ಭಟ್ಕಳ : ಅಕಾಲಿಕ ನಿಧನರಾದ ಸಾಮಾಜಿಕ, ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಸಚಿನ್ ಮಹಾಲೆಯವರ ಸಾಮಾಜಿಕ ಕಳಕಳಿ, ಸರಳತೆ, ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದಿಂದ ಇದ್ದುದನ್ನು ಹಲವರು ಸ್ಮರಿಸಿಕೊಂಡಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಸಚಿನ್ ಅಗಲುವಿಕೆ‌ ನಿಜಕ್ಕೂ ಆಘಾತಕಾರಿ. ನಿಸ್ವಾರ್ಥ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಸಚಿನ್ ತನ್ನ ವ್ಯಕ್ತಿತ್ವದಿಂದಲೇ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರನಾದವನು. ಸ್ನೇಹಿತನ ಅಕಾಲದಲ್ಲಿನ ಅಗಲುವಿಕೆ ಇನ್ನೂ ಒಪ್ಪಿಕೊಳ್ಳಲಾಗುತ್ತಿಲ್ಲ. ಹೈಸ್ಕೂಲಿನಲ್ಲಿ ನಾವೆಲ್ಲರೂ ಜೊತೆಯಾಗಿ ಓದಿದವರು. ಅಂದಿನಿಂದ ಇಂದಿನವರೆಗೂ ಸಚಿನ್ ನ ಮಾತು, ನಡೆನುಡಿಯಲ್ಲಿ ಅದೇ ಸರಳತೆ, ಅದೇ ಪ್ರೀತಿ. ಅನಾರೋಗ್ಯ ಕಾಡುತ್ತಿದ್ದರೂ ಅದನ್ನೆಂದೂ ಯಾರೆದುರಲ್ಲೂ ತೋರಿಸಿಕೊಂಡವನಲ್ಲ. ಸದಾ ನಗುನಗುತ್ತಲೇ ಪ್ರೀತಿಯಿಂದ ಎದುರಾಗುತ್ತಿದ್ದ ಗೆಳೆಯನ ನಗುಮುಖ ಮನದಲ್ಲಿ ಸದಾ ಹಸಿರು. ಭಗವಂತ ಒಳ್ಳೆಯವರನ್ನು ಬಹುಕಾಲ ಭೂಮಿಯಲ್ಲಿ ಇರಲು ಬಿಡಲಾರ ಎಂಬುದನ್ನು ಮತ್ತೆ ಸಾಕ್ಷಿಕರಿಸಿದ್ದಾನೆ. ಅಗಲಿದ ಗೆಳೆಯನಿಗೆ ಶ್ರದ್ಧೆಯ ಶ್ರದ್ಧಾಂಜಲಿ. ಸಚಿನ್ ನ ದಿವ್ಯಾತ್ಮಕ್ಕೆ ಚಿರಶಾಂತಿ ದೊರಕಲಿ. ಕುಟುಂಬ ವರ್ಗಕ್ಕೆ ಸ್ನೇಹಿತರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಸಚಿನ್ ನ ಹೆಸರು ಭಟ್ಕಳದ ಸಾಮಾಜಿಕ ಕ್ಷೇತ್ರದಲ್ಲಿ ಸದಾ ಅಮರ.
ಗಂಗಾಧರ ನಾಯ್ಕ, ಅಧ್ಯಕ್ಷ, ಕಸಾಪ, ಭಟ್ಕಳ.

ಬಿಜೆಪಿ ಭಟ್ಕಳ ಮಂಡಲದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಸಚಿನ್ ಮಹಾಲೆ, ಭಟ್ಕಳ ಮಂಡಲದಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ನಮ್ಮೆಲ್ಲರ ಆತ್ಮೀಯ ಒಡನಾಡಿ ಭಟ್ಕಳ ನಗರದ ಕ್ರಿಯಾಶೀಲ ವ್ಯಕ್ತಿತ್ವದ ಹಿರಿಯ ಕಾರ್ಯಕರ್ತರಾದ ಸಚಿನ್ ಮಹಾಲೆ ಅವರು ತಾತ್ಕಾಲಿಕ ಅನಾರೋಗ್ಯದಿಂದ ಶಿವಮೊಗ್ಗದ ಆಸ್ಪತ್ರೆಯಲ್ಲಿ ಅಕಾಲಿಕವಾಗಿ ನಮ್ಮನ್ನು ಅಗಲಿರುವುದು ನಂಬಲು ಸಾಧ್ಯವಾಗುತ್ತಿಲ್ಲ. ಆತ್ಮೀಯ ಸಹೋದರ ಸಚಿನ್ ಅವರ ಆತ್ಮಕ್ಕೆ ಹೃದಯಂತರಾಳದಿಂದ ದುಃಖ ವ್ಯಕ್ತಪಡಿಸುತ್ತಾ, ಅವರ ಆತ್ಮಕ್ಕೆ ಶ್ರೀ ದೇವರು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸೋಣ.
ಭಟ್ಕಳ ಶಿವಾನಿ ಶಾಂತಾರಾಮ, ಜಿಲ್ಲಾಧ್ಯಕ್ಷೆ, ಬಿಜೆಪಿ ಮಹಿಳಾ‌ ಮೋರ್ಚಾ, ಉ.ಕ.
ಶ್ರೀಕಾಂತ ನಾಯ್ಕ, ಜಿಲ್ಲಾ ಕಾರ್ಯದರ್ಶಿ, ಬಿಜೆಪಿ, ಉ.ಕ.

ಸಚಿನ್ ಮಹಾಲೆ ಅವರ ಅಗಲಿಕೆ ನಮ್ಮ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಚುನಾವಣಾ ಸಂದರ್ಭದಲ್ಲಿ ಪಕ್ಷಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಪಕ್ಷ ಎಂದಿಗೂ ಸ್ಮರಿಸುತ್ತದೆ. ಇವರ ಕುಟುಂಬದೊಂದಿಗೆ ನಾನು ಮತ್ತು ನಮ್ಮ ಪಕ್ಷ ಸದಾ ನಿಲ್ಲಲಿದ್ದೇವೆ. ಆತ್ಮೀಯ ಸಹೋದರ ಸಚಿನ್ ಮಹಾಲೆ ಅವರ ಆತ್ಮಕ್ಕೆ ಶ್ರೀ ದೇವರು ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಶ್ರೀ ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.
ಸುನೀಲ ನಾಯ್ಕ, ಮಾಜಿ ಶಾಸಕ, ಭಟ್ಕಳ.

ಪಕ್ಷದಿಂದ ಕಳೆದ ಪುರಸಭಾ ಚುನಾವಣೆ ಆಕಾಂಕ್ಷೆಯಾಗಿದ್ದರು ಕೂಡ ಪಕ್ಷದ ತೀರ್ಮಾನದಂತೆ ಪಕ್ಷದ ಗೆಲುವಿಗೆ ಕಾರಣೀಕರ್ತರಾಗಿದ್ದರು. ನಮ್ಮದೇ ಪಕ್ಷ ಅಧಿಕಾರ ಬಂದ ಸಂದರ್ಭದಲ್ಲಿ ಪುರಸಭೆ ನಾಮನಿರ್ದೇಶನ ಸದಸ್ಯತ್ವಕ್ಕೆ ಅಕಾoಕ್ಷಿಯಾಗಿದ್ದರು ಕೂಡ. ಅದು ಸಿಗದಿದ್ದಾಗಲೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಕಾರ್ಯಕ್ರಮಕ್ಕಿಂತ ಮೊದಲು ಬಂದು ತಯಾರಿ ಮಾಡಿ ಪ್ರತಿ ಕಾರ್ಯಕ್ರಮ ಯಶಸ್ವಿಗೊಳಿಸುವಲ್ಲಿ ಕಾರಣೀಕರ್ತರಾಗುತ್ತಿದ್ದರು. ನಮ್ಮ ಅದೆಷ್ಟೋ ಸಣ್ಣ ಸಭೆಗಳು ಅವರ ಅಂಗಡಿಯಲ್ಲೇ ನಡೆಯುತ್ತಿದ್ದವು. ಸದಾ ಗೌರವದಿಂದ ಮೋಹನಣ್ಣ ಎಂದು ಕರೆಯುತಿದ್ದ ಅದೇ ಸಚಿನ್ ಮಹಾಲೆ ನಮ್ಮನ್ನಗಲಿದ್ದಾನೆ ಅಂದರೆ ನಂಬಲೇ ಆಗಲಿಲ್ಲ. ಎಷ್ಟು ಹೇಳಿದರೂ ವಿಷಯನೇ ಮುಗಿಯಲ್ಲ. ಇನ್ನು ನೀನು ನೆನಪು ಮಾತ್ರ. ನಿನ್ನ ಆದರ್ಶ ನಮಗೆಲ್ಲರಿಗೂ ದಾರಿದೀಪವಾಗಲಿ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ನಿನ್ನ ಅಗಲುವಿಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕುಟುಂಬಕ್ಕೆ ಆ ದೇವರು ದಯಪಾಲಿಸಲಿ. ಓಂ ಶಾಂತಿ.
ಮೋಹನ ನಾಯ್ಕ, ಬಿಜೆಪಿ ಮುಖಂಡ, ಭಟ್ಕಳ.

ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಒಂದೇ ಒಂದು ಮಾತಿಗೆ ನಿರ್ಣಾಯಕರಾಗಿ ಬಂದು ಕಾರ್ಯನಿರ್ವಹಿಸುತ್ತಿದ್ದವರು ಸಚಿನ್ ಮಹಾಲೆ. ದಿವಂಗತ ಸಚಿನ್ ಮಹಾಲೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ದೈವಜ್ಞ ಸ್ಪೋರ್ಟ್ಸ್ ಕ್ಲಬ್, ಸೋನಾರಕೇರಿ.

ಸಾಮಾಜಿಕ, ಧಾರ್ಮಿಕ, ರಾಜಕೀಯ…. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಆತ್ಮೀಯ ಸಚಿನ್ ಮಹಾಲೆ ತೀವ್ರ ಅನಾರೋಗ್ಯದಿಂದ ನಿಧನ ಹೊಂದಿದ್ದು ದುಃಖದಾಯಕ. ಇಂತಹ ಸಂದರ್ಭದಲ್ಲಿ ಅವರ ಕುಟುಂಬ ವರ್ಗಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ. ಸದ್ಗತಿ.
ಪಾಂಡುರಂಗ ಭಟ್ಕಳ, ಜೀವ ವಿಮೆ ಸಲಹೆಗಾರ, ಭಟ್ಕಳ.

ಇದನ್ನೂ ಓದಿ : ಬಿಜೆಪಿ ಕಾರ್ಯಕರ್ತ ಸಚಿನ್ ಮಹಾಲೆ ಶ್ರದ್ಧಾಂಜಲಿ ಸಭೆ ಜೂನ್ ೧೬ರಂದು