ಭಟ್ಕಳ: ಭಟ್ಕಳದಲ್ಲಿ ತಾಲೂಕಿನ ಕರೂರು ಗ್ರಾಮದ ಸಮೀಪ ಕ್ರಿಸ್ತಪೂರ್ವದ ಅತೀ ದೊಡ್ಡ ಬಂಡೆ ಚಿತ್ರದ ನೆಲೆ ಪತ್ತೆಯಾಗಿದೆ.
ಇದನ್ನೂ ಓದಿ : ಭಟ್ಕಳ ಪುರಸಭೆಯ ನಿರ್ಲಕ್ಷ್ಯ ; ೧೫ ದಿನಗಳಿಂದ ಕುಡಿಯುವ ನೀರು ಪೋಲು
ಶಿಲಾಯುಗದಲ್ಲಿ ಮಾನವ ತನ್ನ ಸಂವಹನಕ್ಕಾಗಿ ಹಾಗೂ ಸಂದೇಶ ಸಾರುವ ಉದ್ದೇಶಕ್ಕೆ ಬಂಡೆಗಳ ಮೇಲೆ ಚಿತ್ರಗಳನ್ನು ಕೆತ್ತುತ್ತಿದ್ದ. ಭಟ್ಕಳದಲ್ಲಿ ಬಂಡೆಗಳ ಬದಲು ನೆಲಹಾಸಿನ ಚೀರೆಕಲ್ಲಿನಲ್ಲಿ ಕೆತ್ತಲಾಗಿದೆ. ಇತಿಹಾಸಕಾರರ ಪ್ರಕಾರ ಇದು ಅಪರೂಪ ಹಾಗೂ ಕೆಲವೇ ಪ್ರದೇಶದಲ್ಲಿ ಕಾಣಬಹುದಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರುಗಳಾದ ಡಾ. ಆರ್. ಎಂ ಷಡಕ್ಷರಯ್ಯ ಹಾಗೂ ಡಾ. ಎಸ್. ಕೆ. ಕಲ್ಲೋಳಿಕರ ಅವರ ಮುಂದಾಳತ್ವದಲ್ಲಿ ಶೋಧಿಸಿದರು. ಈ ಸಂದರ್ಭದಲ್ಲಿ ಮೈಸೂರಿನ ರಾಜ್ಯ ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ವಾಸುದೇವ, ರಾಜ್ಯ ಸರ್ಕಾರದ ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕ ಡಾ. ಆದಿತ್ಯ ಹೆಗಡೆ ಅವರು ಪಾಲ್ಗೊಂಡಿದ್ದರು. ಈ ನೆಲೆಯನ್ನು ಶೋಧಿಸಲು ಸ್ಥಳೀಯ ತಿಮ್ಮಣ್ಣ ಗೊಂಡ ನೆರವಾಗಿದ್ದರು.
ಎಲ್ಲಿವೆ ಈ ಬಂಡೆಗಳು?
ಭಟ್ಕಳ ತಾಲೂಕಿನ ಮುರುಡೇಶ್ವರದಿಂದ ಸುಮಾರು ೬ ಕಿ.ಮೀ ದೂರ ಇರುವ ಕರೂರು ಗ್ರಾಮದಿಂದ ಪೂರ್ವಕ್ಕೆ ೧ ಕಿಲೋ ಮೀಟರ್ ಅಂತರದಲ್ಲಿ ಈ ಬಂಡೆಗಳಿವೆ. ಅರಣ್ಯದ ಮಧ್ಯದಲ್ಲಿರುವ ಜಂಬಿಟ್ಟಿಗೆಯ ಮೇಲೆ ಅಲ್ಲಲ್ಲಿ ಅನೇಕ ಗಿಡಗಂಟಿಗಳಿಂದ ಆವೃತಗೊಂಡಿತ್ತು. ಈ ಸ್ಥಳವನ್ನು ಸ್ಥಳೀಕರು ಬಾರಕೊಲ್ ಬೋಳೆ ಎಂದು ಕರೆಯುತ್ತಾರೆ.
೨೦ ಚಿತ್ರಗಳನ್ನು ಇಲ್ಲಿ ಕಾಣಬಹುದಾಗಿದ್ದು, ಜಂಬಿಟ್ಟಿಗೆ ನೆಲದಲ್ಲಿ ೧೩ ಮೀಟರ್ ಉದ್ದ, ೨೦ ಮೀಟರ್ ಅಗಲದಲ್ಲಿ ಇದನ್ನು ರಚಿಸಲಾಗಿದೆ. ಇಲ್ಲಿರುವ ೨೦ ರೇಖಾ ಚಿತ್ರಗಳನ್ನು ನಾಲ್ಕು ಹಂತದಲ್ಲಿ ವಿಭಾಗಿಸಲಾಗಿದೆ.
೧ನೇ ಗುಂಪಿನ ಚಿತ್ರದಲ್ಲಿ ಜಿಂಕೆ, ಎತ್ತು ಮತ್ತು ಮನುಷ್ಯರ ಚಿತ್ರಗಳು ಪ್ರಮುಖವಾಗಿವೆ. ಮನುಷ್ಯನ ರೇಖಾಚಿತ್ರವು ೧.೬೫ ಮೀಟರ್‌ನಷ್ಟು ಉದ್ದವಾಗಿದ್ದು ೧.೨೫ ಸೆಂ.ಮೀ. ಅಗಲವಾಗಿದೆ. ನಿಂತ ಭಂಗಿಯಲ್ಲಿರುವ ಈ ಮನುಷ್ಯನು ತನ್ನ ಎಡಗೈಯನ್ನು ಸ್ವಲ್ಪ ವಕ್ರವಾಗಿ ಮೇಲಕ್ಕೆ ತನ್ನ ಮುಂದುಗಡೆ ಕತ್ತಿ ಹಿಡಿದಿದ್ದಾನೆ. ತನ್ನ ದುಂಡುಮುಖವನ್ನು ಎತ್ತಿದ ಈ ಕೈ ಕಡೆಗೆ ನೋಡುತ್ತ ನಿಂತಿರುವನು. ಬಲ ಭಾಗದಲ್ಲಿ ಕೈಯನ್ನು ಇಳಿ ಬಿಟ್ಟಿರುವನು. ತನ್ನ ಬಲ ಕೈಗೆ ಹಗ್ಗವನ್ನು ಕಟ್ಟಲಾಗಿದೆ. ಇದು ಆತನ ಬಲಗಡೆ ತೋರಿಸಿದ ಎತ್ತಿನ ಕೊರಳಿಗೆ ಜೋಡಿಸಲಾಗಿದೆ. ಈ ಎತ್ತಿನ ಉದ್ದವು ಸುಮಾರು ೭೫ ಸೆಂ.ಮೀ. ಇದೆ. ಇದಕ್ಕೆ ಎತ್ತರವಾದ ಭುಜವಿದೆ. ಕಾಲಿನ ತುದಿಗಳು ಮೊಂಡಾಗಿವೆ. ದೇಹಾಂಗವು ಉದ್ದವಾಗಿದೆ. ಕಿರು ಬಾಲವಿದೆ. ಈ ಮನುಷ್ಯನ ತಲೆಯ ಮೇಲೆ ಹಾಗೂ ಪಾದದ ಕಡೆಗೆ ಒಂದೊಂದು ವೃತ್ತಾಕಾರದ ತಗ್ಗು ಕುಣಿಗಳನ್ನು ಉದ್ದೇಶಪೂರ್ವಕವಾಗಿ ಕೊರೆಯಲಾಗಿದೆ. ಈತನ ಪಾದದ ಕೆಳಗೆ ಇನ್ನೊಬ್ಬ ಮನುಷ್ಯನ ಚಿತ್ರವಿದೆ. ಆತನು ಬಿಲ್ಲನ್ನು ಪ್ರಯೋಗಿಸುತ್ತಿರುವನು. ದೊಡ್ಡ ಮನುಷ್ಯನ ತಲೆಯ ಮೇಲೆ ಮತ್ತು ಆತನ ಪಾದದ ಹತ್ತಿರ ಗುಂಡಾದ ಆಳವಾದಂಥ ಕುಣಿಗಳಿವೆ. ಮನುಷ್ಯನ ಕೈಗೆ ಕಟ್ಟಿದ ಹಗ್ಗವನ್ನು ಮನುಷ್ಯನ ಕೆಳಗಡೆ ಚಿತ್ರಿಸಿದ ಕುಣಿಗಳಿಗೆ ಜೋಡಿಸಲಾಗಿದೆ. ಈ ಹಗ್ಗವನ್ನು ಈ ಚಿತ್ರದ ಕೆಳಗೆ ತೋರಿಸಿದ ಜಿಂಕೆಯ ಕೊರಳಿಗೆ ಕಟ್ಟಲಾಗಿದೆ. ಈ ಜಿಂಕೆಗೆ ಉದ್ದವಾದ ಎರಡು ಕೊಂಬುಗಳಿವೆ. ಅದರ ಉದ್ದವು ೮೭ ಸೆಂ.ಮೀ. ಇದೆ. ಚಿಕ್ಕ ಬಾಲ ಮೇಲ್ಭಾಗಕ್ಕೆ ಎದ್ದಿದೆ. ಹಾಗೆಯೇ ಈ ಜಿಂಕೆಯ ಬದಿಗೆ ಒಂದು ಪ್ರಾಣಿಯಿದೆ. ಅದೂ ಕೂಡ ಜಿಂಕೆಯಿರಬೇಕು. ಈ ಜಿಂಕೆಯು ಸುಮಾರು ೬೦ ಸೆಂ.ಮೀ. ಉದ್ದ ೩೦ ಸೆಂ.ಮೀ. ಅಗಲವಿದೆ. ಇದಕ್ಕೂ ಸ್ವಲ್ಪ ಮೇಲಕ್ಕೆ ಎತ್ತಿದ ಬಾಲವಿದೆ. ಅದರ ಮುಖಭಾಗವು ಸ್ವಲ್ಪ ದಪ್ಪದಾಗಿದೆ. ಅದರ ಕೆಳಭಾಗದಲ್ಲಿ ಒಂದು ಎತ್ತನ್ನು ಚಿತ್ರಿಸಲಾಗಿದೆ. ಆ ಎತ್ತು ಸುಮಾರು ೫೦ ಸೆಂ.ಮೀ. ಉದ್ದ ೨೬ ಸೆಂ.ಮೀ. ಅಗಲವಿದೆ. ಅದಕ್ಕೆ ಡುಬ್ಬವಿದೆ. ತಲೆಯ ಮೇಲೆ ಎರಡು ಕೊಂಬುಗಳಿವೆ. ಕಾಲಿನ ಹತ್ತಿರ ವೃತ್ತ ಕುಣಿಗಳಿವೆ. ಹಗ್ಗದಿಂದ ಇವುಗಳನ್ನು ಜೋಡಿಸಲಾಗಿದೆ.
೨ನೇ ಗುಂಪಿನ ಚಿತ್ರಗಳಲ್ಲಿ ಒಂದು ಎತ್ತಿದೆ. ಬದಿಗೆ ಎರಡು ಜಿಂಕೆ ಮತ್ತು ಮರಿ ಜಿಂಕೆಯಿದೆ. ಜಿಂಕೆಯು ೧.೧೪ ಸೆಂ.ಮೀ. ಉದ್ದವಿದೆ. ಅಗಲವು ೧ ಮೀಟರ್‌ದಷ್ಟಿದೆ. ತಲೆಗೆ ಎರಡು ಕೊಂಬುಗಳಿವೆ. ಒಂದು ಕೊಂಬಿನಲ್ಲಿ ಒಂದು ಉಪಕೊಂಬಿದೆ. ಇದು ೬೦ ಸೆಂ.ಮೀ. ಉದ್ದ, ೩೨ ಸೆಂ.ಮೀ. ಅಗಲವಿದೆ. ಈ ಎರಡೂ ಜಿಂಕೆಗಳ ಕೆಳಭಾಗದಲ್ಲಿ ಒಂದು ಮರಿಜಿಂಕೆಯಿದೆ. ಇದು ೨೦ ಸೆಂ.ಮೀ. ಉದ್ದ ಹಾಗೂ ೧೬ ಸೆಂ.ಮೀ. ಅಗಲವಾಗಿದೆ.
೩ನೇ ಗುಂಪಿನ ಚಿತ್ರಗಳಲ್ಲಿ ಸುಮಾರು ೫ ಸಣ್ಣ ಸಣ್ಣ ಜಿಂಕೆಗಳಿವೆ. ಆ ಜಿಂಕೆಯು ೮೦ ಸೆಂ.ಮೀ. ಉದ್ದ, ೬೦ ಸೆಂ.ಮೀ. ಅಗಲವಿದೆ. ಇದರ ಕೆಳಭಾಗದಲ್ಲಿ ವೃತ್ತಾಕಾರದ ಮೂರು ಕುಣಿಗಳ ಸಮೂಹವನ್ನು ಒಂದರ ಕೆಳಗೆ ಒಂದರಂತೆ ಅನುಕ್ರಮವಾಗಿ ತೋರಿಸಲಾಗಿದೆ. ಪ್ರತಿ ಸಮೂಹದಲ್ಲಿ ಎರಡು ಸಾಲುಗಳಲ್ಲಿ ೧೨ ಕುಣಿಗಳಿವೆ.
೪ನೇ ಗುಂಪಿನ ಚಿತ್ರಗಳಲ್ಲಿ ದೊಡ್ಡ ಮನುಷ್ಯನ ಆಕೃತಿಯ ತಲೆಯ ಮೇಲೆ ಬಲಭಾಗದಲ್ಲಿ ಸ್ವಲ್ಪ ದೂರದಲ್ಲಿ ಒಂದು ಎತ್ತಿನ ರೇಖಾಚಿತ್ರವಿದೆ. ಅದರ ಉದ್ದ ೮೦ ಸೆಂ.ಮೀ. ಅಗಲ ೫೦ ಸೆಂ.ಮೀ. ಎತ್ತರವಾದ ಡುಬ್ಬವಿದೆ. ಮತ್ತು ಬಾಲವಿದೆ.
ಸದ್ಯ ಕರಾವಳಿ ಭಾಗದಲ್ಲಿ ಈ ಬೃಹದಾಕಾರದ ಬಂಡೆ ಚಿತ್ರಗಳು ದೊರಕಿರೋದು, ಇತಿಹಾಸ ಪೂರ್ವದಲ್ಲೂ ಈ ಭಾಗದಲ್ಲಿ ನಾಗರೀಕತೆ ಇತ್ತು ಹಾಗೂ ಜನವಸತಿ ಇತ್ತು ಎಂಬ ಬಗ್ಗೆ ಬೆಳಕು ಚೆಲ್ಲುತ್ತದೆ.
– ಡಾ. ಆರ್. ಎಂ ಷಡಕ್ಷರಯ್ಯ,
ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ