ಭಟ್ಕಳ: ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ  ತೆಂಗಿನಗುಂಡಿಯಲ್ಲಿ ವೀರ ಸಾವರ್ಕರ ನಾಮಫಲಕ ತೆರವುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರೇ ನಿರ್ದೇಶನ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಅವರು ಬುಧವಾರದಂದು ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಟ್ಕಳದ ತೆಂಗಿನಗುಂಡಿಯಲ್ಲಿ ವೀರ ಸಾವರ್ಕರ್ ಕಟ್ಟೆ, ಭಗವಾಧ್ವಜ ತೆರವು ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ವೀರ ಸಾವರ್ಕರ ನಾಮಫಲಕ, ಭಗವಾಧ್ವಜ ತೆರವು – ಪಿಡಿಒ ವಿರುದ್ದ ಧರಣಿ ಕುಳಿತ ಪಂಚಾಯತ ಸದಸ್ಯರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳವು ಹಿಂದು ಜಾಗೃತಿಯ ಬಹುಮುಖ್ಯ ಪ್ರದೇಶವಾಗಿದೆ. ಇಲ್ಲಿಯ ತೆಂಗಿನಗುಂಡಿಯ ಭಗವಾಧ್ವಜ ತೆರವಿನಲ್ಲಿ ಕಾಂಗ್ರೆಸ್‌ನ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನೇರ ಹಸ್ತಕ್ಷೇಪ ಇದೆ ಎಂದು ಆಪಾದಿಸಿದ ಅವರು, ನಿಮ್ಮ ಕಾಲ ಮೇಲೆ ನೀವೇ ಚಪ್ಪಡಿ ಕಲ್ಲು ಹಾಕಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಹೇಳಿದರು.
ಭಟ್ಕಳ ಇಡೀ ಜಿಲ್ಲೆಯಲ್ಲಿ ಹಿಂದುತ್ವ ಸಂಚಲನ ಹಾಗೂ ಹಿಂದುತ್ವದ ಜಾಗ್ರತಿಯನ್ನು ಮಾಡಿದ ಕೇಂದ್ರ ಸ್ಥಳವಾಗಿದೆ. ಆ ಕಾರಣಕ್ಕಾಗಿ ಭಟ್ಕಳದಲ್ಲಿ ನಮ್ಮ ಲೋಪದಿಂದ ಇಲ್ಲಿ ಅಧಿಕಾರವನ್ನು ಕಳೆದುಕೊಂಡಿದೆ. ಆದರೆ ಇಲ್ಲಿನ ಹಿಂದೂ ಮಾನಸಿಕತೆ ಅದಕ್ಕೆ ಪಶ್ಚಾತಾಪ ಪಡುತ್ತಿದೆ. ಇಂತಹ ಅಪಪ್ರಚಾರಕ್ಕೆ ಒಂದು ದಿನ ಉತ್ತರ ಕೊಡುತ್ತೇವೆ. ಈ ಸಮಾಜ ಒಂದು ದಿನ ಮೈಕೊಡವಿ ಎದ್ದು ನಿಲ್ಲುತ್ತದೆ. ಆದರೆ ಇದು ಗೊತ್ತಿದ್ದೂ ಹಿಂದುಗಳ ಮಾನಸಿಕತೆಯನ್ನು ಛಿದ್ರ ಮತ್ತು ದುರ್ಬಲವನ್ನಾಗಿ ಮಾಡಲು ಈ ರೀತಿ ಸಂಚು ಮಾಡುತ್ತಿದೆ. ಇದರಲ್ಲಿ ನೇರವಾಗಿ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ ಎಂದ ಅವರು, ಜಿಲ್ಲಾ ಉಸ್ತುವಾರಿ ಸಚಿವರೇ… ನೀವು ಹಿಂದುಗಳ ಮಾನಸಿಕತೆಯನ್ನು ಕೆಣಕುವ ದುಸ್ಸಾಹಸಕ್ಕೆ ಹೋಗಬೇಡಿ. ನಿಮಗೆ ಅಧಿಕಾರ ಅಮಲು ಇರಬಹುದು. ನಿಮ್ಮ ಪಕ್ಷದ ಉನ್ನತ ಅಧಿಕಾರಿಗಳ ಒತ್ತಡ ನಿಮ್ಮ ತಲೆ ಮೇಲೆ ಇರಬಹುದು. ಆದರೆ ನಿಮ್ಮ ಕಾಲ ಮೇಲೆ ನೀವೇ ಚಪ್ಪಡಿ ಕಲ್ಲನ್ನು ಹಾಕಿಕೊಳ್ಳೋತ್ತಿದ್ದೀರಾ ಎನ್ನುವ ಎಚ್ಚರಿಕೆ ನೀಡಿದರು.

https://www.facebook.com/61551058779244/posts/pfbid02ck73zAYhcXABCAXLJjwEWEGsvxj6FnA7o2W6tgAtgSnnqPumeZiD6YZ4LsSX2WYDl/?mibextid=Nif5oz

ತೆಂಗಿನಗುಂಡಿ ವೀರ ಸಾವರ್ಕರ ಕಟ್ಟೆಯನ್ನು ಇನ್ನೊಮ್ಮೆ ತೆರವು ಮಾಡಲು ಬಿಡುವುದಿಲ್ಲ. ಒಂದೊಮ್ಮೆ ಮತ್ತೆ ಮುಟ್ಟುವ ದುಸ್ಸಾಹಸಕ್ಕೆ ಕೈ ಹಾಕಿದರೆ ಜಿಲ್ಲೆಯ ಎಲ್ಲಾ ತಾಲೂಕಿನ ಸರ್ಕಲ್ ಗಳಲ್ಲಿ ಸಾವರ್ಕರ್ ಕಟ್ಟೆಯನ್ನು ಕಟ್ಟುತ್ತೇವೆ. ನಿಮಗೆ ಭಟ್ಕಳದಲ್ಲಿ ಒಂದು ಸಾವರ್ಕರ್ ಕಟ್ಟೆ ಇರಬೇಕೋ ಅಥವಾ ಜಿಲ್ಲೆಯಾದ್ಯಂತ ನೂರಾರು ಸಾವರ್ಕರ್ ಕಟ್ಟೆ ನಿರ್ಮಾಣವಾಗಬೇಕೋ ಎಂದು ಎಚ್ಚರಿಕೆಯಿಂದ ಆಲೋಚನೆ ಮಾಡಿ ಎಂದರು.

ಪ್ರಕರಣವನ್ನು ಬಿಜೆಪಿ ರಾಜ್ಯ ಘಟಕ ತುಂಬಾ ಗಂಭೀರವಾಗಿ ಪರಿಗಣಿಸಿದೆ. ನಮಗೆ ಈ ರಾಜ್ಯದ ಅಭಿವೃದ್ಧಿಯ ಆದ್ಯತೆ ಇದೆ. ಅದರ ಜೊತೆಗೆ ನಮ್ಮ ಸಾಂಸ್ಕೃತಿಕ ಅಸ್ಮಿತೆಗೆ ನಾವು ಆದ್ಯತೆ ಇದೆ. ನೀವು ನಮಗೆ ಸವಾಲು ಹಾಕಿದ್ದೀರಿ. ನೀವು ನಮ್ಮನ್ನ ಮೈ ಮುಟ್ಟುವ ಕೆಲಸ ಮಾಡಿದ್ದೀರಾ. ಇದಕ್ಕೆ ತಕ್ಕ ಉತ್ತರವನ್ನು ಈ ಸಮಾಜ ಕೊಡುತ್ತದೆ. ನಿಮಗೆ ಈ ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ. ನಮಗೆ ದೇಶದ ಎಲ್ಲಾ ಶ್ರದ್ದಾ ಕೇಂದ್ರ ಹಾಗೂ ಎಲ್ಲಾ ಮಹಾ ಪುರುಷ ಬಗ್ಗೆ ಅಭಿಮಾನ ಪ್ರೀತಿ ಇದೆ. ಅದನ್ನು ನೀವು ಪರೀಕ್ಷೆ ಮಾಡಲು ಬಂದರೆ ನಾವು ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ ಎಂದರು.
ಆಡಳಿತ ವೈಫಲ್ಯದಿಂದ ಇಡೀ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ಬಿಜೆಪಿ‌ ಸರ್ಕಾರ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಅಳವಡಿಸಿದ್ದ ಪಠ್ಯವನ್ನು ಕಾಂಗ್ರೆಸ್‌ ಸರ್ಕಾರ ತೆಗೆದುಹಾಕಿದೆ. ಒಂದು ಸಮುದಾಯದ ತುಷ್ಟೀಕರಣ ನಿಟ್ಟಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸವಾಗುತ್ತಿದೆ ಎಂದು ಕೋಣೆಮನೆ ಕಿಡಿಕಾರಿದರು.
ಸಾವರ್ಕರ್‌ ಕಟ್ಟೆ ನಿರ್ಮಾಣಕ್ಕೆ ಪರವಾನಗಿ ಪಡೆಯಲಾಗಿತ್ತೇ ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭಟ್ಕಳ ಸೇರಿ ರಾಜ್ಯದ ಉದ್ದಗಲಕ್ಕೂ ಪರವಾನಗಿ ಪಡೆಯದೆ ಹಲವು ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಮಹಾತ್ಮ ಗಾಂಧಿ ಪ್ರತಿಮೆಯಿಂದ ಹಿಡಿದು ರಾಜಕುಮಾರ್‌ ಪ್ರತಿಮೆವರೆಗೆ ಎಲ್ಲೆಲ್ಲಿ ಎಷ್ಟು ಪ್ರತಿಮೆ ಪರವಾನಗಿ ಪಡೆದು ಕಟ್ಟಲಾಗಿದೆ ಎಂಬುವುದನ್ನು ಸರ್ವೆ ಮಾಡಿಸಿ, ಆನಂತರ ಕೊನೆಗೆ ಸಾವರ್ಕರ್ ಪ್ರತಿಮೆಗೆ ಕಟ್ಟೆಗೆ ಕೈ ಹಾಕಬಹುದು. ಇನ್ನೂ ನಾವು ಬ್ರಿಟಿಷರ ಪ್ರತಿಮೆಗಳನ್ನೂ ಇಟ್ಟುಕೊಂಡಿದ್ದೇವೆ. ಅದನ್ನು ಬಿಟ್ಟು ಯಾಕೆ ಸಾವರ್ಕರ್‌ ಪ್ರತಿಮೆ, ಹನುಮ ಧ್ವಜ ಹಾಗೂ ಭಗವಾಧ್ವಜಗಳನ್ನೇ ತೆರವು ಮಾಡುತ್ತಾರೆ ಎಂದವರು ಪ್ರಶ್ನಿಸಿದರು.
ಈ ರೀತಿಯ ಘಟನೆ ಮತ್ತೆ ಮುಂದುವರಿದಲ್ಲಿ ಭಟ್ಕಳದ ಎಲ್ಲ ವೃತ್ತಗಳಲ್ಲಿ ಸಾವರ್ಕರ್ ಕಟ್ಟೆ ಸ್ಥಾಪನೆಯಾಗುತ್ತದೆ. ಸಾವರ್ಕರ್ ಕಟ್ಟೆ ಒಂದೇ ಇರಬೇಕೋ ನೂರಾರು ಇರಬೇಕೋ ಎನ್ನುವುದನ್ನು ನೀವೇ ತೀರ್ಮಾನ ಮಾಡಿ. ಭಟ್ಕಳ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇಂತಹ ಘಟನೆ ಜಿಲ್ಲೆಯಲ್ಲಿ ಮತ್ತೆ ಸಂಭವಿಸಬಾರದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ  ಮಾತನಾಡಿ, ಪ್ರತಿ ಬಾರಿಯೂ ಚುನಾವಣೆ ಸಂದರ್ಭದಲ್ಲಿ ಅನಾವಶ್ಯಕವಾಗಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುವುದು, ಕೇಸ್ ಮಾಡಿದ ಮೇಲೆ ಅವನನ್ನು ಜೈಲಿಗೆ ತಳ್ಳುವುದು, ನಂತರ ಚುನಾವಣೆ ಸಂದರ್ಭದಲ್ಲಿ ಇದನ್ನು ಬಳಸಿಕೊಂಡು ಬಿಜೆಪಿಯವರಿಗೆ ಚುನಾವಣೆ ಸಂದರ್ಭದಲ್ಲಿ ಇಂತಹ ಕಟ್ಟೆ ನೆನಪಾಗುತ್ತದೆ ಎಂದು ಹೇಳುವುದು, ಎಲ್ಲ ತಪ್ಪುಗಳನ್ನು ಬಿಜೆಪಿ ಪಕ್ಷದ ಮೇಲೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕುವುದು ಮತ್ತು ಹೇಳಿಕೆ ಕೊಡುವುದನ್ನು ನಾವು ಕಂಡಿದ್ದೇವೆ. ಈ ವಿಷಯದ ಕುರಿತಂತೆ ನಮ್ಮ ಬಿಜೆಪಿ ಪಕ್ಷದ ಸ್ಪಷ್ಟ ನಿಲುವು ಇದೆ. ಮುಂದಿನ ದಿನಗಳಲ್ಲಿ ಹಿಂದೂ ಸಮಾಜದ ಗೌರವಿರುವ ವ್ಯಕ್ತಿಯ ಕಟ್ಟೆಯಾಗಬಹುದು ಅಥವಾ ನಾಮಫಲಕವಾಗಬಹುದು, ಯಾವುದಾದರು ತೆಗೆಯುವಂತ ಪ್ರಯತ್ನಕ್ಕೆ ಕೈ ಹಾಕಿದ್ದಲ್ಲಿ ನಮ್ಮ ಸಂಘಟನೆ ಸುಮ್ಮನೆ ಕೈಕಟ್ಟಿ ಕುಳ್ಳುವುದಿಲ್ಲ. ನಾವು ಎಲ್ಲಾ ತಾಲೂಕಿನಲ್ಲೂ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಈ ಕುರಿತಾಗಿ ಎಲ್ಲಾ ತಾಲೂಕು ಅಧ್ಯಕ್ಷರೊಂದಿಗೆ ಮಾತನಾಡಿದ್ದೇವೆ. ಈ ಮೂಲಕ ನಾವು ಸರ್ಕಾರಕ್ಕೆ ಸ್ಪಷ್ಟವಾದ ಸಂದೇಶವನ್ನು ಕೊಡಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಭಾಸ್ಕರ ದೈಮನೆ, ಮೋಹನ ನಾಯ್ಕ, ಮಾಜಿ ಶಾಸಕ ಸುನೀಲ್ ನಾಯ್ಕ, ಬಿಜೆಪಿ ಮುಖಂಡ ಗೋವಿಂದ ನಾಯ್ಕ, ರವಿ ನಾಯ್ಕ, ಸುರೇಶ ನಾಯ್ಕ, ಶ್ರೀಕಾಂತ ನಾಯ್ಕ ಮುಂತಾದವರು ಇದ್ದರು.

ವೀರ ಸಾವರ್ಕರ್ ಕುರಿತಾಗಿ ಕಾಂಗ್ರೆಸ್ ಪಕ್ಷಕ್ಕೆ ದ್ವೇಷ ಇದೆ. ಸಾವರ್ಕರ್ ಮುಸಲ್ಮಾನರಿಗೆ ಪ್ರತ್ಯೇಕ ದೇಶ ಆಗುವುದು ಹಾಗೂ ಮುಸ್ಲಿಂ ಸಮಾಜದ ತುಷ್ಟೀಕರಣ ವಿರೋಧಿಸಿದ್ದರು. ಅವರು ಇಡೀ ಹಿಂದು ಸಮಾಜವನ್ನು ಒಂದಾಗಿಡಲು ಜೀವನ ಮುಡಿಪಾಗಿಟ್ಟವರು, ಆ ಕಾರಣಕ್ಕಾಗಿ ಕಾಂಗ್ರೆಸ್‌ನವರು ಸಾವರ್ಕರ್, ವಿವೇಕಾನಂದ ಅವರನ್ನು ವಿರೋಧಿಸುತ್ತಾರೆ.
ಹರಿಪ್ರಕಾಶ ಕೋಣೆಮನೆ, ರಾಜ್ಯಬಿಜೆಪಿ ವಕ್ತಾರ