ಭಟ್ಕಳ: ಹನುಮನ ಭಕ್ತಿ, ಭೀಮನ ಕರ್ತೃತ್ವ ಶಕ್ತಿ, ಮಧ್ವಾಚಾರ್ಯರ ವಿರಕ್ತಿ ನಮ್ಮೆಲ್ಲರ ಆದರ್ಶವಾಗಿದ್ದು, ಸನಾತನ ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಉಡುಪಿ ಅದಮಾರುಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ನುಡಿದರು.

ಅವರು ನಗರದ ಮಣ್ಣುಳಿ ಶ್ರೀ ಹನುಮಂತ ಮತ್ತು ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣವಾಗುವ ದೇವಾಲಯದ ನಿಧಿಕುಂಭ ಪೂರ್ವದ ಷಠಾದಾರದ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಇದನ್ನೂ ಓದಿ: ಮಹಿಳೆಯ ಹೊಟ್ಟೆಯಲ್ಲಿತ್ತು 5 ಕೆಜಿ ಗಡ್ಡೆ

ವರ್ತಮಾನದಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸುತ್ತಿವೆ. ತಂದೆ ತಾಯಿ ಮಕ್ಕಳು, ಗುರು ಶಿಷ್ಯ ಎಲ್ಲ ಕಡೆ ಕಂದಕಗಳು ನಿರ್ಮಾಣವಾಗುತ್ತಿವೆ. ಪಾಶ್ಚಿಮಾತ್ಯ ಸಂಸ್ಕೃತಿ ಪಶು ಸಂಸ್ಕೃತಿಯಾಗಿದ್ದು, ಭಾರತೀಯ ಸಂಸ್ಕೃತಿಯಿಂದ ಭವ್ಯತೆ ಸಾಧ್ಯ ಇದೆ. ಭಕ್ತಿ ಎನ್ನುವುದು ಪ್ರೀತಿಯಾಗಿದೆ. ಭಾರತೀಯ ಸಂಸ್ಕೃತಿಯ ನಾಶ ಯಾರಿಂದಲೂ ಸಾಧ್ಯ ಇಲ್ಲ ಎಂದು ವಿವರಿಸಿದರು.

ಸಚಿವ ಮಂಕಾಳ ವೈದ್ಯ ಮಾತನಾಡಿ, ದೇವಸ್ಥಾನ ನಿರ್ಮಾಣ ಪುಣ್ಯದ ಕೆಲಸವಾಗಿದೆ. ಶಾಲೆ, ದೇವಸ್ಥಾನ, ಮಠಗಳಿಗೆ ನೀಡುವುದು ಎಂದರೆ ಜನರಿಗೆ ನೀಡುವುದು ಅಂತೇ ಅರ್ಥ. ಎಲ್ಲರೂ ಮಠ, ಮಂದಿರಗಳಿಗೆ ಶರಣಾದರೆ ಒಳಿತಾಗಲಿದೆ ಎಂದರು.

ಮಣ್ಣುಳಿ ಶ್ರೀ ಹನುಮಂತ ಮತ್ತು ಶ್ರೀ ಲಕ್ಷ್ಮೀನಾರಾಯಣ ಟ್ರಸ್ಟ್ ಅಧ್ಯಕ್ಷ ನಾರಾಯಣ ಎಮ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಜಿ. ಪ್ರಭು ಮಾತನಾಡಿದರು. ದೇವಸ್ಥಾನದ ಮೊಕ್ತೇಸರ ಶ್ರೀ ಮಹಾಬಲೇಶ್ವರ ಶೆಟ್ಟಿ, ಹಾಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ ಶೆಟ್ಟಿ, ನಿವೃತ್ತ ವಿಮಾ ಅಧಿಕಾರಿ ಮಂಜುನಾಥ ಶೆಟ್ಟಿ, ಉದ್ಯಮಿ ವಿನಾಯಕ ಶೆಟ್ಟಿ ಮುಂಬಯಿ ಉಪಸ್ಥಿತರಿದ್ದರು.

ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸುಭಾಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಮೂರ್ತಿ ಶೆಟ್ಟಿ ಸ್ವಾಗತಿಸಿದರು. ಸಿಂಚನಾ ಪ್ರಾರ್ಥನೆ ಹಾಡಿದರು. ರಾಜೇಶ ಶೆಟ್ಟಿ ವಂದಿಸಿದರು. ಮನೋಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.