ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿ
ಭಟ್ಕಳ: ತಾಲ್ಲೂಕಿನ ಶಕ್ತಿಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕ್ಷೇತ್ರ ದೇವಿಮನೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ವರ್ಧಂತ್ಯುತ್ಸವ, ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಅನ್ನಪೂರ್ಣೇಶ್ವರಿ ಭೋಜನಾಲಯ ಹಾಗೂ ಶ್ರೀ ದುರ್ಗಾಪರಮೇಶ್ವರಿ ಸಭಾಭವನದ ಲೋಕಾರ್ಪಣೆ ಮತ್ತು ರಥೋತ್ಸವ ಫೆ.೧೭ರಿಂದ ೧೯ರವರೆಗೆ ಶ್ರೀರಾಮಚಂದ್ರಾಪುರ ಮಠದ ಶ್ರೀ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ದೇವಸ್ಥಾನದ ಅಧ್ಯಕ್ಷ ಶಿವಾನಂದ ಹೆಬ್ಬಾರ ಮುಲ್ಲೆಮಕ್ಕಿ ಮಾಹಿತಿ ನೀಡಿದರು. ಬ್ರಹ್ಮಕಲಶೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಫೆ.೧೬ರಿಂದಲೇ ಆರಂಭಗೊಳ್ಳಲಿದೆ. ಫೆ. ೧೭ ರಂದು ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ ೩ ಗಂಟೆಗೆ ರಾಘವೇಶ್ವರ ಶ್ರೀಗಳು ಆಗಮಿಸಲಿದ್ದು, ಅವರಿಗೆ ಪೂರ್ಣಕುಂಭದ ಸ್ವಾಗತ ನೀಡಲಾಗುತ್ತದೆ. ಸಂಜೆ ೬ ಗಂಟೆಯಿಂದ ಯಾಗಶಾಲಾ ಪ್ರವೇಶ, ಸಹಸ್ರಾಧಿಕ ಬ್ರಹ್ಮಕಲಶ ಸ್ಥಾಪನೆ, ಕುಂಭೇಶ ಪೂಜೆ, ಸ್ವರ್ಣಲೇಪಿತ ಶಿಖರ ಕಲಶ ಮತ್ತು ರಜತ ಉತ್ಸವ ಮೂರ್ತಿಯ ಆದಿವಾಸಪೂಜೆ, ಸಂಜೆ ೬.೩೦ಕ್ಕೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ ೫ ಗಂಟೆಗೆ ಸಭಾ ಕಾರ್ಯಕ್ರಮವನ್ನು ರಾಜ್ಯದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದೇವಿಮನೆ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶಿವಾನಂದ ಹೆಬ್ಬಾರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಅನಂತಕುಮಾರ ಹೆಗಡೆ, ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಎಂ ಗೊಂಡ, ಮಾಜಿ ಶಾಸಕ ಸುನೀಲ ನಾಯ್ಕ, ರಾಮಚಂದ್ರಾಪುರ ಮಠದ ಮಹಾಮಂಡಲದ ಅಧ್ಯಕ್ಷ ಮೋಹನ ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್ ಜಿ ಹೆಗಡೆ, ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಎಂ ಭಟ್ಟ ತೆಕ್ನಗದ್ದೆ, ದೇವಿಮನೆ ಬ್ರಹ್ಮಕಲಶೋತ್ಸವದ ಅಧ್ಯಕ್ಷ ವಿನಾಯಕ ಆರ್ ಭಟ್ಟ ಉಪಸ್ಥಿತರಿರಲಿದ್ದಾರೆ. ರಾತ್ರಿ ಅನ್ನಸಂತರ್ಪಣೆ ಮತ್ತು ೮ ಗಂಟೆಯಿಂದ ಸಶಿವಶಾಂತಿಕಾ ಯಕ್ಷಗಾನ ಬಳಗದವರಿಂದ ಅತಿಥಿಕಲಾವಿದರ ಕೂಡುವಿಕೆಯಲ್ಲಿ ಲವ-ಕುಶ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಫೆ. ೧೮ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ನಂತರ ಸ್ವರ್ಣಲೇಪಿತ ಶಿಖರ ಕಲಶ ಪ್ರತಿಷ್ಠೆ, ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಶ್ರೀದೇವರಿಗೆ ಬ್ರಹ್ಮಕಲಷಾಭಿಷೇಕ, ರಥೋತ್ಸವ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ೨ ಗಂಟೆಗೆ ರಾಘವೇಶ್ವರ ಶ್ರೀಗಳಿಂದ ಧರ್ಮಸಭೆ, ಆಶೀರ್ವಚನ, ಅನುಗ್ರಹ ಮಂತ್ರಾಕ್ಷತೆ ನಡೆಯಲಿದೆ. ಸಂಜೆ ಮಹಾರುದ್ರಹವನ-ಪಂಚದುರ್ಗಾ ಹವನದ ಅಂಗವಾಗಿ ಕಲಶಸ್ಥಾಪನೆ, ರುದ್ರಾಕ್ರಮಾರ್ಚನೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆ ೫ ಗಂಟೆಗೆ ಶ್ರೀ ರಕ್ಷಾ ಗಜಾನನ ಹೆಬ್ಬಾರ ಇವರಿಂದ ತಬಲಾ ಸೋಲೋ, ೫.೩೦ಕ್ಕೆ ಶಿರಸಿಯ ನಾಟ್ಯದೀಪ ಕಲ್ಚರಲ್ ತಂಡದಿಂದ ಭರತನಾಟ್ಯ ರೂಪಕ ನೃತ್ಯ, ಸಂಜೆ ೭.೩೦ಕ್ಕೆ ತಾನಸೇನ್ ಪ್ರಶಸ್ತಿ ಪುರಸ್ಕೃತ ಪಂಡಿತ ಗಣಪತಿ ಭಟ್ಟ ಹಾಸಣಗಿ ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ರಾತ್ರಿ ೯ ಗಂಟೆಗೆ ಸರಿಗಮ ಖ್ಯಾತಿಯ ಶ್ರೀಹರ್ಷ ತಂಡದವರಿಂದ ನರಹರಿ ದೀಕ್ಷಿತ ಸಾರಥ್ಯದಲ್ಲಿ ಭಕ್ತಿ ಭಾವ ಸಂಗಮ ನಡೆಯಲಿದೆ.
ಇದನ್ನೂ ಓದಿ: ಫೆ.14- 17: ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ
ಫೆ. ೧೯ ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ, ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮಹಾರುದ್ರ ಮತ್ತು ಪಂಚದುರ್ಗಾ ಹವನದ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪೂರ್ಣ ಸದಾಶಿವ ಹೆಗಡೆ, ಶ್ರೀಯಾ ದತ್ತಾತ್ರಯ ಹೆಬ್ಬಾರ ಇವರಿಂದ ಭರತ ನಾಟ್ಯ, ಸಂಜೆ ೬.೩೦ಕ್ಕೆ ಭವತಾರಿಣಿ ವಲಯದ ಮಾತೆಯರ ಭಜನಾ ತಂಡಗಳಿಂದ ಭಜನ್ ಸಂಧ್ಯಾ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಮತ್ತು ಶ್ರೀಗಳ ಕೃಪೆಗೆ ಪಾತ್ರರಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶಿವಾನಂದ ಹೆಬ್ಬಾರ ಮನವಿ ಮಾಡಿದರು. ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಬ್ರಹ್ಮ ಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಮತ್ತು ಭವತಾರಿಣಿ ವಲಯದ ಅಧ್ಯಕ್ಷ ವಿನಾಯಕ ಭಟ್ಟ ತೆಕ್ನಗದ್ದೆ, ಬ್ರಹ್ಮ ಕಲಶೋತ್ಸವದ ಉಪಾಧ್ಯಕ್ಷ ಪರಮೇಶ್ವರ ಭಟ್ಟ, ಎಂ ಎಂ ಹೆಬ್ಬಾರ, ಪ್ರಮೋದ ಜೋಷಿ ಮುಂತಾದವರಿದ್ದರು.