ಭಟ್ಕಳ: ಹೊಸದಾಗಿ ನಿರ್ಮಿಸಿದ್ದ ಮುರಿನಕಟ್ಟೆ (Murinakatte) ನಾಶಪಡಿಸಿದ ಘಟನೆಯನ್ನು ಖಂಡಿಸಿರುವ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಹಾಗೂ ಸಮಸ್ತ ಹಿಂದೂ ಪರಿವಾರದ ವತಿಯಿಂದ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮರುನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ೪೮ ಗಂಟೆಗಳ ಗಡುವು ನೀಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪಟ್ಟಣದ ಮೂಡಭಟ್ಕಳದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಭಟ್ಕಳದ ಮುಖಂಡ ರಾಮಕೃಷ್ಣ ನಾಯ್ಕ ಮಾತನಾಡಿ, ಮುರಿನಕಟ್ಟೆ (Murinakatte) ಅನಾದಿಕಾಲದಿಂದಲೂ ಧಾರ್ಮಿಕ ಸಂಪ್ರದಾಯದೊಂದಿಗೆ ಬೆಸೆದುಕೊಂಡಿರುವ ಪವಿತ್ರ ಸ್ಥಳವಾಗಿದ್ದು, ಇಲ್ಲಿಂದ ಮಾರಿಯಮ್ಮನ ಹೊರೆ ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಸಾಗುವ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ರಾಷ್ಟ್ರೀಯ ಹೆದ್ದಾರಿ (National Highway)-೬೬ ಅಗಲೀಕರಣದಿಂದ ಮೂಲ ಕಟ್ಟೆ ಇದ್ದ ಸ್ಥಳ ಕಾಮಗಾರಿಗೆ ಒಳಪಡುವ ಹಿನ್ನೆಲೆ ಪಕ್ಕದ ಜಾಗದಲ್ಲಿ ಹೊಸದಾಗಿ ೧೦×೧೦ ಅಳತೆಯ ಮುರಿನಕಟ್ಟೆ ನಿರ್ಮಿಸಲು ಕಳೆದ ಐದು ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಮೇ ೨೪ರಂದು ತಾಲೂಕು ಆಡಳಿತದ ಒಪ್ಪಿಗೆಯೊಂದಿಗೆ ಪೊಲೀಸರ ಸಮ್ಮುಖದಲ್ಲಿ ಗ್ರಾಮಸ್ಥರು ಕಟ್ಟೆ ನಿರ್ಮಾಣ ಆರಂಭಿಸಿ ಪೂರ್ಣಗೊಳಿಸಿದ್ದರು ಎಂದು ತಿಳಿಸಿದರು.

Murinakatte/ ಮುರಿನಕಟ್ಟೆ ವಿವಾದ: ನಾಲ್ಕು ಪ್ರಕರಣ ದಾಖಲು 

ಅದೇ ದಿನ ಕೆಲ ದುಷ್ಕರ್ಮಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿ ಮುರಿನಕಟ್ಟೆಗೆ ಹಾನಿ ಉಂಟುಮಾಡಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಇದ್ದರೂ ಕಟ್ಟೆ ಧ್ವಂಸವನ್ನು ತಡೆಯಲು ಸಾಧ್ಯವಾಗಿಲ್ಲ. ಈ ಸಂಬಂಧ ಪ್ರಮುಖ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Murinakatte/ ಮುರಿನಕಟ್ಟೆ  ಕಟ್ಟಿಯೇ ಸಿದ್ದ: ಸುನೀಲ ನಾಯ್ಕ ಘೋಷಣೆ

ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನೀಡಿರುವ ಹೇಳಿಕೆಗೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ೪೮ ಗಂಟೆಯೊಳಗೆ ಧ್ವಂಸಗೊಂಡ ಸ್ಥಳದಲ್ಲೇ ಮುರಿನಕಟ್ಟೆ ಮರುನಿರ್ಮಾಣ ಮಾಡಿಕೊಡಬೇಕು. ಇಲ್ಲವಾದರೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಖಂಡರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

DC Lakshmi Priya/ ಮುರಿನಕಟ್ಟೆ ನಾಶಪಡಿಸಿದವರ ವಿರುದ್ಧ ಪ್ರಕರಣ ದಾಖಲು 

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆ ತಾಲೂಕು ಸಂಚಾಲಕ ಜಯಂತ ನಾಯ್ಕ, ಹಿಂದೂ ಮುಖಂಡ ಸುಬ್ರಾಯ ನಾಯ್ಕ, ಬಿಜೆಪಿ (BJP) ತಾಲೂಕು ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಬಿಜೆಪಿ ಮುಖಂಡ ಭಾಸ್ಕರ ದೈಮನೆ, ಸುರೇಶ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

police custody/ ಮಧ್ಯರಾತ್ರಿ ಹಿಂದೂ ಕಾರ್ಯಕರ್ತರು ಪೊಲೀಸ್ ವಶಕ್ಕೆ