ಭಟ್ಕಳ ಡೈರಿ ವರದಿ

ಭಟ್ಕಳ: ಕ್ರೀಡಾ ಕ್ಷೇತ್ರಕ್ಕೆ ಹೊಸ ಉತ್ತೇಜನ ನೀಡುವ ನಿಟ್ಟಿನಲ್ಲಿ ಭಟ್ಕಳದಲ್ಲಿ ಸುಮಾರು ೧೫ ಎಕರೆ ಜಾಗ ಗುರುತಿಸಿ, ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭೆ ಉಪ ಸಭಾಪತಿ ಹಾಗೂ ಶಾಸಕ ಮಂಕಾಳ ಎಸ್. ವೈದ್ಯ ಘೋಷಿಸಿದ್ದಾರೆ. ಭಟ್ಕಳದ ಕೆ.ಪಿ. ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ‘ಬೀನಾ ವೈದ್ಯ ಗಂಡಭೇರುಂಡ’ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಸುಮಾರು ೨೫ ವರ್ಷಗಳ ಹಿಂದೆ ಇದೇ ಮೈದಾನದಲ್ಲಿ ಎರಡು ಅಂಕಣಗಳನ್ನು ನಿರ್ಮಿಸಿ ಅದ್ಧೂರಿಯಾಗಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದ ನೆನಪನ್ನು ಹಂಚಿಕೊಂಡ ಅವರು, ಅಂದು ಭಾಗವಹಿಸಿದ್ದ ಹಲವು ಆಟಗಾರರು ನಂತರ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಂತಸದ ಸಂಗತಿ. ಇಂದು ಒಂದೇ ಅಂಕಣದಲ್ಲಿ ಪಂದ್ಯಾವಳಿ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ ಎಂದರು.

ಜಾಲಿಯ ಬದಲು ಪ್ರತ್ಯೇಕ ಕ್ರೀಡಾಂಗಣಕ್ಕೆ ೧೫ ಎಕರೆ ಜಾಗ: ಜಾಲಿಯಲ್ಲಿದ್ದ ಕ್ರೀಡಾಂಗಣದ ಜಾಗದಲ್ಲಿ ಪ್ರೌಢಶಾಲೆ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಹೊಸ ಕ್ರೀಡಾಂಗಣಕ್ಕೆ ಪ್ರತ್ಯೇಕ ಜಾಗ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಸುಮಾರು ೧೫ ಎಕರೆ ಪ್ರದೇಶ ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು, ಕಬಡ್ಡಿ ಮಾತ್ರವಲ್ಲದೆ ವಿವಿಧ ಕ್ರೀಡೆಗಳಿಗೆ ಅನುಕೂಲವಾಗುವಂತೆ ಅಗತ್ಯ ಮೂಲಸೌಕರ್ಯಗಳೊಂದಿಗೆ ಕ್ರೀಡಾಂಗಣ ನಿರ್ಮಿಸುವ ಉದ್ದೇಶವಿದೆ ಎಂದು ಮಂಕಾಳ ವೈದ್ಯ ತಿಳಿಸಿದರು.

ಭಟ್ಕಳದಲ್ಲೂ ಪ್ರೊ ಕಬಡ್ಡಿ ಆಯೋಜಿಸುವ ಆಶಯ: ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಗೂ ಭಾರತೀಯ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ. ರಮೇಶ್ ಮಾತನಾಡಿ, ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಪಂದ್ಯಾವಳಿ ನಡೆಯುವಂತೆ ಭಟ್ಕಳದಲ್ಲಿಯೂ ಒಂದು ದಿನ ಪ್ರೊ ಕಬಡ್ಡಿ ಪಂದ್ಯಾವಳಿ ಆಯೋಜಿಸಬೇಕು ಎಂಬುದು ತಮ್ಮ ಬಹುದಿನದ ಆಶಯವಾಗಿದೆ ಎಂದು ತಿಳಿಸಿದರು.

ಚಿನ್ನದ ಪದಕ ಗೆದ್ದ ಮೂವರು ಕ್ರೀಡಾಪಟುಗಳಿಗೆ ಉದ್ಯೋಗಕ್ಕೆ ಮನವಿ: ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ ನಾಯ್ಕ ಮಾತನಾಡಿ, ಆಳ್ವಾಸ್ ಹಾಗೂ ಕೆಎಲ್‌ಇ ವಿಶ್ವವಿದ್ಯಾಲಯದ ಕ್ರೀಡಾಕೂಟಗಳಲ್ಲಿ ಭಟ್ಕಳದ ಮೂವರು ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು. ಆದರೆ ಸಾಧನೆ ಮಾಡಿದ ಈ ಮೂವರಿಗೆ ಈವರೆಗೆ ಉದ್ಯೋಗಾವಕಾಶ ದೊರೆತಿಲ್ಲ. ರಾಜ್ಯ ಸರ್ಕಾರ ಅಥವಾ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅವರಿಗೆ ಉದ್ಯೋಗ ಕಲ್ಪಿಸಿ, ಕ್ರೀಡಾ ಸಾಧನೆಗೆ ಸೂಕ್ತ ಗೌರವ ನೀಡಬೇಕು ಎಂದು ಶಾಸಕ ಮಂಕಾಳ ವೈದ್ಯರಲ್ಲಿ ಮನವಿ ಮಾಡಿದರು.

ಇವೆಂಟ್ ಸ್ಪೋರ್ಟ್ಸ್ ಕಾರ್ಪೊರೇಷನ್ ಮುಖ್ಯಸ್ಥ ವಿಖಾಸ್ ಕೆ. ಗೌತಮ್, ಮಾಜಿ ಕಬಡ್ಡಿ ಆಟಗಾರ ಬಿ.ಸಿ. ರಮೇಶ, ಪಂದ್ಯಾವಳಿ ಸಮಿತಿ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಚಲುವರಾಜ, ಎಂ. ಶಣ್ಮುಗಂ, ಮುನಿರಾಜು, ಡಿಎಫ್‌ಒ ಯೋಗೇಶ್ ಸಿ.ಕೆ., ಮೌಲಾನ ಅಜೀಜುರ್ ರೆಹಮಾನ್ ಸಾಹೇಬ್, ಇಮ್ರಾನ್ ಲಂಕಾ, ಜಾಫರ್ ಹೈದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ:

ಉತ್ತರ ಕನ್ನಡದ ಎಲ್ಲಾ ತಾಲೂಕುಗಳಿಗೂ ಕಬಡ್ಡಿ ಮ್ಯಾಟ್: ಸಂಸದ ಕಾಗೇರಿ ಭರವಸೆ

ಖೇಲೋ ಇಂಡಿಯಾ, ರಾಷ್ಟ್ರೀಯ ಕಬಡ್ಡಿ ಆಡಿದ ಭಟ್ಕಳದ ಆಟಗಾರರಿಗೆ ಉದ್ಯೋಗಾವಕಾಶ ಯಾವಾಗ?