ಭಟ್ಕಳ: ಭಾರತವನ್ನು ಕಟ್ಟಿ ಬೆಳೆಸುವಲ್ಲಿ ನಮ್ಮ ಪೂರ್ವಜರು ತಮ್ಮ ಪ್ರಾಣವನ್ನೇ ಬಲಿ ಅರ್ಪಿಸಿದ್ದಾರೆ. ಈ ದೇಶ ನಮ್ಮದು. ಇದರ ಅಭಿವೃದ್ಧಿ ನಮ್ಮ ಅಭಿವೃದ್ಧಿ. ಮುಸ್ಲಿಮರು ಇಸ್ಲಾಮಿ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜಗತ್ತಿಗೆ ಮಾದರಿಯಾಗಿ ಬದುಕಬೇಕೆಂದು ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ ಕರೆ ನೀಡಿದರು.

ಇದನ್ನೂ ಓದಿ : ಕಾಲೇಜಿಗೆ ಹೋಗದೇ ದ್ವಿತೀಯ ಪಿಯುಸಿಯಲ್ಲಿ 95.70% ಸಾಧನೆ

ಅವರು ಬುಧವಾರ ಇಲ್ಲಿನ ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ ನೆರವೇರಿಸಿ ಈದ್ ಸಂದೇಶ ನೀಡಿ ಮಾತನಾಡಿದರು. ಅಕ್ರಮಿಗಳು, ಸರ್ವಾಧಿಕಾರಿಗಳು ಯಾವ ರೀತಿ ಸರ್ವನಾಶಗೊಂಡಿದ್ದಾರೆ ಎನ್ನುವುದನ್ನು ಜಗತ್ತು ಕಂಡಿದೆ. ಫಿರೌನ್ ಗಿಂತ ದೊಡ್ಡ ಅಕ್ರಮಿ ಯಾರಿದ್ದಾರೆ? ನನಗಿಂತ ದೊಡ್ಡ ಪ್ರಭು ಮತ್ತಾರಿಲ್ಲ ಎಂದು ವಾದ ಮಾಡುತ್ತಿದ್ದ. ಕೊನೆಗೂ ಆತ ಏನಾದ? ಅಕ್ರಮಿಗಳು ಎಷ್ಟೇ ಅಕ್ರಮವೆಸಗಲಿ, ಅದು ಒಂದು ಹಂತಕ್ಕೆ ಬಂದಾಗ ಅದರ ವಿನಾಶ ಸರ್ವಸಿದ್ಧ ಎಂದರು.
ನಮ್ಮದು ಬಹುಸಂಸ್ಕೃತಿಯ ದೇಶ. ಇಲ್ಲಿ ಎಲ್ಲ ಧರ್ಮದವರು ಕೂಡಿ ಬಾಳುತ್ತಿದ್ದಾರೆ. ನಾವು ಇಸ್ಲಾಮಿ ಮಾದರಿಯ ಬದುಕನ್ನು ಬದುಕಬೇಕು. ನಮ್ಮ ನಡೆನುಡಿಗಳಿಂದ ಇಸ್ಲಾಮನ್ನು ಪರಿಚಯಿಸಬೇಕು. ಧರ್ಮದ ಮೇಲೆ ನೆಲೆ ನಿಲ್ಲಬೇಕು. ಇಸ್ಲಾಮ್ ಮತ್ತು ಮುಸ್ಲಿಮರ ಕುರಿತಂತೆ ಇರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸುವ ಪ್ರಯತ್ನಗಳಾಗಬೇಕು. ನಾವು ಮುಸ್ಲಿಮರು ಸಂಪೂರ್ಣವಾಗಿ ಇಸ್ಲಾಮಿ ಜೀವನ ನಡೆಸಿದಾಗ ಮಾತ್ರ ಅದು ಸಾಧ್ಯ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬೆಳಿಗ್ಗೆ ಚಿನ್ನದ ಪಳ್ಳಿಯಿಂದ ಮೆರವಣೆಗೆ ಮೂಲಕ ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿದ ಸಾವಿರಾರು ಮುಸ್ಲಿಮ್ ಬಾಂಧವರು ಈದುಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ ನೆರವೇರಿಸಿದರು. ನಂತರ ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಜಾಮಿಯ ಮಸೀದಿಯ ಇಮಾಮ್ ಖತೀಬ್ ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ, ಮೌಲಾನ ಅನ್ಸಾರ್ ಮದನಿ, ಮೌಲಾನ ಇರ್ಷಾದ್ ನಾಯ್ತೆ ನದ್ವಿ ಮತ್ತಿತರರು ಇದ್ದರು.