ಹೊನ್ನಾವರ: ರಾಮನ ಪಾದುಕೆ ಮುಂದಿಟ್ಟು ರಾಜ್ಯಭಾರ ಭರತನು ಮಾಡಿದಂತೆ, ರಾಮತೀರ್ಥದ ಶ್ರೀಧರ ಸ್ವಾಮಿಗಳ ವೇದಾಂತ ಸಾಮ್ರಾಜ್ಯವನ್ನು ಜಾನಕಿಯಮ್ಮ ಹಾಗೂ ಜನಾರ್ದನ ಇವರು ಮುನ್ನಡೆಸುತ್ತಿದ್ದಾರೆ ಎಂದು ಉಡುಪಿ ಪೇಜಾವರ ಅಧೋಕ್ಷ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಪಟ್ಟಣದ ರಾಮತೀರ್ಥದ ಶ್ರೀಧರ ಆಶ್ರಮದಲ್ಲಿ ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಠಾಪನಾ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀಧರ ಸ್ವಾಮಿಗಳ ವೇದಾಂತಗಳ ಸಿಂಚನ ಧ್ವನಿ ಮುದ್ರಿಕೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನೀಡುವುದು ದೊಡ್ಡಕಾರ್ಯವಾಗಿದೆ. ಒಳ್ಳೆಯ ವಿಚಾರಗಳು ನಿರಂತರವಾಗಿ ದೊರಕಬೇಕಾದರೆ, ಅದನ್ನು ಮುದ್ರಿಸಿ ನೀಡುವುದರಿಂದ ಪ್ರತಿಯೊಬ್ಬರ ಮನದಲ್ಲಿ ಶಾಶ್ವತವಾಗಿ ಇರಲಿದೆ. ರಾಮ- ರಾವಣ ಆದರ್ಶಪುರುಷರು. ಸಮಾಜದಲ್ಲಿ ಹೇಗೆ ಇರಬೇಕೆಂದು ರಾಮ ತಿಳಿಸಿದರೆ, ಸಮಾಜದಲ್ಲಿ ಹೇಗಿರಬಾರದೆಂದು ರಾವಣನು ತೋರಿಸಿದ್ದಾನೆ. ಸಮಾಜದ ಸುಖಕ್ಕೋಸ್ಕರ ಸ್ವಾರ್ಥವನ್ನೆಲ್ಲ ತ್ಯಾಗ ಮಾಡಿದ ರಾಮನ ನಡೆಯನ್ನು ನಾವೆಲ್ಲರೂ ಅನುಸರಿಸೋಣ ಎಂದರು.

ಇದನ್ನೂ ಓದಿ : ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮೇ ೧ರಂದು

ಸುವರ್ಣ ಸೌಧ ಒಬ್ಬರಿಂದ ನಿರ್ಮಾಣ ಸಾಧ್ಯವಿಲ್ಲ. ಶ್ರೀಧರ ಸ್ವಾಮಿಗಳ ಗ್ರಂಥ ಪ್ರಕಾಶನ ಬಿಡುಗಡೆಗೆ ಎಲ್ಲರ ಸಹಕಾರವಿದೆ. ಹಾಗೆಯೇ ಉತ್ತಮ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದರು.

ಪತಂಜಲಿ ವೀಣಾಕರ್ ಮಾತನಾಡಿ, ೫೦ ವರ್ಷ ಪಾದುಕಾ ಪ್ರತಿಷ್ಠಾಪನೆಯಾಗಿದೆ. ಶ್ರೀಧರ ಸ್ವಾಮಿಗಳ ಮಾರ್ಗದರ್ಶನವು ಪುಸ್ತಕ ರೂಪದಲ್ಲಿ ಇಂದು ಶ್ರೀಗಳಿಂದ ಬಿಡುಗಡೆಯಾಗಿದೆ. ಇದನ್ನು ಭಕ್ತರು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, ಶ್ರೀಧರ ಸ್ವಾಮೀಜಿಯವರ ಕುರಿತು ಕನ್ನಡ, ಇಂಗ್ಲೀಷ್, ಮರಾಠಿ ಭಾಷೆಯಲ್ಲಿ ಬಂದಿದೆ. ಶ್ರೀಧರ ಸ್ವಾಮಿಗಳು ಹುಟ್ಟಿದ್ದು, ಮಹಾರಾಷ್ಟ್ರದವರಾದರೂ, ಸನ್ಯಾಸತ್ವ ಸ್ವೀಕರಿಸಿದ್ದು ಶಿರಸಿಯ ಶೀಗೆಹಳ್ಳಿಯಲ್ಲಿ ಆಗಿರುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಭಕ್ತ ವೃಂದವಿದೆ.‌ ೮೦ ವರ್ಷದ ಹಿಂದೆ ರಾಮತೀರ್ಥದಲ್ಲಿ ದತ್ತಮೂರ್ತಿ ಸ್ಥಾಪಿಸಿದ್ದಾರೆ. ಜನಾರ್ದನ ಹಾಗೂ ಜಾನಕಕ್ಕ ಇಲ್ಲಿಯ ಆಶ್ರಮವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದರು.

ಆಶ್ರಮಕ್ಕೆ ನೆರವಾದವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಶ್ರೀಧರ ಸ್ವಾಮಿಗಳ ಕೃತಿಗಳ ಕುರಿತು ವೆಂಕ್ರಟಮಣ ಭಟ್ ಮಾತನಾಡಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.

ಮುಂಜಾನೆಯಿಂದ ೧೦೦೮ ಗಣಪತಿ ಉಪನಿಷತ್, ಶ್ರೀ ಶ್ರೀಧರ ಸ್ವಾಮಿಗಳ ಪಾದುಕೆಗಳಿಗೆ ರುದ್ರಾಭಿಷೇಕ, ೧೦೦೮ ಶ್ರೀ ಪುರುಷಸೂಕ್ತ, ಶ್ರೀ ಸೂಕ್ತ ಅಭಿಷೇಕ, ಫಲಪಂಚಾಮೃತ ಅಭಿಷೇಕ, ವಿಷ್ಣುಸಹಸ್ರನಾಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಮಹಾಮಂಗಳಾರತಿ, ಮಹಾಪೂಜೆ, ಮಹಾಪ್ರಸಾದ ವಿತರಣೆ ಜರುಗಿತು. ಧಾರ್ಮಿಕ ಸಭಾ ಕಾರ್ಯಕ್ರಮದ ಮೊದಲು ಗಾನತರಂಗಿಣಿ ಟ್ರಸ್ಟ್‌ನ ವಸುಧಾ ಜಿ., ಎಮ್.ಎಸ್.ಗಿರಿಧರ ಅವರಿಂದ “ದಾಸಸಿಂಚನ” ಕಾರ್ಯಕ್ರಮ ಜರುಗಿತು.