ಭಟ್ಕಳ ಡೈರಿ ವರದಿ

ಭಟ್ಕಳ: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಸಾಧ್ಯತೆಗಳನ್ನು ತೆರೆದಿಡುವ ಸಂಶೋಧನೆ ನಡೆಸಿರುವ ಡಾ. ಎನ್. ಎಸ್. ಚಂದನಶ್ರೀ ಅವರು ಬೆಂಗಳೂರಿನ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನಿಂದ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದಿದ್ದಾರೆ.

ನಿರ್ಮಾಣ ಕ್ಷೇತ್ರದಿಂದ ಉತ್ಪತ್ತಿಯಾಗುವ ಕಾಂಕ್ರೀಟ್ ತ್ಯಾಜ್ಯವನ್ನು ಮರುಬಳಕೆ ಮಾಡಿ ರಸ್ತೆ ನಿರ್ಮಾಣಕ್ಕೆ ಬಳಸುವ ಕುರಿತು ಅವರು ನಡೆಸಿದ ಸಂಶೋಧನೆ ಈ ಸಾಧನೆಯ ಪ್ರಮುಖ ಆಕರ್ಷಣೆಯಾಗಿದೆ.

ತ್ಯಾಜ್ಯದಿಂದ ರಸ್ತೆ ನಿರ್ಮಾಣಕ್ಕೆ ಹೊಸ ಸಾಧ್ಯತೆ: “ಮರುಬಳಕೆಯ ಕಾಂಕ್ರೀಟ್ ಸಮುಚ್ಚಯಗಳನ್ನು ಸುಸ್ಥಿರ ಪೂರಕ ವಸ್ತುಗಳೊಂದಿಗೆ ಮಿಶ್ರಣಗೊಳಿಸಿ ರಸ್ತೆ ಅಡಿಪಾಯ ಮಣ್ಣಿನ ಗುಣಮಟ್ಟವನ್ನು ಸುಧಾರಿಸುವುದು” (Revitalizing Subgrade Soil Using Recycled Concrete Aggregates Mixed with Sustainable Supplementary Materials) ಎಂಬುದು ಅವರ ಸಂಶೋಧನೆಯ ವಿಷಯವಾಗಿದೆ.

ನಿರ್ಮಾಣ ಕ್ಷೇತ್ರದಲ್ಲಿ ಉತ್ಪತ್ತಿಯಾಗುವ ಕಾಂಕ್ರೀಟ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ರಸ್ತೆ ನಿರ್ಮಾಣಕ್ಕೆ ಬಳಸುವ ಅಡಿಪಾಯ ಮಣ್ಣಿನ ಗುಣಮಟ್ಟ ಮತ್ತು ಬಲವರ್ಧನೆಯನ್ನು ಹೆಚ್ಚಿಸುವ ಸಾಧ್ಯತೆಗಳನ್ನು ಈ ಸಂಶೋಧನೆಯಲ್ಲಿ ಅಧ್ಯಯನ ಮಾಡಲಾಗಿದೆ. ಇದರಿಂದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದರ ಜತೆಗೆ, ನಿರ್ಮಾಣ ತ್ಯಾಜ್ಯವನ್ನು ಸಮರ್ಪಕವಾಗಿ ಮರುಬಳಕೆ ಮಾಡಿ ಪರಿಸರ ಸ್ನೇಹಿ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಬಹುದು ಎಂಬ ಆಶಯವನ್ನು ಸಂಶೋಧನೆ ಹೊಂದಿದೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ತಜ್ಞರ ಮಾರ್ಗದರ್ಶನ: ರಾಮಯ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಅನಿತಾ ಕುಮಾರಿ ಎಸ್. ಡಿ. ಅವರು ಸಂಶೋಧನೆಗೆ ಮಾರ್ಗದರ್ಶಕರಾಗಿದ್ದರು. ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಸಂಜಯ್ ನಿಂಬಾಳ್ಕರ್ ಅವರು ಅಂತರರಾಷ್ಟ್ರೀಯ ಸಲಹೆಗಾರರಾಗಿ ಶೈಕ್ಷಣಿಕ ಮಾರ್ಗದರ್ಶನ ನೀಡಿದ್ದಾರೆ.

ಸಂಶೋಧನೆಯ ಮೌಲ್ಯಮಾಪನವನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ತಜ್ಞರು ನಡೆಸಿರುವುದು ವಿಶೇಷವಾಗಿದೆ. ಭುವನೇಶ್ವರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಡೀನ್ ಡಾ. ಸುಮಂತ ಹಲ್ದಾರ್ ಅವರು ರಾಷ್ಟ್ರೀಯ ಮೌಲ್ಯಮಾಪಕರಾಗಿದ್ದರೆ, ಸ್ಪೇನ್‌ನ ಯುನಿವರ್ಸಿಟಿ ಆಫ್ ಕ್ಯಾಟಲೋನಿಯಾದ ಪ್ರಾಧ್ಯಾಪಕ ಡಾ. ಮಾರ್ಕೋಸ್ ಅರೊಯೊ ಅವರು ಅಂತರರಾಷ್ಟ್ರೀಯ ಮೌಲ್ಯಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಅಂತಾರಾಷ್ಟ್ರೀಯ ಸಂಶೋಧನಾ ವೇದಿಕೆಗಳಲ್ಲೂ ಸಾಧನೆ: ಡಾ. ಚಂದನಶ್ರೀ ಅವರು ಪ್ರತಿಷ್ಠಿತ ಸ್ಪ್ರಿಂಗರ್ (Springer) ಪ್ರಕಾಶನದಲ್ಲಿ ೨೦೨೪ ಮತ್ತು ೨೦೨೬ರಲ್ಲಿ ಎರಡು ಸಂಶೋಧನಾ ಅಧ್ಯಾಯಗಳನ್ನು ಪ್ರಕಟಿಸಿದ್ದಾರೆ. ಸುಸ್ಥಿರ ರಸ್ತೆ ನಿರ್ಮಾಣ, ಮರುಬಳಕೆಯ ಕಾಂಕ್ರೀಟ್ ಸಮುಚ್ಚಯಗಳು ಹಾಗೂ ಪರಿಸರ ಸ್ನೇಹಿ ಅಡಿಪಾಯ ವಸ್ತುಗಳಿಗೆ ಸಂಬಂಧಿಸಿದ ನಾಲ್ಕು ಸಂಶೋಧನಾ ಪ್ರಬಂಧಗಳನ್ನೂ ಮಂಡಿಸಿದ್ದಾರೆ.

ಇದರ ಜತೆಗೆ SHODH ೨೦೨೪ ಮತ್ತು ೨೦೨೫ ಸಂಶೋಧನಾ ಸಮ್ಮೇಳನಗಳಲ್ಲಿಯೂ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಿದ್ದಾರೆ.

ಜಪಾನ್, ಗುಜರಾತ್ ಹಾಗೂ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವುದು ಅವರ ಶೈಕ್ಷಣಿಕ ಪಯಣದ ಮತ್ತೊಂದು ವಿಶೇಷತೆಯಾಗಿದೆ.

ನಿರ್ಮಾಣ ತ್ಯಾಜ್ಯವನ್ನು ಪರಿಸರಕ್ಕೆ ಹೊರೆಯಾಗುವ ವಸ್ತುವಾಗಿ ನೋಡದೆ, ಅದನ್ನೇ ಉಪಯುಕ್ತ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಸಂಶೋಧನಾ ಚಿಂತನೆ ಇಂದಿನ ಪರಿಸರ ಕಾಳಜಿಯ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.

ಇವರು ನಿವೃತ್ತ ಪೊಲೀಸ್ ವೃತ್ತ ನಿರೀಕ್ಷಕ ಸುರೇಶ್ ನಾಯಕ ಹಾಗೂ ನಿವೃತ್ತ ಶಿಕ್ಷಕಿ ರಾಜಂ ಹಿಚ್ಕಡ ಇವರ ಪುತ್ರಿ ಮತ್ತು ಪಿಡಿಲೈಟ್ ಕಂಪೆನಿಯ ಬ್ರಾಂಚ್ ಮೆನೇಜರ್ ರಾಘವೇಂದ್ರ ಗಾಂವಕರ ಅವರ ಧರ್ಮಪತ್ನಿ. ಡಾ. ಎನ್. ಎಸ್. ಚಂದನಶ್ರೀ ಅವರ ಈ ಸಾಧನೆಯು ಸಂಶೋಧನೆ ಮತ್ತು ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಗಮನಾರ್ಹ ಮೈಲಿಗಲ್ಲಾಗಿದ್ದು, ಅವರಿಗೆ ಅಭಿನಂದನೆಗಳು ವ್ಯಕ್ತವಾಗಿವೆ.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಭಟ್ಕಳದ ಜಾಲಿ ಗ್ರಾಮದ ಭಾರತಿ ನಾಯ್ಕಗೆ ಡಾಕ್ಟರೇಟ್ ಗೌರವ; ಐದು ವರ್ಷಗಳ ಸಂಶೋಧನೆಗೆ ಮನ್ನಣೆ

ಮಾವಿನಕುರ್ವೆಯ ಸುರೇಶ ಬಸವ ಖಾರ್ವಿಗೆ ಎರಡು ರಾಜ್ಯ ಮಟ್ಟದ ಪ್ರಶಸ್ತಿಗಳ ಗರಿ