‘ಕಡಲ ಕವಿ’ ಎಂಬ ಶಿರೋನಾಮಾಂಕಿತ ಭಟ್ಕಳ ತಾಲೂಕಿನ‌ಕರಿಕಲ್ ಗ್ರಾಮದ ಯುವ ಕವಿ ಶಿವಾನಂದ‌ ಮೊಗೇರ ಅವರ ಚೊಚ್ಚಲ ಕವನ ಸಂಕಲನ ‘ಕಡಲಾಳದ ಕಾವ್ಯ’ ಆ.೪ರಂದು ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿದೆ. ನಮ್ಮೂರಿನ‌ ಕವಿಯ ಚೊಚ್ಚಲ ಕವನ ಸಂಕಲನ ಪರಿಚಯಿಸಬೇಕೆಂದಾಗ, ಕೃತಿಯ ಮುನ್ನುಡಿಯೇ ಸೂಕ್ತ ಎಂದೆನಿಸಿತು. ಈ ಕೃತಿಯ ಕುರಿತು, ಕೃತಿಯಲ್ಲಿರುವ ಕವನಗಳ ಬಗ್ಗೆ ಸಾಹಿತಿ, ಶಿಕ್ಷಕಿ ಬೆಳಗಾವಿಯ ಡಾ.ಅನ್ನಪೂರ್ಣ ಹಿರೇಮಠ ಬರೆದಿರುವ ಮುನ್ನುಡಿ(preface) ಇಲ್ಲಿದೆ……

ವಿಡಿಯೋ ಸಹಿತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಮನುಷ್ಯ ಭಾವಜೀವಿ. ಭಾವನೆಗಳಿಲ್ಲದೆ ಜೀವವಿರಲಾರದು ಜಗದಲಿ. ಹಾಗೆ ಅರಳುವ ತುಳುಕುವ ಭಾವನೆಗಳನ್ನು ಇತರರ ಮುಂದೆ ವ್ಯಕ್ತಪಡಿಸುವುದು ಸುಲಭವಲ್ಲ, ಹಾಗೆಯೇ ಅಬ್ಬರಿಸುವ ಭಾವಗಳನ್ನು ತಡೆಯುವುದು ಸುಲಭವಲ್ಲ, ಕೆಲವರು ಮಾತಾಡಿ ಮನ ಹಗರು ಮಾಡಿಕೊಳ್ಳಬಹುದು. ಅದನ್ನೇ ಹೊರಹಾಕುವ ಜಾಣ್ಮೆ ಉಳ್ಳವರು ಅಕ್ಷರ ರೂಪದಲ್ಲಿ ಚಿತ್ರಿಸಿ ಇಡಬಹುದು. ಹಾಗೆ ಈ ಸೃಷ್ಟಿಯ ಚೆಲುವಿನೊಂದಿಗೆ ತನಗೆ ಮೆಚ್ಚುಗೆಯಾದವರ ಬಗ್ಗೆ ಸುಂದರವಾದ ಪದ ಬಳಕೆಯಿಂದ ಪ್ರಾಸದೊಂದಿಗೆ ಅರ್ಥ ಬರುವಂತೆ, ಮನಸೆಳೆಯುವಂತೆ, ಮನಕ್ಕೆ ಮುದ ನೀಡುವಂತೆ, ಓದುಗರ ಮನ ತಟ್ಟುವಂತೆ ಬರೆಯುವವನೇ ಕವಿ ಆಗಬಲ್ಲ.

ಕವಿತೆ, ಹನಿಗವನ ಏನೇ ಆಗಿರಲಿ ಅರ್ಥ ಬರುವಂತೆ ತೂಕಯುತವಾದ ಸಾಹಿತ್ಯ ಓದುಗನನ್ನು ಚಿಂತನೆಗೆ ಒಳಪಡಿಸುವ, ಮಂತ್ರ ಮುಗ್ಧರನ್ನಾಗಿಸುವಂತಿರಬೇಕು ಕವನ. ಬರೆದ ಪದಗಳೆಲ್ಲ, ಗೀಚಿದ ಸಾಲುಗಳೆಲ್ಲ ಕವನ ಆಗಲಾರವು. ಅತಿಯಾದ ಓದಿನಿಂದ ಮನನ ಮಾಡಿಕೊಂಡು ಸಾಕಷ್ಟು ವಿಚಾರಗಳನ್ನು ತನ್ನೊಳಗೆ ಇಳಿಸಿ ಮಂಥಿಸಿ, ನೂರಾರು ಬಾರಿ ವಿಚಾರಿಸಿ ಸೂಕ್ತ ಪದಪುಂಜಗಳಿಂದ ಹೆಣೆದು ಓದುಗನ ಮನವನ್ನು ಮುಟ್ಟುವಂತಹ ಕವನಗಳು ನಿಜವಾದ ಕವನಗಳಾಗುತ್ತವೆ. ಜನಮಾನಸದಲ್ಲಿ ಉಳಿಯುತ್ತವೆ.

ಕವಿಯಾಗಬಯಸುವವನು ಭಾಷೆಯ ಮೇಲೆ ಹಿಡಿತ, ಶಬ್ದಗಳ ಬಳಕೆಯ ಕುಶಲತೆ, ಅಪಾರ ಓದಿನಿಂದ ಭಾಷಾಜ್ಞಾನ ಹೊಂದಲೇಬೇಕು. ವಿಷಯವನ್ನು ನಿರೂಪಿಸುವ ಚಾಣಾಕ್ಷತೆ ಇರಬೇಕು. ಹತ್ತಾರು ಸಲ ತಾ ಬರೆದದ್ದನ್ನು ಓದಿ ಓದಿ ಬರೆಯುವ ಕಲೆ ಕರಗತಗೊಳಿಸಿಕೊಳ್ಳಬೇಕು.

ಹಡಗು(ಬೋಟ್) ನಡೆಸುವ ಮೀನುಗಾರ ಕಡಲ ಕವಿಯಾಗಿ ಸೃಷ್ಟಿ ಸಿರಿಯ ಅನನ್ಯ ತಾಣದ ಒಡನಾಟದೊಂದಿಗೆ ಕವನಗಳ ಬರೆಯುವ ಗೀಳು ಹಚ್ಚಿಕೊಂಡಂತ ಭಟ್ಕಳದ ಕರಿಕಲ್ ಊರಿನವರಾದ ಶ್ರೀ ಶಿವಾನಂದ ಮೊಗೇರ ಒಬ್ಬ ಉತ್ತಮ ಕವಿ ಆಗುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಇಡುತ್ತಿರುವುದು ಶ್ಲಾಘನೀಯ. ಪ್ರಕೃತಿಯ ಮಡಿಲೇ ಬದುಕಿನ ತಾಣ. ಅನೇಕ ವಿಸ್ಮಯಗಳ ನೋಡುತ್ತಲೇ ಜೀವನದ ಕಷ್ಟ- ಸಂಕಷ್ಟ, ನಷ್ಟಗಳ ಉನ್ನತ ಬೆಳೆದಿರುವ ಶಿವಾನಂದ ಇವರು ಕವನಗಳ ಬರೆಯುತ್ತಿರುವುದು ಸಂತಸದ ವಿಷಯ. ಇವರ ಈ ಚೊಚ್ಚಲ “ಕಡಲಾಳದ ಕಾವ್ಯ“ ಎಂಬ ಸುಂದರ ನಾಮಧೇಯ ಹೊತ್ತು ಹೊರಬರಲು ಸಿದ್ಧವಾಗುತ್ತಿರುವ ಕೆಲಸ ಸಣ್ಣದೇನಲ್ಲ. ಬಿಸಿಲು ಮಳೆ, ಚಳಿ, ಬಿರುಗಾಳಿ ಎಲ್ಲವನ್ನೂ ಸಹಿಸಿ ಸಮೀಕರಿಸಿ ನಿತ್ಯ ಕಾಯಕದ ಮಧ್ಯದಲ್ಲಿ ಸೊಗಸಾದ ಗೀತೆಗಳ ರೂಪದಲ್ಲಿ ಕವನ ಚಿತ್ರಿಸಿಟ್ಟಿದ್ದಾರೆ. ಬದುಕಿನ ಪುಟದಲ್ಲಿ ಬಂದು ಹೋಗುವ ಸಂಬಂಧಗಳ, ಅವು ನೀಡಿ ಹೋಗುವ ನೋವು ನಲಿವುಗಳ ಪಟ್ಟಿ ಮಾಡುತ್ತಾ ಮೊದಲನೇ ಕವನದ ಕೊನೆ ಸಾಲಿನಲ್ಲಿ ಹೀಗೆ ಹೇಳುತ್ತಾರೆ….

ಯಾರೊ ಒಬ್ರು ಈ ಬದುಕಿಗೆ ಗುರುವಾಗಿದ್ದಾರೆ ಇನ್ನಾರೊ ಬಂದು ಕಷ್ಟದಲ್ಲಿ ದೇವರಾಗುತ್ತಾರೆ

ಎನ್ನುವ ಸಾಲು ಮನ ತಟ್ಟುತ್ತದೆ. ಕವಿತೆ ಎಂಬ ಶೀರ್ಷಿಕೆ ಹೊತ್ತ ಕವನ ಸೋಲು ಗೆಲುವಿನ ಜೀವನದಾಟವಿದು ಜೀವನ ಎನ್ನುತಾ ಭಾವನೆಗಳ ಹೆಣೆದು ಕವಿತೆ ಎಂದರೆ ಬರೀ ಪದಗಳಲ್ಲ ಕವಿ ಎದೆಯ ಭಾವಗಳು ಕವಿತೆ ಎಂದರೆ ಬರೀ ಅಕ್ಷರಗಳಲ್ಲ ಕವಿ ಎದೆಯ ಸ್ಪೂರ್ತಿ ಕಿರಣಗಳು ಎಂದು ಕವಿತೆಗಳೆಂದರೇನು ಎಂದು ಹೇಳುವ ಪ್ರಯತ್ನ ಈ ಕವನದಲ್ಲಿ ಮಾಡಿದ್ದಾರೆ. ಹಲವು ಕವನಗಳಲ್ಲಿ ಹೆಣ್ಣಿನ ಕುರಿತು ಬರೆದದ್ದನ್ನು ಓದಿದಾಗ ಹೆಣ್ಣಿನ ಬಗೆಗೆ ಇವರಿಗಿರುವ ಗೌರವ ಪ್ರೀತಿ, ಅಭಿಮಾನ ಎಷ್ಟು ಎಂದು ನಮಗೆ ಅರ್ಥವಾಗುತ್ತದೆ.

ಕನಸನ್ನು ತ್ಯಾಗ ಮಾಡಿ ಮನಸ್ಸು ಕೊಡುವಳು
ಮನಸ್ಸನ್ನು ತ್ಯಾಗ ಮಾಡಿ ಪ್ರೀತಿ ಕೊಡುವಳು
ದೇಹವನ್ನು ತ್ಯಾಗ ಮಾಡಿ ಜೀವ ಕೊಡುವಳು
ಕುಟುಂಬಕ್ಕಾಗಿ ತನ್ನ ಜೀವ ಸವೆಸುವಳು

ಎಂಬ ಈ ಕವನದ ಸಾಲುಗಳನ್ನು ನೋಡಿದಾಗ ಹೆಣ್ಣಿನ ತ್ಯಾಗ, ಬಲಿದಾನ, ಅವಳ ನಿಸ್ವಾರ್ಥ ಸೇವೆ, ಒಳ್ಳೆಯ ಗುಣಗಳನ್ನು ಹೇಳುತ್ತಾ ತನ್ನ ಹೆಂಡತಿಗೆ ಕೃತಜ್ಞತೆ ಸಲ್ಲಿಸುವ ರೂಪದಲ್ಲಿ ಈ ಕವನ ಮೂಡಿ ಬಂದಿದೆ.

ಜಗದಲ್ಲಿ ಆಗುಹೋಗುಗಳ ಬಗ್ಗೆ ಚಿಂತನ ಮಂಥನ ಮಾಡುವ ಸಮಾಜದ ಮೇಲಿರುವ ಕಳಕಳಿಯನ್ನು ವ್ಯಕ್ತಪಡಿಸುವ ಕವನಗಳು ಅವರ ಈ ಸಂಕಲನದಲ್ಲಿ ಇವೆ. ಸಮಾಜ ಸುಧಾರಣಾ ಭಾವ ಬಿಂಬಿಸುವ ಕವನಗಳು ಇವೆ. ಇನ್ನೂ ಹಲವು ಕವನಗಳಲ್ಲಿ ನಾಡ ಕಂಡ ಧೀಮಂತ ವ್ಯಕ್ತಿಗಳ ಬಗ್ಗೆ, ಹೋರಾಟಗಾರರ ಬಗ್ಗೆ, ತಮ್ಮ ಕಾಯಕದ ಕುರಿತು, ತಾವು ಇರುವ ಪ್ರಕೃತಿಯ ಮಡಿಲಿನ ಸುಂದರ ಸಮುದ್ರವನ್ನು ಕುರಿತು ಸುಂದರವಾದ ಹಲವು ಕವನಗಳನ್ನು ಬರೆದಿದ್ದಾರೆ. ಸರಳ ಎನಿಸಿದರೂ ಎಲ್ಲ ಕವನಗಳು ಅರ್ಥಗರ್ಭಿತವಾಗಿವೆ. ತಮ್ಮ ಕೆಲಸದ ಪರಿ, ಬರುವಂತಹ ತೊಡಕುಗಳು, ಒಳಿತು ಕೆಡಕುಗಳ ಬಗ್ಗೆ, ಜಲಚರ ಪ್ರಾಣಿ, ಪಕ್ಷಿಗಳ ಬಗ್ಗೆ ಕೃಷ್ಣ ರಾಮರ ಬಗ್ಗೆ ಭಕ್ತಿ ಬಿಂಬಿಸುವ ಕವನಗಳು… ಹೀಗೆ ಎಲ್ಲಾ ರೀತಿಯ ಕವನಗಳನ್ನು ತಮ್ಮ ಲೇಖನಿಯಿಂದ ಹೊರಹೊಮ್ಮಿಸಿದ್ದಾರೆ.

ಇವನೊಬ್ಬ ಮೀನುಗಾರ ನಾವಿಕ ಎನ್ನುವುದಕ್ಕೆ ಸಾಕ್ಷಿಕರಿಸುತ್ತದೆ ನೋಡಿ ಈ ಕವನದ ಸಾಲು,

ನಾನೊಬ್ಬ ದೋಣಿಯ ನಾವಿಕ
ಬಿಸಿಲಲ್ಲಿ ದುಡಿಯುವ ಕಾರ್ಮಿಕ
ಸಾಗುವ ದೋಣಿಯ ನಡೆಸುತ
ಸಾಗರದಿ ಮೀನುಗಳ ಹಿಡಿಯುತ

ಎಂದು ಸರಳ ಸುಲಲಿತ ಭಾಷೆಯಲ್ಲಿ ತನ್ನ ವೃತ್ತಿಯ ಬಗ್ಗೆ ಹೇಳುತ್ತಾ ಪ್ರವೃತ್ತಿಯಲ್ಲಿ ಉಳಿಸಿ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.

ದೇಶದ ಬಗ್ಗೆ ಗೌರವ ಹೆಮ್ಮೆ ತುಂಬಿದ ಕವನಗಳು ಕೂಡ ಈ ಸಂಕಲನದಲ್ಲಿ ಕಾಣುತ್ತೇವೆ. ನಾಡು ನುಡಿಯ ಭಕ್ತಿ, ಪ್ರೀತಿ, ಅಭಿಮಾನ ಬಿಂಬಿಸುವ ಕವನಗಳೂ ಇವೆ. ಸೃಷ್ಟಿಸಿರಿ, ಸೊಬಗು ಹಾಡಿಹೊಗಳುವ ಕವನಗಳು ಹಾಸು ಹೊಕ್ಕಾಗಿವೆ. ಇವರಿಗೆ ನಾಡು ನುಡಿ ದೇಶದ ಬಗ್ಗೆ ಗೌರವ ಇದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಮಗುವಿನ ಬಗ್ಗೆ ಬರೆದ ಕವನ ಪುಟ್ಟ ಮಗುವನ್ನು ನೆನಪಿಸಿ ಮನ ಕಲಕುತ್ತದೆ. ಹೆಣ್ಣಿನ ಚೆಲುವು ಅವಳ ವೈಯ್ಯಾರ, ಒಲವು, ಅವಳ ದೇಹ ಸಂಪತ್ತು, ನಗೆಯ ಗುಣಗಾನ ಮಾಡುತ್ತಾ ಹಲವು ಕವನ ಮೂಡಿಬಂದಿವೆ. ಪ್ರೀತಿ, ಒಲವು, ಗೆಲುವು ಪ್ರೇಮದ ಆಳವನ್ನು ಕೆದಕಿದ್ದಾರೆ. ಮನದ ತುಡಿತ ಮಿಡಿತ ಹಿಡಿದಿಡಲಾರದ ಬಯಕೆಗಳ ಬುತ್ತಿ ಬಿಚ್ಚಿಟ್ಟಿದ್ದಾರೆ.

ಹೆಣ್ಣನ್ನು ಬಣ್ಣಿಸುತ್ತ ಕವನದಲ್ಲಿ ಹೀಗೆ ಅಕ್ಷರಗಳ ಪೋಣಿಸಿ ಹೆಣೆಯುವ ಮೂಲಕ ಈ ಕೆಳಗಿನ ಕವನದಲ್ಲಿ,

ಅವಳನ್ನು ನೋಡುವ ಹುಚ್ಚಲಿ
ಕ್ಷಣ ಕ್ಷಣ ಮಾತಾಡಬೇಕೆನ್ನುತಲಿ
ಮನಸ್ಸಲ್ಲಿ ಅವಳ ಬಯಸುತ್ತಲಿ
ತನು ಮನದಲ್ಲಿ ಅವಳ ತುಂಬುತಲಿ
ಎಂದು ಸುಂದರವಾಗಿ ಹೇಳಿದ್ದಾರೆ.

ಇನ್ನೊಂದು ಕವನ ಮೀನುಗಾರನನ್ನು ಬಿಂಬಿಸುತ್ತ

ಸಮುದ್ರದ ಮೇಲೆ ಬೋಟು
ಬೋಟಿನ ಮೇಲೆ ಬಲೆ ಯಂತ್ರಗಳು ಮೀನುಗಾರರು

ಎನ್ನುತ್ತಾ ಮೀನುಗಾರನೊಬ್ಬ ಹೇಗಿರುತ್ತಾನೆ, ಆ ಮೀನು ಹಿಡಿಯುವ ಕಾಯಕದ ಪರಿ ತಿಳಿಸುತ್ತಾರೆ ಈ ಕವನದಲ್ಲಿ.

ಹೀಗೆ ಶ್ರೀ ಶಿವಾನಂದ ಮೊಗೇರ ಅವರು ಎಲ್ಲಾ ಪ್ರಕಾರದ ಕವನಗಳನ್ನು ಬರೆಯುವ ಪ್ರಯತ್ನ ಮಾಡಿದ್ದಾರೆ. ಉತ್ತಮ ಕವನಗಳು ಮೂಡಿಬಂದಿವೆ. ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ಕವನಗಳು ಕೂಡ ಈ ಕವನ ಸಂಕಲನದಲ್ಲಿ ಮೂಡಿಬಂದಿವೆ.

ಶ್ರೀಯುತ ಶಿವಾನಂದ ಮೊಗೇರರವರು ನಿರಂತರ ಮೀನು ಹಿಡಿಯುವ, ದೋಣಿ ನಡೆಸುವ ಕಾಯಕದಲ್ಲಿ ನಿರತರಾದವರು. ಸಾಹಿತ್ಯ ವಲಯದಲ್ಲಿ ಸಾಕಷ್ಟು ಜನ ಸಾಹಿತಿ ಸ್ನೇಹಿತರನ್ನು ಹೊಂದಿದ ಇವರು ಸಾಹಿತ್ಯ ಆರಾಧನೆಯನ್ನು ಮಾಡುವ ತವಕದಲ್ಲಿ ಈ ಕವನ ಸಂಕಲನ ಮೂಡಿ ಬರುತ್ತಿದೆ.

ಇನ್ನೂ ಇವರ ಲೇಖನಿಯಿಂದ ಒಳ್ಳೆಯ ಒಳ್ಳೆಯ ಕವನಗಳು ಮೂಡಿ ಬರುವಂತಾಗಲಿ, ಕನ್ನಡ ತಾಯಿಯ ಕೃಪೆ ಇವರ ಮೇಲಿರಲಿ, ಇವರ ಕವನಗಳನ್ನು ಓದಿ ಹಾರೈಸಿರಿ ಇನ್ನೂ ಸುಂದರ ಕವನಗಳೊಂದಿಗೆ ಉತ್ತಮ ಕವನ ಸಂಕಲನಗಳು ಸಿದ್ಧವಾಗಲಿ. ಒಳ್ಳೆಯ ಸಾಹಿತಿಯಾಗಿ ಬೆಳೆಯಲಿ ಎಂದು ಹಾರೈಸುತ್ತಾ ನನ್ನೆರಡು ನುಡಿಗಳು(preface) ಇವರ ಕವನ ಸಂಕಲನಕ್ಕೆ.

– ಡಾ ಅನ್ನಪೂರ್ಣ ಹಿರೇಮಠ, ಸಾಹಿತಿ- ಶಿಕ್ಷಕಿ, ಬೆಳಗಾವಿ.

ಇದನ್ನೂ ಓದಿ : ಶಿವಾನಂದ ಮೊಗೇರರ ‘ಕಡಲಾಳದ ಕಾವ್ಯ’ ಬಿಡುಗಡೆ