ಶ್ರೀನಾಥ್ ಜೋಶಿ ಸಿದ್ದರ, ಹಿರಿಯ ಪತ್ರಕರ್ತರು.

ಭಾರತ ವೈವಿಧ್ಯತೆಯ ಮಡಿಲು. ಉತ್ತರ ಭಾರತದಲ್ಲಿ ಬಂಗಾಳಿ ರಂಗಭೂಮಿಯ ಜೊತೆಗೆ ಮರಾಠಿ ರಂಗಭೂಮಿಯನ್ನು ತುಲನೆ ಮಾಡುವುದನ್ನು ನೋಡುತ್ತೇವೆ. ಆದರೆ ವಾಸ್ತವವಾಗಿ ಮರಾಠಿ ರಂಗಭೂಮಿ ಹುಟ್ಟಿಗೆ ನಮ್ಮ ಯಕ್ಷಗಾನ ಕಾರಣವಾಗಿತ್ತು ಎಂದರೆ ನಿಮಗೆ ಅಚ್ಚರಿಯಾಗಬಹುದು. ಮಹಾರಾಷ್ಟ್ರದಲ್ಲಿ ಇಂದು ಉಚ್ಛ್ರಾಯಮಾನದಲ್ಲಿ ಇರುವ ರಂಗೋದ್ಯಮದ ಮೂಲವೇ ಕರ್ನಾಟಕ ಎನ್ನುವುದನ್ನು ಅಲ್ಲಿನ ಇತಿಹಾಸಕಾರರು, ರಂಗಭೂಮಿಯ ದಿಗ್ಗಜರು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ.

ಅದು ೧೯ನೇ ಶತಮಾನದ ಮಧ್ಯಭಾಗ. ನಮ್ಮಲ್ಲಿ ಕ್ರಮಬದ್ಧ ಯಕ್ಷಗಾನಗಳು ನಡೆಯುತ್ತಿದವು. ಅದರ ಪರಿಣಾಮ ಕನ್ನಡದ ಅನ್ಯ ಪ್ರದರ್ಶನ ಕಲಾ ಪ್ರಾಕಾರಗಳು ಹುಟ್ಟಿಕೊಂಡಿದ್ದವು. ಉದಾಹರಣೆಗೆ ಮೂಡಲಪಾಯ ದೊಡ್ಡಾಟ, ಸಣ್ಣಾಟ, ರಾಧಾನಾಟ, ಸಂಗ್ಯಾಬಾಳ್ಯಾ ಸೇರಿದಂತೆ ಇತರ ರಂಗರೂಪಾಂತರಗಳು. ಮುಂದುವರೆದು ೧೯ನೇ ಶತಮಾನದಲ್ಲಿ ಮರಾಠಿ ರಂಗಭೂಮಿ ಎನ್ನುವುದು ಹುಟ್ಟಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಸಕ್ರಿಯವಾಗಿತ್ತು. ಜೊತೆಗೆ ಮಹಾರಾಷ್ಟ್ರದ ಜಾನಪದ ಕಲೆಗಳು ರಂಗಕಲೆಯ ನೀತಿ ಮತ್ತು ಸಂಸ್ಕೃತಿಗೆ ಬೆನ್ನೆಲುಬಾಗಿತ್ತು. ಮುಂದೆ ಮಹಾರಾಷ್ಟ್ರದಲ್ಲಿ ಅನೇಕ ಕಲಾವಿದರು ರಂಗೋದ್ಯಮವನ್ನು ವೃತ್ತಿಯಾಗಿ ತೊಡಗಿಸಿಕೊಂಡಿದ್ದರ ಪರಿಣಾಮ ಮರಾಠಿ ರಂಗಭೂಮಿಯು ವೈವಿಧ್ಯತೆಗೆ ಸಾಕ್ಷಿಯಾಗಿತ್ತು.
ಮಹಾರಾಷ್ಟ್ರವು ಹಲವಾರು ಧ್ರುವಗಳ ಸಮ್ಮಿಳನದ ಪಾತ್ರೆಯಾಗಿ ವೈರುಧ್ಯದ ಆದರೆ ಸಾಮರಸ್ಯದ ಗುರುತುಗಳನ್ನು ಹೊಂದಿದೆ. ನಮ್ಮ ದೇಶದ ಮೇಲೆ ಸಾಗರೋತ್ತರ ಆಕ್ರಮಣವು ಭಾರತದ ಬಹುತೇಕ ರಂಗಭೂಮಿಯ ಮೇಲೆ ಪ್ರಭಾವ ಬೀರುವುದನ್ನು ನೋಡುತ್ತೇವೆ. ಈ ಮಧ್ಯ ಮರಾಠಿ ರಂಗಭೂಮಿ ಮೊದಲಿಂದಲೂ ಅಕ್ಕಪಕ್ಕದ ಕಲಾ ಪ್ರಾಕಾರಗಳಿಂದ ಪ್ರಭಾವಿತವಾಗಿದ್ದರಿಂದ ಪಾಶ್ವಾತ್ಯ ರಂಗವನ್ನು ತಮ್ಮ ರಂಗಕ್ಕೆ ಅಳವಡಿಸಿಕೊಳ್ಳಲು ಹೆಚ್ಚು ಕಾಲ ಬೇಕಾಗಿರಲಿಲ್ಲ. ಆದರೆ ಅದೇ ನಮ್ಮ ಕನ್ನಡದಲ್ಲಿ ಪಾಶ್ಚಾತ್ಯ ರಂಗವನ್ನು ನಾವು ಅಳವಡಿಸಿಕೊಳ್ಳಲೇ ಇಲ್ಲ. ಅದರ ಪರಿಣಾಮವೇ ನಮ್ಮ ನಾಡಿನಲ್ಲಿ ವಿರೂಪಗೊಳ್ಳದೆ ಗಟ್ಟಿತನದಲ್ಲಿ ನಮ್ಮ ಕಲಾಪ್ರಾಕಾರಗಳನ್ನು ರಕ್ಷಿಸಿಕೊಂಡ ಕಲಾವಂತಿಕೆ ಇನ್ನೂ ಕಾಣಸಿಗುವುದು.

ಮರಾಠಿ ರಂಗಭೂಮಿಯು ಯಕ್ಷಗಾನದಿಂದ ಪ್ರೇರಿತವಾಗಿಯೇ ಹುಟ್ಟಿಕೊಂಡಿದೆ ಎನ್ನವುದು ನಿಸ್ಸಂಶಯ. ೧೮ನೇ ಶತಮಾನದಲ್ಲಿ ಸಾಂಗ್ಲಿಯ ರಾಜ ʻಪಟವರ್ಧನ್ʼ ಅವರು ಕಾದಂಬರಿಕಾರ ʻವಿಷ್ಣು ಭಾವೆʼ ಅವರನ್ನು ಕರೆಸಿ ಆಸ್ಥಾನಕ್ಕೆ ಬಂದಿರುವ ತಮ್ಮ ವಿಶೇಷ ಅತಿಥಿಗಳ ಮನೋರಂಜನೆಗಾಗಿ ಕುತೂಹಲಕಾರಿ ನಾಟಕ ರಚಿಸಲು ಕೋರಿದ್ದರು. ಅದಕ್ಕೆ ʻಭಾವೆʼ ಅವರು ತಾವು ರಾಜಾಶ್ರಯದಲ್ಲಿ ಬರೆದ ʻಸೀತಾ ಸ್ವಯಂವರʼ ನಾಟಕವನ್ನು ೧೮೪೩ರ ನವೆಂಬರ್ ೫ ರಂದು ರಾಜಾಶ್ರಯದಲ್ಲಿ ಪ್ರದರ್ಶನ ಮಾಡಿದ್ದರು. ಈ ನಾಟಕವು ಪೂರ್ಣವಾಗಿ ಕನ್ನಡದ ಯಕ್ಷಗಾನದಿಂದ ಸ್ಫೂರ್ತಿ ಪಡೆದು ರಚಿಸಲಾಗಿತ್ತು. ಆರಂಭದಲ್ಲಿ ಯಕ್ಷಗಾನದಲ್ಲಿ ಇರುವಂತೆ ಮರಾಠಿಯಲ್ಲಿ ಬಹುತೇಕ ಪೌರಾಣಿಕ ಕಥೆಗಳನ್ನೇ ಪ್ರದರ್ಶಿಸಲಾಗುತ್ತಿತ್ತು. ಕಾಲ ಕಳೆದಂತೆ ಪಾಶ್ಚಾತ್ಯ ಲೇಖಕರ ಕೃತಿಗಳನ್ನು ತಮ್ಮ ರಂಗಭೂಮಿಗೆ ಅಳವಡಿಸಿಕೊಳ್ಳುವ ಮೂಲಕ ರಂಗ ಕಲೆಗೆ ಒಂದು ಆವಿಷ್ಕಾರ ನೀಡುವುದಕ್ಕೆ ಮರಾಠಿ ರಂಗಭೂಮಿ ಮುಂದಾಯಿತು. ದಿನ ಕಳೆದಂತೆ ಪೌರಾಣಿಕ ಕಥೆಗಳ ಜಾಗವನ್ನು ಸಾಮಾಜಿಕ ಕಳಕಳಿ ಹೊಂದಿರುವ ಕಥಾವಸ್ತುಗಳು ಆವರಿಸಿಕೊಂಡವು. ಬದಲಾವಣೆಗಳು ಜಗದ ನಿಯಮ ಎನ್ನುವಂತೆ ಮರಾಠಿ ರಂಗಭೂಮಿಯಲ್ಲಿ ಸಂಗೀತದ ಪ್ರವೇಶವಾಯಿತು. ಪಾಶ್ಚಿಮಾತ್ಯ ಮತ್ತು ಪಾರ್ಸಿ ಸಂಗೀತಗಳ ಪ್ರಭಾವವನ್ನು ಹೊಂದಿದ್ದ ಸಂಗೀತ ನಾಟಕಗಳು ಅಲ್ಲಲ್ಲಿ ನಡೆಯುತ್ತಿದ್ದವು. ಭಾರತೀಯ ಸಂಗೀತದ ಪ್ರಾಕಾರಗಳಾದ ಶಾಸ್ತ್ರೀಯ, ಅರೆ-ಶಾಸ್ತ್ರೀಯ, ಜಾನಪದ ಆಧಾರಿತ ಸಂಗೀತ ಸೇರಿಯೇ ಹುಟ್ಟಿಕೊಂಡಿದ್ದು ನಾಟ್ಯ ಸಂಗೀತ್ ಎನ್ನಲಾಗುತ್ತದೆ. ನಂತರದ ದಿನಗಳಲ್ಲಿ ಮರಾಠಿ ರಂಗಭೂಮಿಯಲ್ಲಿ ಹೆಚ್ಚಿನ ಸಂಭಾಷಣೆಗಳು  ಹಾಡುಗಳ ಮೂಲಕವೇ ನಡೆಯುತ್ತಿತ್ತು. ಅಂತಹ ನಾಟಕಗಳಿಗೆ ಸಂಗೀತ್ ನಾಟಕ ಎಂದು ಗುರುತಿಸಿಕೊಂಡಿದ್ದವು.


ರಂಗದಲ್ಲಿ ಹಾಸ್ಯವನ್ನು ತರುವ ಮೂಲಕ ಸಾಮಾಜಿಕ ನಾಟಕಗಳು ಜನರಿಗೆ ಹತ್ತಿರವಾಗುತ್ತಾ ಮರಾಠಿ ರಂಗಭೂಮಿ ವಿಶೇಷವಾಗಿ ಗುರುತಿಸಿಕೊಳ್ಳುವುದಕ್ಕೆ ಕಾರಣವಾಗಿತ್ತು. ಆಗಿನ ಸಮಕಾಲೀನ ನಾಟಕಕಾರಾದ  ʻಮಾಮಾ ವರೇರ್ಕರ್ʼ ಸಮಾಜದ ವಾಸ್ತವಿಕತೆಗೆ ಹತ್ತಿರವಾದ ನಾಟಕಗಳನ್ನು ರಚಿಸುವ ಮೂಲಕ ರಂಗದಲ್ಲಿ ನೈಜ ಶೈಲಿಯನ್ನು ತಂದಿದ್ದರು. ಯುರೋಪಿಯನ್ ಹಾಗೂ ಭಾರತೀಯ ವಿಷಯಗಳ ನಡುವಿನ ಸಂವೇದನೆಯನ್ನು ರಂಗರೂಪಕ್ಕೆ ತರುವಲ್ಲಿ ಪ್ರಯತ್ನಿಸಿದರು. ಮಹಾರಾಷ್ಟ್ರದ ಗ್ರಾಮಾಂತರ ಭಾಗದಲ್ಲಿ ನಡೆಯುವ ʻಪೊವಾಡʼ ಮತ್ತು ʻತಮಾಶಾʼಗಳ ತಂಡಗಳಿಗೆ ಮನ್ನಣೆ ಸಿಗುವ ಕಾಲ ಅದಾಗಿತ್ತು.  ಇದೆಲ್ಲದರ ಪರಿಣಾಮ ೧೮೮೫-೧೯೨೦ರ  ನಡುವಿನ ವರ್ಷಗಳಲ್ಲಿ ಸಾಕಷ್ಟು ಗುಣಮಟ್ಟದ ರಂಗ ಪ್ರಯೋಗಗಳು ಹುಟ್ಟಿಕೊಂಡು ಮರಾಠಿ ರಂಗಭೂಮಿ ಮುಂದಿನ ದಿಗಳಲ್ಲಿ ಗಟ್ಟಿಯಾಗುವುದಕ್ಕೆ ಕಾರಣವಾಯಿತು.


೧೯ನೇ ಶತಮಾನದ ಕಾಲಘಟ್ಟದಲ್ಲಿ ಚಲನಚಿತ್ರ ಎನ್ನುವ ಮಾಧ್ಯಮ ಹುಟ್ಟಿಕೊಂಡಿತು. ಅದಕ್ಕಿಂತಲೂ ಪೂರ್ವದಲ್ಲಿ ಮರಾಠಿ ನಾಟಕಗಳು ಜನಸಾಮಾನ್ಯರ ಮೇಲೆ ಪ್ರಬಲವಾದ ಪ್ರಭಾವವನ್ನು ಬೀರಿದವು. ಹಿಂದೂಸ್ತಾನಿ ಶಾಸ್ತ್ರೀಯ ರಾಗಗಳನ್ನು ಆಧರಿಸಿದ ರಂಗಗೀತೆಗಳು ಜನಪ್ರಿಯತೆಗಳಿಸಿದ್ದವು. ʻಘಾಶಿರಾಮ್ ಕೊತ್ವಾಲ್ʼ, ʻಗೋಚಿʼ, ʻಉದ್ಧ್ವಸ್ತ ಧರ್ಮಶಾಲಾʼ, ʻಬೇಗಂ ಬರ್ವೆʼ, ʻಮಹಾನಿರ್ವಾನ್ʼ, ʻಹೋಳಿʼ ಇತ್ಯಾದಿ ನಾಟಕಗಳು ಸದಾ ಸ್ಮರಣೀಯ.


ಮರಾಠಿ ರಂಗಭೂಮಿ ಆರಂಭದಿಂದಲೂ ಅನ್ಯ ಭಾಷೆಯ ಕಲಾ ಪ್ರಾಕಾರಗಳನ್ನು ಹಾಗೂ ಕಥೆಗಳನ್ನು ತನ್ನ ಭಾಷೆಗೆ ಅಳವಡಿಸಕೊಳ್ಳುವಲ್ಲಿ ಯಾವತ್ತೂ ಮಡಿವಂತಿಗೆ ತೋರಿಸಿರಲಿಲ್ಲ. ಹಾಗಾಗಿ ಷೇಕ್ಸ್ ಪಿಯರ್ ಅವರ ನಾಟಕ ಮತ್ತು ಪಾರ್ಸಿ ನಾಟಕಗಳನ್ನು ಮರಾಠಿಗೆ ಬಳಸಿಕೊಂಡರು. ಮುಂದೆ ಶ್ಯಾಮ್ ಮನೋಹರ್ ಅವರು ರಚಿಸಿದ ʻಯಾಕೃತ್ʼ  ಹಾಗೂ ಸತ್ಯದೇವ್ ದುಬೆ ಅವರ ʻಹೃದಯʼ  ನಾಟಕದಲ್ಲಿ ವಿಶೇಷವಾಗಿ ಹಾಸ್ಯ ಸೇರಿರುವ ಮೂಲಕ ಹೊಸ ಆಯಾಮ ಸಿಕ್ಕಿತು. ಇದೇ ಸಾಲಿನಲ್ಲಿ ʻವಿಜಯ್ ತೆಂಡೂಲ್ಕರ್ʼ ಅವರ ʻಘಾಶಿರಾಮ್ ಕೊತ್ವಾಲ್ʼ  ಮತ್ತು ʻಅಲೆಕರ್ʼ ಅವರ ʻಮಹಾನಿರ್ವಾನ್ʼ ನೋಡಬಹುದು, ಈ ನಾಟಕಗಳಲ್ಲಿ ಕೀರ್ತನೆ, ಕೋವಾಡೆ, ಕೋಳಿಗೀತ, ಗೋಂದಳಿ ಸೇರಿ ಮಹಾರಾಷ್ಟ್ರದ ವಿವಿಧ ಜಾನಪದ ಕಲಾ ಪ್ರಾಕಾರಗಳನ್ನು ಬಳಸಿಕೊಂಡರುವುದು ಸಮಕಾಲೀನ ಮರಾಠಿ ನಾಟಕಗಳ ತಿರುವಿಗೆ ಕಾರಣವಾಗಿತ್ತು.


ʻಮರಾಠಿ ಸಾಮಾಜಿಕ ನಾಟಕಗಳಲ್ಲಿ ಹಾಸ್ಯ ಪ್ರಹಸನಗಳು, ಐತಿಹಾಸಿಕ ನಾಟಕಗಳು, ಸಂಗೀತ, ಪ್ರಾಯೋಗಿಕ ನಾಟಕಗಳು, ಏಕಾಂಕ ನಾಟಕ, ತೀನಂಕಿ ನಾಟಕಗಳು ಮತ್ತು ಭಾರುಡ ನಾಟಕಗಳಿರುವುದು ಕಂಡುಬರುತ್ತದೆ.  ಇದುವರೆಗೆ ಮರಾಠಿ ರಂಗಭೂಮಿಯು  ʻಅಣ್ಣಾಭಾವು ಕಿರ್ಲೋಸ್ಕರ್ʼ,ʻ ಪಿ.ಎಲ್. ದೇಶಪಾಂಡೆʼ, ʻವಿಜಯ್ ತೆಂಡೂಲ್ಕರ್ʼ, ‘ಮಹೇಶ್ ಎಲ್ಕುಂಚ್ವಾರ್ʼ, ʻಭಾಲಾಜಿ ಪೆಂಡಾರ್ಕರ್ʼ, ʻರಾಜಾ ಪರಾಂಜಪೆʼ, ʻಅಣ್ಣಾಭು ಸಾಠೆʼ, ʻವಿಂದಾ ಕರಂಡಿಕರ್ʼ, ʻಅರುಣ್ ಸಾಧುʼ, ʻಪಿ.ಕೆ. ಅತ್ರೆʼ, ʻದಯಾ ಪವಾರ್ʼ ಮುಂತಾದವರನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತ್ತು.

ಆದರೆ ನಮ್ಮ ದೇಶದಲ್ಲಿ ಇರುವ ಸಾಮಾಜಿಕ ನಾಟಕಗಳು ಅಲ್ಪಾವಧಿ ಜೀವ ಹೊಂದಿರುವಂತೆ ಇಲ್ಲಿಯೂ ಅದನ್ನೇ ನೋಡಬಹುದಾಗಿದೆ.  ಜೊತೆಗೆ ಭಾರತದ ರಂಗಭೂಮಿ ಅನೇಕ ರಾಜಕೀಯ ಮತ್ತು ಸಾಮಾಜಿಕ ಒಳ ಸುಳಿಗಳನ್ನು ನಿರಂತರವಾಗಿ ಎದುರಿಸುತ್ತಿದೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ದೇಶದ ಇತರ ಪ್ರಾದೇಶಿಕ ಭಾಷಾ ರಂಗಭೂಮಿಗಿಂತ ಮರಾಠಿ ರಂಗಭೂಮಿ ಕಮರ್ಷಿಯಲ್ ರೂಪದಲ್ಲಿ ನೋಡಿದಾಗ ತುಸು ಪರವಾಗಿಲ್ಲ. ಇಂಗ್ಲೀಷ್, ಗುಜರಾತಿ, ಹಿಂದಿ, ಬಂಗಾಲಿ, ಕನ್ನಡ, ಭೋಜಪುರಿ, ಪಂಜಾಬಿ, ಮಲಯಾಳಿ, ತಮಿಳು ಸೇರಿದಂತೆ ಹಲವು ರಂಗಭೂಮಿ ಚಟುವಟಿಕೆಗಳು ಕೇವಲ ಮಾಸಾಂತ್ಯಕ್ಕೆ ಸೀಮಿತವಾದರೆ ಇನ್ನೂ ಕೆಲವು ವಾರಾಂತ್ಯಕ್ಕೆ ಸೀಮಿತವಾಗುತ್ತಿವೆ. ಆದರೆ ಮರಾಠಿ ರಂಗಭೂಮಿ ಮಿಕ್ಕ ಎಲ್ಲಾ ಭಾಷೆಗಿಂತ ಸ್ವಲ್ಪ ವಿಭಿನ್ನವಾಗಿದೆ. ಮುಂಬೈ ಮತ್ತು ಪುಣೆ ಮರಾಠಿ ನಾಟಕಗಳ ಕೇಂದ್ರವಾಗಿ ಇನ್ನೂ ಉಳಿದುಕೊಂಡಿದೆ.  ಮುಂಬೈ ಮತ್ತು ಪುಣೆ ಭಾಗದಲ್ಲಿ ರಂಗಭೂಮಿ ಅಭಿರುಚಿಯುಳ್ಳ ಒಂದು ವರ್ಗ ಪ್ರತಿ ವಾರಾಂತ್ಯದಲ್ಲಿ ನಾಟಕ ವೀಕ್ಷಿಸುವುದನ್ನು ಕಾಣಬಹುದು. ಮುಂಬೈನ ಪ್ರಭಾದೇವಿಯಿಂದ ಥಾಣೆಯವರೆಗೆ ಕನಿಷ್ಠ ೧೫ರಿಂದ ೨೦ ಥಿಯೇಟರ್ಗಳು ಕ್ರಿಯಾಶೀಲವಾಗಿವೆ. ʻರವೀಂದ್ರ ನಾಟ್ಯ ಮಂದಿರʼ, ʻಶಿವಾಜಿ ನಾಟ್ಯ ಮಂದಿರʼ, ʻರಂಗ ಶಾರದಾʼ, ʻದೀನಾನಾಥ್ʼ, ʻಗಡ್ಕರಿ ರಂಗಾಯತನ್ʼ ಮತ್ತು ಇನ್ನೂ ಅನೇಕ ರಂಗ ಮಂದಿರಗಳು ಉಸಿರಾಡುತ್ತಿರುವುದು ಮುಂಬೈಯಿಗರು ರಂಗಕಲೆಯ ಮೇಲಿಟ್ಟಿರುವ ಪ್ರೀತಿಗೆ ಸಾಕ್ಷಿ. ಅದೇ ರೀತಿಯಲ್ಲಿ ಪುಣೆಯ ʻಬಾಲಗಂಧರ್ವ ರಂಗ ಮಂದಿರʼ, ʻತಿಲಕ ಸ್ಮಾರಕ ಮಂದಿರʼ, ʻಭರತ ನಾಟ್ಯ ಮಂದಿರʼ, ʻಸುದರ್ಶನ ಸಭಾಂಗಣʼ, ʻಮೋರೇಶ್ವರ ಸಭಾಂಗಣʼ, ʻಯಶವಂತರಾವ್ ಚವ್ಹಾಣ ನಾಟ್ಯ ಮಂದಿರʼ ಮುಂತಾದ ರಂಗವೇದಿಕೆಯಲ್ಲಿ ಕನಿಷ್ಠ ವಾರಾಂತ್ಯಕ್ಕಾದರೂ ರಂಗಪ್ರಯೋಗಗಳು ನಡೆಯುತ್ತಿರುತ್ತವೆ.  ದೆಹಲಿ, ಬೆಂಗಳೂರು, ಹೈದ್ರಾಬಾದ್, ಚೆನೈ, ಕೊಲಕತ್ತಾ, ಸೇರಿದಂತೆ ದೇಶದ ಇತರ ಮಹಾನಗರಗಳಲ್ಲಿ ರಂಗೋದ್ಯಮ ತೀರಾ ಕಡಿಮೆಯಾಗುತ್ತಿದೆ ಎನ್ನುವ ತುಲನಾತ್ಮಕ ವರದಿ ಲಭ್ಯವಾಗುತ್ತಿದೆ.

ಭಾರತ ರಂಗ ಭೂಮಿಯ ಕುರಿತು ಅಧ್ಯಯನ ಮಾಡುವ ಸಂದರ್ಭದಲ್ಲಿ ಒಂದು ಕಾಲದಲ್ಲಿ ಸಂಸ್ಕೃತ ಭಾಷೆಯ ನಾಟಕ ಪ್ರಕಾರದಿಂದ ಆದಿಯಾಗಿ ಯಕ್ಷಗಾನದಂತಹ ಪ್ರಸಿದ್ದ ಪ್ರದರ್ಶನ ಕಲೆಯ ಬಗ್ಗೆ, ಮುಂದುವರೆದು ದೇಶದ ಇತರ ಪ್ರಾದೇಶಿಕ ಭಾಷೆಗಳಲ್ಲಿ ರಂಗಾಭ್ಯಾಸಕ್ಕೆ ಆಯಾ ಭಾಷೆಯ ಸಂಸ್ಕೃತಿ, ಆಚರಣೆಗಳನ್ನು ಬಳಸಿಕೊಂಡಿದ್ದು ಕಾಣಬಹುದು. ಅದರಲ್ಲಿಯೂ ಮಹಾಭಾರತ, ರಾಮಾಯಣ, ಪುರಾಣ ಕಥೆಗಳು ಸೇರಿದಂತೆ ಸ್ಥಳೀಯ ಇತಿಹಾಸ ಸಾರುವ ಐತಿಹಾಸಿಕ ಕಥೆಗಳನ್ನೇ ರಂಗರೂಪದಲ್ಲಿ ನೀಡಲಾಗುತ್ತಿತ್ತು. ಕಾಲಾನಂತರ ರಂಗದಲ್ಲಿ ಕಾಲ್ಪನಿಕ ಹಾಗೂ ಸಾಮಾಜಿಕ ಕಥೆಗಳ ಕಾರುಬಾರು ಕಂಡು ಬರುತ್ತಿತ್ತು.

ಪ್ರಪಂಚದಲ್ಲಿರುವ ಎಲ್ಲಾ ಭಾಷೆಯ ರಂಗಪ್ರಾಕಾರಗಳ ಬಗ್ಗೆ ನಮ್ಮ ಹಿರಿಯರು ಸಾಕಷ್ಟು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಗ್ರಂಥರೂಪದಲ್ಲಿ ನೀಡಿರುವುದು ಮುಂದಿನ ಪೀಳಿಗೆ ರಂಗಾಸಕ್ತಿಯನ್ನು ಉಳಿಸಿ ಬೆಳೆಸಲು ಅನುಕೂಲವಾಗುತ್ತದೆ. ʻಸ್ಟಾನಿ ಹೊಚ್ಮನ್ʼ ಅವರು ಬರೆದ ʻಮೆಕ್ಗ್ರಾ-ಹಿಲ್ʼ ಎನ್ನುವ ವಿಶ್ವರಂಗಕೋಶ, ʻಮನೋಹರ ಲಕ್ಷ್ಮಣ ವರದಪಾಂಡೆʼ ಅವರು ರಚಿಸಿದ ʻಭಾರತೀಯ ರಂಗಭೂಮಿ ಇತಿಹಾಸʼ, ʻಡಾನ್ ರೂಬಿನ್ ಅವರ ದಿ ವರ್ಲ್ಡ್ ಎನ್ಸೈಕ್ಲೋಪೀಡಿಯಾ ಆಫ್ ಕಾಂಟೆಂಪರರಿ ಥಿಯೇಟರ್ʼ ʻಅಮರೇಶ ದತ್ತʼ ಅವರ ʻದಿ ಎನ್ಸೈಕ್ಲೋಪೀಡಿಯಾ ಆಫ್ ಇಂಡಿಯನ್ ಲಿಟರೇಚರ್ʼ, ʻಗೇಬ್ರಿಯಲ್ ಎಚ್. ಕೋಡಿʼ ಹಾಗೂ ʻಎವರ್ಟ್ ಸ್ಪ್ರಿಂಚೋರ್ನ್ʼ ರಚಿಸಿದ ʻದಿ ಕೊಲಂಬಿಯಾ ಎನ್ಸೈಕ್ಲೋಪೀಡಿಯಾ ಆಫ್ ಮಾಡರ್ನ್ ಡ್ರಾಮಾʼ, ʻಅಪರ್ಣಾ ಭಾರ್ಗವ ಧಾರವಾಡಕರ್ʼ ಅವರ ʻಸ್ವಾತಂತ್ರ್ಯದ ಚಿತ್ರಮಂದಿರಗಳು – ೧೯೪೭ ರಿಂದ ಭಾರತದಲ್ಲಿ ನಾಟಕ, ಸಿದ್ಧಾಂತ ಮತ್ತು ನಗರ ಪ್ರದರ್ಶನ ಮುಂತಾದ ಆಕರ ಗ್ರಂಥಗಳು ಭಾರತೀಯ ಸೇರಿದಂತೆ ಜಾಗತಿಕ ಮಟ್ಟದ ರಂಗಭೂಮಿಯ ಇತಿಹಾಸವನ್ನು ದಾಖಲಿಸಿರುವುದು ಕಂಡುಬರುತ್ತದೆ.

ಭಾರತದ ರಂಗ ಇತಿಹಾಸದಲ್ಲಿ ಕನ್ನಡದ ಯಕ್ಷಗಾನಕಲೆಯನ್ನು ಆದಿಕಲಾ ಪ್ರಾಕಾರ ಎಂದು ಹೇಳಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ಸಂಗತಿ. ಯಕ್ಷರಂಗದ ಪ್ರೇರಣೆಯಿಂದ ಕವಲೊಡೆದ ಅನೇಕ ಪ್ರಕಾರಗಳು ದೇಶದ ವಿವಿಧ ಕಡೆಗಳಲ್ಲಿ ಹುಟ್ಟಿಕೊಂಡು ಅವುಗಳು ಆಯಾ ಪ್ರಾದೇಶಿಕ ಕಲೆ ಎಂದು ಕರೆಸಿಕೊಂಡಿವೆ. ಕನ್ನಡಿಗರಾದ ನಮಗೆ ನಮ್ಮ ಕಲೆ, ಸಂಸ್ಕೃತಿ, ಜನಪದ, ಸಾಹಿತ್ಯ ಇತ್ಯಾದಿಗಳ ಕುರಿತು ಹೆಮ್ಮೆಯಾಗಬೇಕು. ನಮ್ಮತನವನ್ನು ಉಳಿಸಿ ಬೆಳೆಸುವುದರ ಜೊತೆಗೆ ಕನ್ನಡಿಗರ ಕಲಾವಂತಿಕೆಗಳು ಮಿಕ್ಕ ಕಲೆಗೆ ತಾಯಿ ಬೇರು ಎನ್ನುವುದು ಸತ್ಯ.