ಭಟ್ಕಳ ಡೈರಿ ವರದಿ
ಭಟ್ಕಳ: ಖೇಲೋ ಇಂಡಿಯಾ ಹಾಗೂ ಸೀನಿಯರ್ ನ್ಯಾಷನಲ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಉತ್ತರ ಕನ್ನಡ ಜಿಲ್ಲೆಯ ಆಟಗಾರರಿಗೆ ಇನ್ನೂ ಉದ್ಯೋಗ ನೇಮಕಾತಿ ದೊರೆಯದಿರುವ ಬಗ್ಗೆ ಕ್ರೀಡಾಭಿಮಾನಿಗಳಲ್ಲಿ ಬೇಸರ ವ್ಯಕ್ತವಾಗಿದೆ. ವಿಶೇಷವಾಗಿ ಭಟ್ಕಳದ ನಾಲ್ವರು ಪ್ರತಿಭಾವಂತ ಆಟಗಾರರಿಗೆ ಸೂಕ್ತ ಸರ್ಕಾರಿ ಅಥವಾ ಇತರ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿವಿಧ ರಾಜ್ಯಗಳ ಅನೇಕ ಆಟಗಾರರಿಗೆ ಉದ್ಯೋಗ ನೇಮಕಾತಿ ದೊರೆತಿದೆ. ಆದರೆ ಉತ್ತರ ಕನ್ನಡದ ಆಟಗಾರರಿಗೆ ಮಾತ್ರ ಇನ್ನೂ ಅಂತಹ ಅವಕಾಶ ಸಿಗದಿರುವುದು ಕ್ರೀಡಾಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ.
ಭಟ್ಕಳದ ನಾಲ್ವರು ಆಟಗಾರರ ಸಾಧನೆ:
ಭಟ್ಕಳ ಮೂಲದ ವಿನೋದ ನಾಯ್ಕ (ಗೊರಟೆ), ಜೀತಿನ್ ನಾಯ್ಕ (ತಲಗೋಡು), ರತನ್ ನಾಯ್ಕ (ತಲಗೋಡು) ಹಾಗೂ ರಂಜಿತ್ ನಾಯ್ಕ (ಮೂಡ ಭಟ್ಕಳ) ಅವರು ಕಬಡ್ಡಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ಆಟಗಾರರಾಗಿದ್ದಾರೆ. ಈ ಆಟಗಾರರು ಖೇಲೋ ಇಂಡಿಯಾ ಸೇರಿದಂತೆ ಪ್ರಮುಖ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಹೆಸರು ಗಳಿಸಿದ್ದಾರೆ. ಆದರೂ ಇವರಿಗೆ ಈವರೆಗೆ ಉದ್ಯೋಗ ನೇಮಕಾತಿ ದೊರೆಯದಿರುವುದು ಬೇಸರದ ಸಂಗತಿಯಾಗಿದೆ ಎಂದು ಕ್ರೀಡಾಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯಕ್ಕೂ ಹೆಮ್ಮೆ ತಂದ ಸಾಧನೆ: ಮಂಗಳೂರು ವಿಶ್ವವಿದ್ಯಾಲಯಕ್ಕೆ ಖೇಲೋ ಇಂಡಿಯಾ ಕಬಡ್ಡಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಕಳೆದ ಬಾರಿ ನಡೆದ ಖೇಲೋ ಇಂಡಿಯಾ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಭಟ್ಕಳದ ಆಟಗಾರರ ಸಾಧನೆ ಗಮನ ಸೆಳೆದಿದೆ. ಇಂತಹ ಪ್ರತಿಭಾವಂತ ಆಟಗಾರರನ್ನು ಗುರುತಿಸಿ, ಅವರ ಕ್ರೀಡಾ ಸಾಧನೆಗೆ ತಕ್ಕ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಮುಂದಾಗಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ.
ಉದ್ಯೋಗ ಸಿಗಲು ಅವಕಾಶವಿದೆಯಾ?:
ಖೇಲೋ ಇಂಡಿಯಾ (Khelo India) ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಬಡ್ಡಿ ಆಟಗಾರರಿಗೆ ಸರ್ಕಾರಿ ಉದ್ಯೋಗ ಸಿಗಲು ಖಂಡಿತ ಅವಕಾಶವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ತಮ್ಮ ಉದ್ಯೋಗ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. ಅದರಲ್ಲೂ ಇತ್ತೀಚಿನ ನಿಯಮಗಳ ಪ್ರಕಾರ, ಖೇಲೋ ಇಂಡಿಯಾ ಕ್ರೀಡಾಕೂಟಗಳು ಉದ್ಯೋಗದ ಅರ್ಹತೆಗೆ ಅಧಿಕೃತ ಮಾನ್ಯತೆ ಪಡೆದಿವೆ.
ನಿಯಮಗಳೇನು?: ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (DoPT) ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಖೇಲೋ ಇಂಡಿಯಾ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳು ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿದ್ದಾರೆ.
ಅರ್ಹ ಕ್ರೀಡಾಕೂಟಗಳು: ಖೇಲೋ ಇಂಡಿಯಾ ಯೂತ್ ಗೇಮ್ಸ್ (18 ವರ್ಷ ಮೇಲ್ಪಟ್ಟವರು), ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ವಿಂಟರ್ ಗೇಮ್ಸ್ ಮತ್ತು ಪ್ಯಾರಾ ಗೇಮ್ಸ್. ಈ ಕ್ರೀಡಾಕೂಟಗಳಲ್ಲಿ ಕಬಡ್ಡಿಯಲ್ಲಿ ಪದಕ (ಚಿನ್ನ, ಬೆಳ್ಳಿ ಅಥವಾ ಕಂಠಿ) ಗೆದ್ದ ಆಟಗಾರರು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸ್ಪೋರ್ಟ್ಸ್ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಉದ್ಯೋಗ ಮೀಸಲಾತಿ ಎಷ್ಟು?: ರಾಜ್ಯ ನಾಗರಿಕ ಸೇವೆಗಳ (State Civil Services) ಎಲ್ಲಾ ಇಲಾಖೆಗಳ ನೇರ ನೇಮಕಾತಿಯಲ್ಲಿ ಅರ್ಹ ಕ್ರೀಡಾಪಟುಗಳಿಗೆ 2% ಮೀಸಲಾತಿಯನ್ನು ಘೋಷಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ವಿಶೇಷವಾಗಿ 3% ಮೀಸಲಾತಿ ಇದ್ದು, ದೈಹಿಕ ಸಾಮರ್ಥ್ಯ ಹೊಂದಿರುವ ಕಬಡ್ಡಿ ಆಟಗಾರರಿಗೆ ಇಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ (ಖೇಲೋ ಇಂಡಿಯಾ ಅಥವಾ ಸೀನಿಯರ್ ನ್ಯಾಷನಲ್ಸ್) ಕರ್ನಾಟಕವನ್ನು ಪ್ರತಿನಿಧಿಸಿದ ಅಥವಾ ಪದಕ ಗೆದ್ದ ಕಬಡ್ಡಿ ಆಟಗಾರರು ಈ ಕ್ರೀಡಾ ಕೋಟಾದಡಿ ಅರ್ಜಿ ಸಲ್ಲಿಸಿ ಸರ್ಕಾರಿ ಕೆಲಸ ಪಡೆಯಬಹುದು.
ಕಬಡ್ಡಿ ಆಟಗಾರರನ್ನು ನೇಮಿಸಿಕೊಳ್ಳುವ ಪ್ರಮುಖ ಇಲಾಖೆಗಳು: ಕಬಡ್ಡಿ ಆಟದಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಇಲಾಖೆಗಳು ಪ್ರತಿ ವರ್ಷ ಪ್ರತ್ಯೇಕವಾಗಿ ‘ಸ್ಪೋರ್ಟ್ಸ್ ಕೋಟಾ’ ಅಡಿಯಲ್ಲಿ ಅಧಿಸೂಚನೆ ಹೊರಡಿಸುತ್ತವೆ. ಭಾರತೀಯ ರೈಲ್ವೆ (Indian Railways) ಕಬಡ್ಡಿ ಆಟಗಾರರಿಗೆ ಅತಿ ಹೆಚ್ಚು ಉದ್ಯೋಗ ನೀಡುವ ಸಂಸ್ಥೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ಗಳಂತಹ ರಾಷ್ಟ್ರೀಕೃತ ಬ್ಯಾಂಕ್ಗಳು ತಮ್ಮ ಕಬಡ್ಡಿ ತಂಡಗಳಿಗಾಗಿ ಆಟಗಾರರನ್ನು ನೇಮಿಸಿಕೊಳ್ಳುತ್ತವೆ. ಉಳಿದಂತೆ, ಭಾರತೀಯ ಸೇನೆ (Army), CISF, CRPF ಮತ್ತು ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳು, ಆದಾಯ ತೆರಿಗೆ (Income Tax) ಮತ್ತು ಕಸ್ಟಮ್ಸ್ ಇಲಾಖೆಗಳಲ್ಲಿ ಕಬಡ್ಡಿ ಆಟಗಾರರಿಗೆ ಅವಕಾಶವಿದೆ.
ಭಟ್ಕಳದವರೇ ಆದ ಉತ್ತರ ಕನ್ನಡ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ ನಾಯ್ಕರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಆಟಗಾರರಿಗೆ ಉದ್ಯೋಗಾವಕಾಶ ದೊರಕಿಸಲು ಪ್ರಯತ್ನಿಸಬೇಕು ಎಂದು ಹನುಮಾನನಗರದ ಯೋಗೇಶ ನಾಯ್ಕ ಮನವಿ ಮಾಡಿದ್ದಾರೆ.
ಕ್ರೀಡೆಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಯುವಕರಿಗೆ ಉದ್ಯೋಗ ದೊರೆತರೆ ಅವರ ಭವಿಷ್ಯ ಭದ್ರವಾಗುವುದರ ಜೊತೆಗೆ, ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೂ ಪ್ರೇರಣೆ ಸಿಗಲಿದೆ. ಹೀಗಾಗಿ ಭಟ್ಕಳದ ಈ ನಾಲ್ವರು ಆಟಗಾರರಿಗೆ ಸೂಕ್ತ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಕ್ರೀಡಾ ಸಂಸ್ಥೆಗಳು ಹಾಗೂ ಸರ್ಕಾರ ಗಮನಹರಿಸಬೇಕಿದೆ ಎಂಬುದು ಸಾರ್ವಜನಿಕರ ಆಶಯವಾಗಿದೆ.
ಇದನ್ನೂ ಓದಿ :
KKPL 2026 Winner: ಚೊಚ್ಚಲ ಕೆಕೆಪಿಎಲ್ ಚಾಂಪಿಯನ್ ಆಗಿ ಉತ್ತರ ಕನ್ನಡ ಸ್ಟಾಲಿಯನ್ಸ್ ಇತಿಹಾಸ




