ಭಟ್ಕಳ: ತಾಲೂಕಿನ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪರಿವಾರ ದೇವರಾದ ಶ್ರೀ ಶೀಗೆ ಹನುಮಂತ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಮಾರ್ಚ್ ೨೧ ರಿಂದ ೨೩ರವರೆಗೆ ನಡೆಯಲಿದೆ.

ಇದರ ವಿಡಿಯೋ ವರದಿ ನೋಡಿ: https://fb.watch/qUeL_ps91Q/?mibextid=Nif5oz

ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಮುಖ್ಯ ಅರ್ಚಕ ನಾಗರಾಜ ಭಟ್ ಈ ಕುರಿತು ಮಾಹಿತಿ ನೀಡಿದರು. ಎಲ್ಲಾ ಸಮಾಜದ ಸಹಕಾರದಿಂದ 2010ರಲ್ಲಿ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವರ ಪ್ರತಿಷ್ಠಾಪನೆ ಮಾಡಲಾಗಿತ್ತು. ಅದೇ ರೀತಿ 2020ರಲ್ಲಿ ಇದರ ಪರಿವಾರ ದೇವರಾದ ಶ್ರೀ ಶೀಗೆ ಹನುಮಂತ ದೇವರ ದೇವಸ್ಥಾನ ನಿರ್ಮಾಣ ಮಾಡುವ ಬಗ್ಗೆ ಸಂಕಲ್ಪ ಇಟ್ಟುಕೊಂಡಿದ್ದೆವು. ಆದರೆ ಕೋವಿಡ್ ನಿಂದಾಗಿ 5 ವರ್ಷದ ಬಳಿಕ ದೇವರ ಆಶೀರ್ವಾದದೊಂದಿಗೆ ಎಲ್ಲರ ಸಹಾಯ ಮತ್ತು ಸಹಕಾರದಿಂದ ದೇವರ ಪುನರ್ ಪ್ರತಿಷ್ಠಾನೆ ಹಾಗೂ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದರು.

ಇದನ್ನೂ ಓದಿ : ಭಾಗಶಃ ಕಾಡು ಬೆಂಕಿಯ ಕೆನ್ನಾಲಿಗೆಗೆ ಆಹುತಿ

ಮಾರ್ಚ್ ೨೨ರಂದು ಬೆಳಿಗ್ಗೆ ೯.೪೧ಕ್ಕೆ ವೃಷಭ ಲಗ್ನದ ಸುಮುಹೂರ್ತದಲ್ಲಿ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಜ್ಞಾನೇಶ್ವರಿ ಪೀಠದ ಶ್ರೀ ಕ್ಷೇತ್ರ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರಿ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ನೆರವೇರಲಿದೆ. ಮಾಜಿ ಶಾಸಕ ಸುನೀಲ ನಾಯ್ಕ ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 8 ಗಂಟೆಗೆ ಸ್ಥಳೀಯ ಮಹಿಳೆಯರಿಂದ ಭಜನಾ ಕುಣಿತ ನೆರವೇರಲಿದೆ ಎಂದರು.

ಮಾರ್ಚ್ ೨೩ರಂದು ಧರ್ಮಸ್ಥಳ ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನ ಮಠಾಧೀಶರಾದ ಶ್ರೀ ಬೃಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಬೃಹ್ಮಕಲಶೋತ್ಸವ ನೆರವೇರಿಸಲಾಗುವುದು. ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉಪಸ್ಥಿತರಿರುವರು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ 8 ಗಂಟೆಗೆ ಸ್ಥಳೀಯ ಪುರುಷರಿಂದ ಭಜನಾ ಕುಣಿತ ನೆರವೇರಲಿದೆ. ಈ ಎಲ್ಲಾ ಕಾರ್ಯಕ್ರಮಕ್ಕೆ ತಾಲೂಕಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನ ಅಧ್ಯಕ್ಷ ಸಣ್ಕುಸ್ ದೇವಾಡಿಗ, ದಿನೇಶ ನಾಯ್ಕ, ವಿನೋದ ನಾಯ್ಕ, ಗೋಪಾಲ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.