೆ ಎಲ್ಲವು ಬಲಿಷ್ಠವಾಗಿರುವುದು ಎಂದರು.
ಪತ್ರಕರ್ತರ ಸಂಘದಿಂದ ಹಮ್ಮಿಕೊಂಡ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಸರಸ್ವತಿ ಪಿಯು ಕಾಲೇಜಿನ ಪ್ರಾಂಶುಪಾಲ ಕಿರಣ ಭಟ್ಟ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಭಾವನಾ ಪ್ರಾರ್ಥನೆ ಹಾಡಿದರು. ಸಂಘದ ಉಪಾಧ್ಯಕ್ಷ ಜಯದೇವ ಬಳಗಂಡಿ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಜೋಶಿ ನಿರೂಪಿಸಿದರು. ಸಂಘದ ಸದಸ್ಯ ಚರಣ ನಾಯ್ಕ ವಂದಿಸಿದರು.