ಭಟ್ಕಳ: ರಾಜ್ಯ ಸರ್ಕಾರ ರಾಜ್ಯದ ಕರಾವಳಿ ಪ್ರದೇಶಗಳ ಸಮುದ್ರತೀರವನ್ನು ಸ್ವಚ್ಛಗೊಳಿಸುವ ಯೋಜನೆಗೆ ಮೀಸಲಿಟ್ಟ ರೂ. 840 ಕೋಟಿ ಹಣದಲ್ಲಿ ಜಿಲ್ಲೆಯ ಜನರಿಗೆ ಅತ್ಯವಶ್ಯವಾಗಿ ಬೇಕಾಗಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಿ, ಇಲ್ಲವೇ ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡುವ ಘೋಷಣೆ ಮಾಡಿಸಿ. ಇಲ್ಲವಾದರೆ ನಿಮ್ಮ ಕಚೇರಿಯ ಮುಂದೆ ಯುವಕರೊಂದಿಗೆ ಆಮರಣಾಂತ ಉಪವಾಸ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರಿಗೆ ಶಿರಸಿಯ ಸಾಮಾಜಿಕ ಹೋರಾಟಗಾರ, ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಎಚ್ಚರಿಕೆ ನೀಡಿದರು.

ಮುಂಬರುವ ಬಜೆಟ್ ನಲ್ಲಿ ಕುಮಟಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಮಂಜೂರು ಮಾಡಬೇಕು ಹಾಗೂ ಜಿಲ್ಲೆಯ ಯುವಕರಿಗೆ ಉದ್ಯೋಗ ನೀಡುವ ಯೋಜನಗಳ ಘೋಷಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿ ಕುಮಟಾದಿಂದ ಭಟ್ಕಳದವರೆಗೆ ಮೂರು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಾದಯಾತ್ರೆಯ ಕೊನೆಯ ದಿನವಾದ ಇಂದು ಭಟ್ಕಳದ ಉಸ್ತುವಾರಿ ಸಚಿವರ ಕಚೇರಿ ತಲುಪಿ, ಮನವಿ ಸಲ್ಲಿಸಿ ಮಾತನಾಡಿದ ಅನಂತಮೂರ್ತಿ ಹೆಗಡೆ, ಉತ್ತರಕನ್ನಡ ಜಿಲ್ಲೆಗೆ ಈಗಾಗಲೇ ಕುಮಟಾದಲ್ಲಿ ಹಿಂದಿನ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಸ್ಥಳವನ್ನು ಗುರುತಿಸಿತ್ತು. ಆದರೆ ನಂತರ ಬಂದ ಈಗಿನ ಸರ್ಕಾರ ಆ ಬಗ್ಗೆ ಮುಂದಿನ ಕ್ರಮಕೈಗೊಂಡಿಲ್ಲ. ಅದಕ್ಕೆ ತಕ್ಷಣ ಸರ್ಕಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದೇ ಫೆಬ್ರುವರಿ 16 ರಂದು ಸದನದಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಅಗತ್ಯ ಕ್ರಮ ಮತ್ತು ಹಣವನ್ನು ಘೋಷಣೆ ಮಾಡಿ ಎಂದು ಆಗ್ರಹಿಸಿದರು.

ವಿಡಿಯೋ ನೋಡಿ: https://fb.watch/q3sDED-Ye7/?mibextid=Nif5oz

ಈಗಾಗಲೇ ಹಿಂದೊಮ್ಮೆ ಶಿರಸಿಯಿಂದ ಕಾರವಾರದ ವರೆಗೆ ಪಾದಯಾತ್ರೆ ಮತ್ತು ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಮಯದಲ್ಲೂ ಹೋರಾಟ ಮಾಡಿ ಉತ್ತರಕನ್ನಡ ಜಿಲ್ಲೆಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅಗತ್ಯಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಬೇಡಿಕೆ ಇಟ್ಟರೂ, ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಆರೋಗ್ಯದ ವಿಚಾರದಲ್ಲಿ ಜಿಲ್ಲೆಯ ಜನರ ಜೀವನದ ಜೊತೆ ಆಟವಾಡದೆ ಈ ತಕ್ಷಣ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬೇಕಾದ ಹಣವನ್ನು ಮಂಜೂರು ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ಚಿನ್ನದ ಕರಾಟೆಪಟುಗಳಿಗೆ ಅದ್ದೂರಿ ಸ್ವಾಗತ

ಉತ್ತರಕನ್ನಡ ಜಿಲ್ಲೆ ಉತ್ತರವಿಲ್ಲದೆ ಅಭಿವೃದ್ಧಿಯಲ್ಲಿ ವಂಚಿತವಾಗಿದೆ. ಆ ನಿಟ್ಟಿನಲ್ಲಿ ಹಿರೇಗುತ್ತಿಯಲ್ಲಿ ಸರ್ಕಾರದ ಅಧೀನದಲ್ಲಿರುವ ಕೆಐಎಡಿಬಿಯ 1800 ಎಕರೆ ಜಾಗವಿದೆ. ಕನಿಷ್ಠ 1 ಸಾವಿರ ಎಕರೆಯಲ್ಲಿ ಸಾಫ್ಟವೇರ್ ಪಾರ್ಕ್ ಮಾಡಿ, ಕಂಪನಿಗಳಿಗೆ ಜಾಗ ನಿಡಿ ಅಹ್ವಾನ ನೀಡಿದಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಇದಕ್ಕೆ ಬೇಕಾದ ಕಾರ್ಯಚಟುವಟಿಕೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕೆವಿಜಿ ಬ್ಯಾಂಕ್ ನಿಂದ ಪ್ರತಿಭಾ ಪುರಸ್ಕಾರ

ಇಂದು ಬೆಳಿಗ್ಗೆ ಮುರುಡೇಶ್ವರದಿಂದ ಆರಂಭವಾದ ಮೂರನೇ ದಿನದ ಪಾದಯಾತ್ರೆಯು ಮಾರ್ಗಮಧ್ಯ ಕಾಯ್ಕಿಣಿ, ಬಸ್ತಿ, ಸಾದರಹೊಳೆ, ಶಿರಾಲಿಗಳಲ್ಲಿ ಸಭೆಗಳನ್ನು ನಡೆಸಿ ಜನರಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸಿತು.

ಇದನ್ನೂ ಓದಿ: ಕಟ್ಟೆವೀರ ದೇವರ ವರ್ಧಂತ್ಯೋತ್ಸವ ಸಂಪನ್ನ

ಪಾದಯಾತ್ರೆಯಲ್ಲಿ ರಾಜ್ಯ ಅನ್ನದಾತ ರೈತ ಸಂಘದ ಅಧ್ಯಕ್ಷ ಚಿದಾನಂದ ಹರಿಜನ, ಕರವೇ ಜನಧ್ವನಿ ಅಧ್ಯಕ್ಷ ಉಮೇಶ್ ಹರಿಕಾಂತ, ನಾಗರಾಜ ಪಟಗಾರ, ಸಂದೀಪ್‌ ನಾಯ್ಕ, ವಿವೇಕ ನಾಯ್ಕ, ಸಂತೋಷ ನಾಯ್ಕ, ಅಹೀಸ ಹೆಗಡೆ ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡಿದ್ದರು.