ಅನುದಾನದಿಂದ ಬಡವಾಗುತ್ತಿದೆ ಸಂಬಾರ ಮಂಡಳಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಬಾರ ಬೆಳೆ ಬೆಳೆಯುವುದಕ್ಕೆ ಉತ್ತೇಜಿಸಲು ಇರುವ ಮಂಡಳಿಗೆ ಸರ್ಕಾರದಿಂದ ತೀರಾ ಕಡಿಮೆ ಅನುದಾನ ಬರುತ್ತಿದೆ‌. ಇದು ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿದೆ. ಒಂದೆಡೆ ಕೇಂದ್ರ ಸರ್ಕಾರವು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಸಂಬಾರ ಪದಾರ್ಥಗಳಿಗೆ ಉತ್ತೇಜನ ನೀಡುತ್ತಿದೆ. ಆದರೆ ಇನ್ನೊಂದೆಡೆ ಅನುದಾನದ ಕೊರತೆ, ಸಂಬಾರ ಮಂಡಳಿಯ ನಿಷ್ಕ್ರೀಯತೆ, ಸಿಬ್ಬಂದಿ ಕೊರತೆಯಿಂದ ಬೆಳೆಗಾರರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಜೊತೆಗೆ ವಾರದಲ್ಲಿ ನಾಲ್ಕು ದಿನ ಕಚೇರಿ ಬಂದ್ ಇರುವುದು ರೈತರಿಗೆ ಸಮಸ್ಯೆಯಾಗುತ್ತಿದೆ.‌

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಂಬಾರ ಮಂಡಳಿಯ ಜಿಲ್ಲೆಯ ವ್ಯಾಪ್ತಿಯ ಕ್ಷೇತ್ರಾಧಿಕಾರಿಗಳ ಕಚೇರಿ ಉ.ಕ ಜಿಲ್ಲೆ ಶಿರಸಿ ನಗರದ ಹುಬ್ಬಳ್ಳಿ ಮಾರ್ಗದಂಚಿನಲ್ಲಿದೆ. ಸಿಬ್ಬಂದಿ ಕೊರತೆ, ಸೀಮಿತ ಅನುದಾನ, ಯೋಜನೆಗಳ ವ್ಯಾಪಕ ಪ್ರಚಾರ ಇಲ್ಲದಿರುವುದು ಸಾಕಷ್ಟು ರೈತರಿಗೆ ಜಿಲ್ಲೆಯಲ್ಲಿ ಸಂಬಾರ ಮಂಡಳಿ ಇದೆ ಎನ್ನುವುದೇ ಗೊತ್ತಿಲ್ಲ. ಸಂಬಾರ ಬೆಳೆ ಬೆಳೆಯುವುದಕ್ಕೆ ರೈತರು ಆಸಕ್ತಿ ತೋರುತ್ತಿಲ್ಲ ಎನ್ನುವುದಕ್ಕಿಂತ ವೈಜ್ಞಾನಿಕವಾಗಿ ರೈತರನ್ನು ಹೇಗೆ ಪ್ರೋತ್ಸಾಹಿಸಬಹುದು, ರೈತರು ಬೆಳೆಯುತ್ತಿರುವ ಬೆಳೆಯಲ್ಲೇ ಯಾವುದಕ್ಕೆ ಸಹಾಯಧನ ನೀಡಬಹುದು ಎಂಬುದನ್ನು ಸಮರ್ಪಕವಾಗಿ ಅವಲೋಕಿಸದೇ ಇರುವುದು ಸಂಬಾರ ಮಂಡಳಿ ಕಾರ್ಯ ಚಟುವಟಿಕೆ ಮರೆಯಾಗುತ್ತಿರುವುದಕ್ಕೆ ಕಾರಣವಾಗಿದೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.

ಕೇಂದ್ರ ಸಂಬಾರ ಮಂಡಳಿ ವ್ಯಾಪ್ತಿಯಲ್ಲಿ 52 ಬೆಳೆಗಳಿದ್ದರೂ, ಜಿಲ್ಲೆಯ ಮಟ್ಟಿಗೆ ಏಲಕ್ಕಿ ಮತ್ತು ಕಾಳುಮೆಣಸು ಬೆಳೆ ಮಾತ್ರ ಇದು ಒಳಗೊಂಡಿದೆ. ಏಲಕ್ಕಿ ಮರು ನಾಟಿ ಯೋಜನೆ ಹಾಗೂ ಕಾಳುಮೆಣಸು ಬಿಡಿಸುವ ಯಂತ್ರಕ್ಕೆ ಸಬ್ಸಿಡಿ ಸೌಲಭ್ಯ ದೊರೆಯುತ್ತಿದೆ. ಮರುನಾಟಿಯಲ್ಲಿ ಹೆಕ್ಟೆರ್‍ಗೆ ಎರಡು ವರ್ಷ ತಲಾ 25 ಸಾವಿರ ರೂ. ನೀಡಲಾಗುತ್ತಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 20 ಹೆಕ್ಟೇರ್ ಪ್ರದೇಶದ ಮರುನಾಟಿಗೆ 56 ರೈತರಿಗೆ ಸಬ್ಸಿಡಿ ನೀಡಲಾಗಿತ್ತು. ಆದರೆ ಈ ಬಾರಿ ಕೇವಲ 5 ಹೆಕ್ಟೇರ್‍ಗೆ ಅನುದಾನ ಬಂದಿದೆ ಎನ್ನಲಾಗಿದೆ. ಅಲ್ಲದೇ ಭೌಗೋಳಿಕವಾಗಿ ಮಲೆನಾಡು, ಅರೆಬಯಲುಸೀಮೆ, ಕರಾವಳಿ ವ್ಯಾಪ್ತಿಯ ವಿಸ್ತಾರ ಜಿಲ್ಲೆಯಲ್ಲಿ ಸಂಬಾರ ಬೆಳೆ ಕೃಷಿಗೆ ಉತ್ತೇಜಿಸಲು ಕ್ಷೇತ್ರಾಧಿಕಾರಿಗಳ ಕಚೇರಿಯಲ್ಲಿ ಸಿಬ್ಬಂದಿ ಕೊರತೆಯೂ ಇದೆ. ಕ್ಷೇತ್ರಾಧಿಕಾರಿ ಹಾವೇರಿ, ಶಿರಸಿ ಜವಾಬ್ದಾರಿಯನ್ನು ಹೊಂದಿದ್ದಾರೆ. ಇದರಿಂದ ಕಚೇರಿ ವಾರದಲ್ಲಿ‌ ನಾಲ್ಕು ದಿ‌ನ ಬಂದ್ ಇರಲಿದೆ. ಅಧಿಕಾರಿ ಶಿರಸಿಗೆ ಬಂದಲ್ಲಿ ಹಾವೇರಿ ಬಂದ್ ಇರುವ ಸ್ಥಿತಿ ಇದೆ. ಇದರಿಂದ ಜಿಲ್ಲೆಯ ರೈತರಿಗೆ ಸಮಸ್ಯೆಯಾಗಿದೆ.‌

ಜಿಲ್ಲೆಯಲ್ಲಿ ಕೇಂದ್ರಿಯ ಸಂಬಾರ ಮಂಡಳಿ ಕಾರ್ಯಚಟುವಟಿಕೆ ಅಷ್ಟಕ್ಕಷ್ಟೇ ಎನ್ನುವಂತಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳನ್ನು ಒಳಗೊಂಡು ಯೋಜನೆಯನ್ನು ರೈತರಿಗೆ ತಲುಪಲು ಅವಕಾಶವಿತ್ತು. ಆದರೆ ಜಿಲ್ಲೆಯ ಮಟ್ಟಿಗೆ ಮಂಡಳಿಗೆ ಅನುದಾನ, ಯೋಜನೆಯೇ ಬರುತ್ತಿಲ್ಲ. ಹೀಗಾದ್ರೆ ಕೇಂದ್ರ ಸರ್ಕಾರದ ಒಂದು ಬೆಳೆ ಒಂದು ಉತ್ಪನ್ನ ಯೋಜನೆ ಹೇಗೆ ಯಶಸ್ವಿಯಾಗಲು ಸಾಧ್ಯ. ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡು ಹೆಚ್ಚಿನ ಅನುದಾನ ಒದಗಿಸಿ ಮಂಡಳಿಯ ಕಾರ್ಯಚಟುವಟಿಕೆ ಕ್ರಿಯಾಶೀಲವಾಗುವಂತೆ ಮಾಡಬೇಕು ಅನ್ನೋದು ಬೆಳೆಗಾರರ ಮಾತಾಗಿದೆ.