ಕಾರವಾರ : ಸರ್ಕಾರದ ಹಲವು ಯೋಜನೆಗಳಲ್ಲಿ ವಿವಿಧ ರೀತಿಯ ಪರಿಹಾರ ನೀಡುವ ಅವಕಾಶವಿದೆ. ವಾಹನ ಅಪಘಾತವಾದರೆ ಅಪಘಾತಪಡಿಸಿದ ವಾಹನ ಮತ್ತು ನಮ್ಮ ವಾಹನದ ವಿಮಾ ಮೊತ್ತದಿಂದ ವ್ಯಕ್ತಿಗೆ ಪರಿಹಾರ ದೊರೆಯುತ್ತದೆ. ಆದರೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ವಾಹನ ಸವಾರನು ನಿಲ್ಲಿಸದೇ ಪರಾರಿಯಾದರೂ, ಈ ಹಿಟ್ ಅಂಡ್ ರನ್ ಅಪಘಾತದಿಂದ ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರೂ ನಿಗದಿತ ಪರಿಹಾರ ಪಡೆಯಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ.

ಇದನ್ನೂ ಓದಿ : ಫ್ಯಾನ್ಸಿ ಸ್ಟೋರ್‌ನಲ್ಲಿ ಕಳ್ಳತನ : ಭಟ್ಕಳದ ಓರ್ವ ಸಹಿತ ಐವರ ಬಂಧನ

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, ಮೋಟಾರು ವಾಹನಗಳ ಕಾಯಿದೆ ಪ್ರಕಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವರಿಗೆ ರೂ.೫೦,೦೦೦ ಮತ್ತು ಮೃತಪಟ್ಟ ವ್ಯಕ್ತಿಯ ವಾರಿಸುದಾರರಿಗೆ ರೂ. ೨ ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಪಾವತಿಸುವಂತೆ ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ಹೊರಡಿಸಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ದೇಶದಲ್ಲಿ ಪ್ರತಿವರ್ಷ ೬೦,೦೦೦ ಕ್ಕೂ ಅಧಿಕ ಹಿಟ್ ಅಂಡ್ ರನ್ ಅಪಘಾತಗಳು ಸಂಭವಿಸುತ್ತಿವೆ. ಆದರೆ ಈ ಯೋಜನೆಯನ್ವಯ ವಾರ್ಷಿಕ ೩೦೦೦ ಕ್ಕೂ ಕಡಿಮೆ ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಇದು ಈ ಯೋಜನೆಗೆ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ಇಲ್ಲದಿರುವುದನ್ನು ತೋರಿಸುತ್ತದೆ ಹಾಗೂ ಬಹುತೇಕ ಜಿಲ್ಲೆಗಳಲ್ಲಿ ಈ ಪರಿಹಾರ ಪಾವತಿ ಕುರಿತಂತೆ ಪರಿಶೀಲನೆ ನಡೆಸಬೇಕಾದ ಸಮಿತಿಯನ್ನೇ ರಚಿಸಿಲ್ಲ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ :
ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ನಿಗದಿತ ಅವಧಿಗೆ ಸಭೆ ಸೇರುವ ಈ ಸಮಿತಿಯು, ಜಿಲ್ಲೆಯಲ್ಲಿ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ನಡೆಸಿ, ಅರ್ಹ ಪ್ರಕರಣಗಳಿಗೆ ಸೂಕ್ತ ಪರಿಹಾರ ಪಾವತಿಗೆ ಶಿಫಾರಸ್ಸು ಮಾಡುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?
ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡ ವ್ಯಕ್ತಿ ಅಥವಾ ಮೃತನ ವಾರಸುದಾರರು ಅಪಘಾತ ನಡೆದ ಸ್ಥಳ ವ್ಯಾಪ್ತಿಯ ತಹಸೀಲ್ದಾರ್ ಅಥವಾ ಉಪ ವಿಭಾಗಾಧಿಕಾರಿಗಳಿಗೆ ಪರಿಹಾರ ಕೋರುವ ಮನವಿ ಸಲ್ಲಿಸಬೇಕು. ಅರ್ಜಿಯೊಂದಿಗೆ, ಅಪಘಾತದ ವರದಿ ಮತ್ತು ಪೋಸ್ಟ್ ಮಾರ್ಟಮ್ ವರದಿ ಹಾಗೂ ಸೂಕ್ತ ಗುರುತಿನ ಚೀಟಿ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ಸಲ್ಲಿಸಬೇಕು. ಈ ದಾಖಲೆಗಳನ್ನು ಪರಿಶೀಲಿಸಿದ ಸಂಬಂಧಪಟ್ಟ ಅಧಿಕಾರಿಗಳು, ಅರ್ಜಿ ಮತ್ತು ದಾಖಲೆಗಳನ್ನು ಅದನ್ನು ಕ್ಲೇಮ್ ಸೆಟ್ಲಮೆಂಟ್ ಅಧಿಕಾರಿಯಾದ ಜಿಲ್ಲಾಧಿಕಾರಿಗೆ ಸಲ್ಲಿಸುತ್ತಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯಲ್ಲಿ ಅರ್ಹ ಪ್ರಕರಣವೆಂದು ಕಂಡು ಬಂದಲ್ಲಿ ನಿಗದಿತ ಪರಿಹಾರ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶ ನೀಡುತ್ತಾರೆ.

ಸಮಿತಿಯಲ್ಲಿ ಯಾರ‌್ಯಾರಿದ್ದಾರೆ?
ಜಿಲ್ಲಾ ಮಟ್ಟದಲ್ಲಿ ರಚನೆಯಾಗಿರುವ ಪರಿಹಾರ ನೀಡುವ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಸದಸ್ಯರಾಗಿ, ರಾಜ್ಯ ಸರ್ಕಾರದಿಂದ ನಾಮ ನಿರ್ದೇಶನಗೊಂಡ ಪರಿಹಾರ ವಿಚಾರಣಾ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಸರ್ಜನ್, ಪ್ರಾದೇಶಿಕ ಸಾರಿಗೆ ಅಧಿಕಾರಿ, ರಸ್ತೆ ಸುರಕ್ಷಾ ವಿಷಯದಲ್ಲಿ ಪರಿಣಿತರಾದ, ಜಿಲ್ಲಾಧಿಕಾರಿಯಿಂದ ನಾಮ ನಿರ್ದೇಶನಗೊಂಡ ಒಬ್ಬ ಸಾರ್ವಜನಿಕ ಅಥವಾ ಸ್ವಯಂ ಸೇವಾ ಸಂಸ್ಥೆ ಸದಸ್ಯ ಇರುತ್ತಾರೆ. ವಿಮಾ ಕಂಪೆನಿಯ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹಿಟ್ ಅಂಡ್ ರನ್ ನಿಂದ ಅಪಘಾತಕ್ಕೀಡಾದ ವ್ಯಕ್ತಿ ಅಥವಾ ಮೃತನ ವಾರೀಸುದಾರರಿಗೆ ನಿಗದಿತ ಕಾಲಮಿತಿಯಲ್ಲಿ ಅಗತ್ಯ ಪರಿಹಾರ ಮಂಜೂರು ಮಾಡುವಂತೆ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಗಂಗೂಬಾಯಿ ಮಾನಕರ್

ಅಪಘಾತಕ್ಕೀಡಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬ ತೀವ್ರ ಅರ್ಥಿಕ ಸಮಸ್ಯೆಗಳಿಗೆ ಸಿಲುಕಲಿದೆ. ಗಂಭೀರ ಗಾಯಗೊಂಡ ವ್ಯಕ್ತಿ ತನ್ನ ಮೊದಲಿನ ದುಡಿಯುವ ಸಾಮರ್ಥ್ಯ ಕಳೆದುಕೊಳ್ಳಲಿದ್ದಾನೆ. ಇಂತಹ ಪ್ರಕರಣಗಳಲ್ಲಿ ಅಪಘಾತ ಪಡಿಸಿದ ವಾಹನ ಪತ್ತೆಯಾದಲ್ಲಿ ವ್ಯಕ್ತಿಗಳಿಗೆ ವಿಮಾ ಕಂಪೆನಿಗಳಿಂದ ಪರಿಹಾರ ದೊರೆಯಲಿದೆ. ಆದರೆ ಅಪರಿಚಿತ ವಾಹನ ಅಪಘಾತಗಳಿಗೆ ಒಳಗಾದವರಿಗೆ ಯಾವುದೇ ವಿಮಾ ಸೌಲಭ್ಯ ದೊರೆಯವುದಿಲ್ಲ. ಇಂತಹ ವ್ಯಕಿಗಳಿಗೆ ನೆರವು ನೀಡುವ ಉದ್ದೇಶದಿಂದಲೇ ಸರ್ಕಾರದ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಹಿಡ್ ಅಂಡ್ ರನ್ ಅಪಘಾತಗಳಿಗೆ ಒಳಗಾದ ಮತ್ತು ಮೃತನ ವಾರಸುದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರಕ್ಕಾಗಿ ವಿಮಾ ಕಂಪನಿಗೆ ಆದೇಶ ನೀಡಲಾಗುವುದು. ಜಿಲ್ಲೆಯ ಹಿಟ್ ಅಂಡ್ ರನ್ ಪ್ರಕರಣಗಳ ಸಂತ್ರಸ್ತರು ಈ ಯೋಜನೆಯ ನೆರವು ಪಡೆಯಬೇಕು.
ಗಂಗೂಬಾಯಿ ಮಾನಕರ, ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ.