ಭಟ್ಕಳ: ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಹಿರಿಯ ಕಾರ್ಯಕರ್ತ ದಿ. ಸಚಿನ್ ಮಹಾಲೆ ಅವರಿಗೆ ಭಟ್ಕಳ ಬಿಜೆಪಿ ಮಂಡಲ ವತಿಯಿಂದ ಇಲ್ಲಿನ ಮಣ್ಕುಳಿಯ ಬಿಜೆಪಿ ಕಾರ್ಯಾಲಯದಲ್ಲಿ ರವಿವಾರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಸಚಿನ್ ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಬಾಲ್ಯ ಜೀವನದಿಂದ ಸಚಿನ ಮಹಾಲೆ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಭಟ್ಕಳ ಬಿಜೆಪಿ ಮಂಡಲಕ್ಕೆ ಇವರ ಸೇವೆ ಅನನ್ಯವಾಗಿದೆ. ಭಟ್ಕಳದಲ್ಲಿ ಯಾವುದೇ ಚುನಾವಣೆ ಬಂದರೂ ನಾನು ನಿಮ್ಮ ಜೊತೆಯಲ್ಲಿದ್ದೇನೆ ಎಂದು ಮುಂದೆ ಬಂದು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು. ತಮ್ಮ ಊರಿನಲ್ಲಿ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಕಾರ್ಯಕ್ರಮವಾಗಲಿ, ಅದಕ್ಕೆ ಬರುವಂತೆ ಕರೆ ಮಾಡಿ ತಿಳಿಸುತ್ತಿದ್ದ ಪ್ರಥಮ ವ್ಯಕ್ತಿ ಎಂದರೆ ಅದು ಸಚಿನ್ ಮಹಾಲೆ ಆಗಿದ್ದರು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ನಮ್ಮನ್ನು ಗೌರವಿಸುವ ಕೆಲಸ ಕೂಡ ಮಾಡುತ್ತಿದ್ದರು. ಆದರೆ ಈಗ ಅವರು ನಮ್ಮೆಲ್ಲರನ್ನು ಬಿಟ್ಟು ಅಗಲಿ ಹೋಗಿದ್ದಾರೆ. ೨೦೧೮ರ ಚುನಾವಣೆ ವೇಳೆ ಪ್ರಾಮಾಣಿಕವಾಗಿ ಸಂಪೂರ್ಣ ಲೆಕ್ಕಾಚಾರದ ಕೆಲಸವನ್ನು ಒಂದು ರೂಪಾಯಿ ತೆಗೆದುಕೊಳ್ಳದೆ ಮಾಡಿದ್ದಾರೆ. ಅದೇ ರೀತಿ ಅವರ ಪತ್ನಿ ಕೂಡ ಬಿಜೆಪಿ ಮಹಿಳಾ ಮಂಡಲದ ಸದಸ್ಯರಾಗಿದ್ದು ಅವರು ಕೂಡ ಚುನಾವಣೆ ವೇಳೆ ಪಕ್ಷದ ಗೆಲುವಿಗೆ ಬಹಳಷ್ಟು ಶ್ರಮ ವಹಿಸಿದ್ದಾರೆ. ಸಚಿನ್ ಮಹಾಲೆಯವರ ಕುಟುಂಬಕ್ಕೆ ಭಟ್ಕಳ ಬಿಜೆಪಿ ಮಂಡಲದಿಂದ ನೇರವಾಗಿ ನಮ್ಮ ಕೈಲಾಗುವಷ್ಟು ಸೇವೆ ಸಲ್ಲಿಸೋಣ ಎಂದರು.

ಸಚಿನ್ ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಮುಖಂಡ ಸುಬ್ರಾಯ ದೇವಡಿಗ ಮಾತನಾಡಿದರು.

ಭಟ್ಕಳ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ, ೩೫ ವರ್ಷದಿಂದ ಒಂದೇ ಪಕ್ಷದಲ್ಲಿದ್ದ ಬಿಜೆಪಿಯ ಹಿರಿಯ ಕಾರ್ಯಕರ್ತ ಸಚಿನ್ ಮಹಾಲೆ ಕಳೆದ ೧೫ ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ದುರಾದೃಷ್ಟ, ನಾವು ಯಾರೂ ಅವರ ಆರೋಗ್ಯ ವಿಚಾರಿಸಲು ಹೋಗಲು ಸಾಧ್ಯವಾಗಿಲ್ಲ. ಇದಕ್ಕೆ ಏನೇ ಕಾರಣ ಕೊಡಬಹುದು. ನಮ್ಮೊಂದಿಗೆ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ ಕಾರ್ಯಕರ್ತನನ್ನು ನಾವು ನೋಡಲು ಹೋಗದೆ ಇರುವುದು ನಮ್ಮಿಂದಲೇ ತಪ್ಪಾಗಿದೆ. ಕಾರ್ಯಕರ್ತರು ಕಷ್ಟದಲ್ಲಿರುವ ವೇಳೆ ಇಷ್ಟು ಮಾಡದೆ ಹೋದರೆ ನಾವು ಕಾರ್ಯಕರ್ತರಿಗೆ ಏನು ಮಾಡಲು ಸಾಧ್ಯ. ಒಬ್ಬ ಸಾಮಾನ್ಯ ಕಾರ್ಯಕರ್ತ ಸಾವನ್ನಪ್ಪಿದ್ದಾಗ ಅವರಿಗೆ ಸಾಂತ್ವನ ಹೇಳಲು ಸಾಧ್ಯವಾಗುತ್ತಿಲ್ಲ. ಈಗ ಸಚಿನ್ ಮಹಾಲೆ, ನಾಳೆ ನಾವು. ಇದು ಬದಲಾವಣೆಯಾಗ ಬೇಕು ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ಶ್ರದ್ಧಾಂಜಲಿ ಸಭೆ ಜೂನ್ ೧೬ರಂದು

ಯಾರೇ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ ವೇಳೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಫೋಟೋ ಫ್ರೆಮ್ ಹಾಕಿ ತರುವಂತೆ ಹೇಳಿದರೆ, ಸಚಿನ್ ಮಹಾಲೆ ಯಾವುದೇ ಹಣ ಪಡೆದುಕೊಳ್ಳದೆ ಕೆಲಸ ಮಾಡುತ್ತಿದ್ದ. ಆದರೆ ಆತನ ಶ್ರದ್ಧಾಂಜಲಿ ಮಾಡುವ ಸಮಯ ಈಗ ಬಂದಿರುವುದು ದುರಂತ. ಆ ಕುಟುಂಬಕ್ಕೆ ಪಕ್ಷದವರಾದ ನಾವಿದ್ದೇವೆ ಎನ್ನುವ ಕಾಲ ಈಗ ಬಂದಿದೆ. ಯಾವುದೇ ರೀತಿಯಲ್ಲಾದರೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಾದ ನಾವೆಲ್ಲ ಸೇರಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸುಬ್ರಾಯ ದೇವಡಿಗ ಹೇಳಿದರು.

ಪಕ್ಷ ಬಲಿಷ್ಠವಾದಂತೆ ನಾಯಕರು ಕೂಡ ಬಲಿಷ್ಠರಾಗುತ್ತಾರೆ. ಆದರೆ ಕಾರ್ಯಕರ್ತ ಮಾತ್ರ ಮೊದಲಿನಂತೆ ಕುಗ್ಗುತ್ತಿರುತ್ತಾನೆ. ಈ ರೀತಿಯಾದರೆ ಮುಂದಿನ ದಿನಗಲ್ಲಿ ಪಕ್ಷಕ್ಕೆ ಕೆಲಸ ಮಾಡಲು ಯಾವ ಕಾರ್ಯಕರ್ತನೂ ಇಲ್ಲದಿರುವ ಪರಿಸ್ಥಿತಿ ಬರುತ್ತದೆ. ಏನೋ ಒಂದು ಪಕ್ಷದ ಬಗ್ಗೆ ಹುಚ್ಚು , ಹಿಂದುತ್ವವನ್ನು ತಲೆಯಲ್ಲಿಟ್ಟುಕೊಂಡು ಯಾವ ನಾಯಕರು ಏನೇ ಮಾಡಲಿ ನನಗೆ ಪಕ್ಷ ಮುಖ್ಯ ಎಂದು ಹೇಳಿಕೊಂಡು ಓಡಾಡುವ ಕಾರ್ಯಕರ್ತರು ಇರುವುದರಿಂದ ನಮ್ಮ ಪಕ್ಷ ಇಲ್ಲಿಯ ತನಕ ಜೀವಂತವಾಗಿದೆ. ಬೇರೆ ಪಕ್ಷದಲ್ಲಿ ಇರುವಂತೆ ನಾಯಕರು ಬಂದರೆ ಮಾತ್ರ ಅವರ ಒಟ್ಟಿಗೆ ಹೋಗುತ್ತೇನೆ. ಅವರ ಜೇಬಿನಿಂದ ಹಣ ಖರ್ಚು ಮಾಡಿದರೆ ಮಾತ್ರ ಕೆಲಸ ಮಾಡುತ್ತೇನೆ ಎಂಬ ಧೋರಣೆ ನಮ್ಮ ಕಾರ್ಯಕರ್ತರದ್ದಾಗಿದ್ದರೆ, ನಮ್ಮ ಪಕ್ಷ ಈ ಮಟ್ಟಿಗೆ ಬೆಳೆಯಲು ಸಾಧ್ಯವಿರಲಿಲ್ಲ.
ಸುಬ್ರಾಯ ದೇವಡಿಗ, ಬಿಜೆಪಿ ಮಾಜಿ ಅಧ್ಯಕ್ಷ, ಭಟ್ಕಳ ಮಂಡಲ

ಸಚಿನ್ ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಮಾತನಾಡಿದರು.

ಬಿಜೆಪಿ ಹಿರಿಯ ಮುಖಂಡ ಗೋವಿಂದ ನಾಯ್ಕ ಮಾತನಾಡಿ, ೧೯೯೩ರಲ್ಲಿ ಒಂದು ಸಣ್ಣ ದುರಂತವಾದರು ಸಹ ಕಾರ್ಯಾಕರ್ತರ ಮನೆಗೆ ತಂಡೋಪತಂಡವಾಗಿ ಭೇಟಿ ನೀಡುವ ವ್ಯವಸ್ಥೆ ಇತ್ತು. ಆದರೆ ಈಗ ಅದನ್ನು ನಾವು ಎಲ್ಲೋ ಮರೆತಿದ್ದೇವೆ ಎಂದು ಅನಿಸುತ್ತಿದೆ. ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಬಳಲುತ್ತಿರಬೇಕಾದರೆ ನಮ್ಮಿಂದ ಏನು ಮಾಡಲು ಸಾಧ್ಯವಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಾವು ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳುವ ಕೆಲಸ ಮಾಡಬೇಕಿತ್ತು. ಆದರೆ ನಮ್ಮಿಂದ ಆಗಿಲ್ಲ. ಅದು ಬಹಳ ದುಃಖದ ಸಂಗತಿಯಾಗಿದೆ. ನಮಗೆ ತುಂಬಾ ನೋವಾಗಿದೆ. ನಾವೆಲ್ಲ ಸಚಿನ ಮಹಾಲೆ ಚೇತರಿಸಿಕೊಂಡು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವು. ಯಾವ ಕಾರ್ಯಕರ್ತರು ಕಷ್ಟದಲ್ಲಿರುವ ವೇಳೆ, ಅವರಿಗೆ ಆರ್ಥಿಕ ಸಹಾಯಕ್ಕಿಂತ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಹಿತವಚನ ಹೇಳುವ ಒಂದು ಕಾರ್ಯಕರ್ತರ ತಂಡವಾಗಬೇಕು ಎಂದರು.

ಇದನ್ನೂ ಓದಿ : ಸಚಿನ್ ಮಹಾಲೆ ನಿಧನಕ್ಕೆ ಗಣ್ಯರ ಕಂಬನಿ

ಸಚಿನ್ ಮಹಾಲೆ ಚಿಕ್ಕವರಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡರು. ಅವರ ಸಹೋದರರಾದ ವಿವೇಕ ಮಹಾಲೆಯೊಂದಿಗೆ ಸೇರಿ ಚಿಕ್ಕವರಿದ್ದಾಗಲೇ ಕಷ್ಟವನ್ನು ಅನುಭವಿಸಿ ಜವಾಬ್ದಾರಿ ನಿರ್ವಹಿಸಿಕೊಂಡು ಬಂದಿದ್ದರು. ಯಾರ ಮುಂದೆಯೂ ಕೈ ಚಾಚದೆ ಸ್ವಾಭಿಮಾನದಿಂದ ಬದುಕಿಕೊಂಡು ಬಂದಿರುವ ಕುಟುಂಬ. ನಾವೆಲ್ಲ ಏನು ಮಾಡಬೇಕು ಎಂದು ಚಿಂತನೆ ಮಾಡಿ. ನಮ್ಮಿಂದಾಗುವ ಸಹಾಯ ಮಾಡಿ ಅವರ ಕುಟುಂಬಕ್ಕೆ ಅಸರೆಯಾಗೋಣ ಎಂದು ಬಿಜೆಪಿ ಮಂಡಲ ಅಧ್ಯಕ್ಷರಿಗೆ ಸೂಚನೆ ನೀಡಿದರು. ನಾವು ನಿರಂತರವಾಗಿ ಕಾರ್ಯಕರ್ತರ ಸಂಪರ್ಕದಲ್ಲಿರಬೇಕು. ಯಾವುದೇ ಸಣ್ಣ ಘಟನೆಯಾದರೂ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದು ಗೋವಿಂದ ನಾಯ್ಕ ಹೇಳಿದರು.

ನಾವು ಅಧಿಕಾರಕ್ಕೆ ಬಂದಾಗ ಸಮಾಜಕ್ಕೆ ಏನಾದರೂ ಒಂದು ಕಿಂಚಿತ್ತು ವಿನಿಯೋಗ ಮಾಡಿ ಇಡಬೇಕು. ಭಟ್ಕಳದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರಿಗೆ ಯಾವುದೇ ರೀತಿ ಗಂಡಾಂತರ ಬರಬಹುದು. ಇದಕ್ಕಾಗಿ ಬಿಜೆಪಿ ಮಂಡಲ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆ ಸೇರಿ ಮೂಲಭೂತ ಸೌಕರ್ಯ ಏನು ಬೇಕು ಎಂದು ನಾವೆಲ್ಲ ಕುಳಿತು ಯೋಚನೆ ಮಾಡಬೇಕು. ಹಾಗೆ ಆರ್ಥಿಕವಾಗಿ ಸದೃಢವಾಗದೆ ಇದ್ದರೆ ಅದರ ಅರಿವು ಮುಂದಿನ ದಿನಗಳಲ್ಲೇ ಗೊತ್ತಾಗುತ್ತದೆ. ಅದಕ್ಕಾಗಿ ಉಳ್ಳವರೆಲ್ಲ ಸೇರಿ ಕಾರ್ಯಕರ್ತರ ಸಹಾಯಕ್ಕೆ ಮುಂದಾಗುವ ಯೋಚನೆ ಮಾಡಬೇಕು.
ಗೋವಿಂದ ನಾಯ್ಕ, ಬಿಜೆಪಿ ಹಿರಿಯ ಮುಖಂಡ

ಸಚಿನ್ ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿದರು.

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, ಸಚಿನ್ ಮಹಾಲೆ ಕೋವಿಡ್ ಸಮಯದಲ್ಲಿ ತಮ್ಮ ಮನೆಯಲ್ಲಿ ಕಷ್ಟವಿದ್ದರೂ ತೋರಿಸಿಕೊಂಡವರಲ್ಲ. ನನ್ನ ಬಳಿ, ಕೃಷ್ಣ ನಾಯ್ಕ ಹಾಗೂ ಸುನೀಲ ನಾಯ್ಕರಿಂದ ದಿನಸಿ ಪಡೆದು ಬಡವರ ಮನೆ ಪಟ್ಟಿ ತಯಾರಿಸಿ ಅವರ ಮನೆಗಳಿಗೆ ನೀಡುತ್ತಿದ್ದ ಪರೋಪಕಾರಿ ಮನೋಭಾವನೆ ಇದ್ದವರಾಗಿದ್ದರು. ಇಂತಹ ವ್ಯಕ್ತಿಯ ಸಾವು ನಮಗೆ ತುಂಬಲಾರದ ನಷ್ಟ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿನ್ ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಮಾತನಾಡಿದರು.

ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಆಸರಕೇರಿ, ಕೃಷ್ಣ ನಾಯ್ಕ ಆಸರಕೇರಿ, ಭಟ್ಕಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ದಿನೇಶ ನಾಯ್ಕ, ವಕೀಲರಾದ ರಾಜೇಶ ನಾಯ್ಕ, ದತ್ತಾತ್ರೇಯ ನಾಯ್ಕ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ, ಪಾಂಡುರಂಗ ನಾಯ್ಕ ಆಸರಕೇರಿ, ವೆಂಕಟೇಶ ನಾಯ್ಕ ಸೋನಾರಕೇರಿ ಮತ್ತಿತರರು ಸಚಿನ್ ಮಹಾಲೆಯವರ ಆತ್ಮಕ್ಕೆ ಶಾಂತಿ ಕೋರಿ, ಶ್ರದ್ಧಾಂಜಲಿ ಅರ್ಪಿಸಿದರು.

ಸಚಿನ್ ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಮುಖಂಡ, ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ಮಾತನಾಡಿದರು.

ಇದಕ್ಕೂ ಪೂರ್ವದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸಚಿನ್ ಮಹಾಲೆಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಒಂದು ನಿಮಿಷ ಮೌನ ಆಚರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಲಾಯಿತು.

ಸಚಿನ್ ಮಹಾಲೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿವಾನಿ ಶಾಂತಾರಾಮ ಮಾತನಾಡಿದರು.