ಕಾರವಾರ : ವೈದ್ಯರು ರೋಗ ಬಂದ ಮೇಲೆ ಚಿಕಿತ್ಸೆ ನೀಡಿದರೆ ಪೌರ ಕಾರ್ಮಿಕರು ಪರಿಸರವನ್ನು ಸ್ವಚ್ಚಗೊಳಿಸಿ, ಸಾರ್ವಜನಿಕರಿಗೆ ರೋಗಗಳು ಹರಡದಂತೆ ನೈರ್ಮಲ್ಯ ಕಾಪಾಡುವ ವೈದ್ಯರು ಎಂದು ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ಇದನ್ನೂ ಓದಿ : ಜಿಲ್ಲೆಯ ಎಲ್ಲ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲು ಬದ್ದ: ಸಚಿವ ವೈದ್ಯ
ಅವರು ಇಂದು(ಮಾ.೧೧) ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಉತ್ತರ ಕನ್ನಡ ನಗರ ಸ್ಥಳೀಯ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ರವೀಂದ್ರನಾಥ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಆಯೋಜಿಸಿದ್ದ ಸ್ವಚ್ಚತಾ ಕಾರ್ಮಿಕರ ಅರಿವು ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ : ಉಸ್ತುವಾರಿ ಸಚಿವರನ್ನು ಭೇಟಿಯಾದ ಶರಾಬ್ಬಿ ಹೋರಾಟ ಸಮಿತಿ https://www.facebook.com/share/p/oUCQJrN46MgVpfYL/?mibextid=Nif5oz
ನಿಸ್ವಾರ್ಥ ಸೇವೆಯ ಮೂಲಕ ನಗರವನ್ನು ಸ್ವಚ್ಚವಾಗಿರಿಸುವ ಪೌರಕಾರ್ಮಿಕರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಪೌರಕಾರ್ಮಿಕರು ಸಂತೋಷದಿಂದ ಇದ್ದರೆ ನಗರವು ಸ್ವಚ್ಚವಾಗಿರುತ್ತದೆ. ಯಾರೂ ಮಾಡದ ಕೆಲಸಗಳನ್ನು ಪೌರಕಾರ್ಮಿಕರು ನಿರ್ವಹಿಸುತ್ತಿದ್ದಾರೆ. ಪೌರಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಒದಗಿಸಲು ಬದ್ಧವಾಗಿದ್ದು, ಜಿಲ್ಲೆಯಲ್ಲಿ ಪ್ರಥಮಾದ್ಯತೆಯಲ್ಲಿ ಮನೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 127 ಪೌರ ಕಾರ್ಮಿಕರನ್ನು ಪ್ರಥಮ ಹಂತದಲ್ಲಿ ಕಾಯಂ ನೌಕರರನ್ನಾಗಿ ಇಂದು ನೇಮಕ ಮಾಡಲಾಗುತ್ತಿದ್ದು, ಬಾಕಿ ಉಳಿದಿರುವ 44 ಪೌರ ಕಾರ್ಮಿಕರನ್ನು ಶೀರ್ಘದಲ್ಲಿ ಕಾಯಂ ನೌಕಕರನ್ನಾಗಿ ನೇಮಕ ಮಾಡಲಾಗುವುದು. ಇನ್ನೂ 88 ಪೌರಕಾರ್ಮಿಕರನ್ನು ಹಂತ ಹಂತವಾಗಿ ಕಾಯಂ ನೌಕರರನ್ನಾಗಿ ನೇಮಕ ಮಾಡಲಾಗುವುದು ಎಂದರು.
ಪೌರಕಾರ್ಮಿಕರು ದುಶ್ಚಟಗಳಿಂದ ದೂರ ಉಳಿದು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸದೇ ಅವರಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವಂತೆ ಪ್ರಯತ್ನಿಸಬೇಕು ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಪೌರ ಕಾರ್ಮಿಕರ ಹಲವು ವರ್ಷಗಳ ಕನಸು ಇಂದು ನನಸಾಗುತ್ತಿದ್ದು, 127 ಪೌರ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ನೇಮಕ ಮಾಡಲಾಗಿದೆ. ಅವರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸುವ ಜೊತೆಗೆ ಅವರಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಮೂಲಭೂತ ಸೌಕರ್ಯ ಒದಗಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳ 127 ಪೌರಕಾರ್ಮಿಕರಿಗೆ ಕಾಯಂ ನೇಮಕಾತಿ ಆದೇಶದ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಭೀಮಣ್ಣ ಟಿ ನಾಯ್ಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೇಲಾ ವರ್ಗಿಸ್ , ಸಫಾಯಿ ಕರ್ಮಚಾರಿಗಳ ಜಿಲ್ಲಾ ಮಟ್ಟದ ಜಾಗೃತ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಮಾಲ ಹುಲಸ್ವಾರ, ಹನುಮಂತ ತಳವಾರ, ರಮೇಶ್ ಬಾಬು ಬುದಾಲ್, ಶಿವಶಂಕರ, ನಾಗೇಶ ಹರಿಜನ, ಮಂಜೇಶ್ವರ ಮತ್ತಿತರರು ಇದ್ದರು.