Editorial/ ಮನುಷ್ಯ ಹುಟ್ಟುತ್ತಿದ್ದಂತೆ ನಿರಂತರವಾಗಿ ಆತನ  ಅಭ್ಯುದಯಕ್ಕೆ ಗೋವುಗಳು ಸಹಕಾರಿಯಾಗಿವೆ.  ಭಾರತದ ಪರಂಪರೆ, ಚರಿತ್ರೆಯಲ್ಲಿ ಗೋವುಗಳನ್ನು ದೇವರಿಗೆ ಸಮಾನವಾಗಿ ಪೂಜೆಸಲಾಗುತ್ತಿದೆ. ಗೋವುಗಳನ್ನು ನಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತೇವೆ. ಆದರೆ ಇಂತಹ ಗೋವುಗಳಿಗೆ ವಯಸ್ಸಾಗುತ್ತಿದ್ದಂತೆ ನಿರ್ಲಕ್ಷಿಸಲಾಗುತ್ತಿದೆ.

ಗೋವಿನ ಆರೈಕೆಯಿಂದ ಮನುಷ್ಯನ ಸ್ವಭಾವದಲ್ಲಿಯೂ ಬದಲಾವಣೆಯಾಗುತ್ತದೆ.  ಗೋವುಗಳ ಆರೈಕೆಯಿಂದ ಮಾನವನ ವ್ಯಕ್ತಿತ್ವ ವಿಕಸನವಾಗಿ ದಯೆ, ಪ್ರೀತಿ ಹೆಚ್ಚಲು ಕಾರಣವಾಗುತ್ತದೆ. ಆದರೆ, ವಯಸ್ಸಾದ ಹಸುಗಳನ್ನು ಅಮಾನವೀಯವಾಗಿ ವ್ಯವಹರಿಸಲಾಗುತ್ತಿದೆ. ಇದನ್ನು ಅರಿತ ಪ್ರಧಾನಿ ನರೇಂದ್ರ ಮೋದಿಯವರು ವಯಸ್ಸಾದ ಗೋವುಗಳ ಸಂರಕ್ಷಣೆಗೆ ವಿಶೇಷ ಕಾನೂನು ತಿದ್ದುಪಡಿ ತಂದರು. ಆದರೆ, ನಮ್ಮ ರಾಜ್ಯದಲ್ಲಿ ಗೋವುಗಳ ರಕ್ಷಣೆ ಪರಿಣಾಮಕಾರಿಯಾಗಿ ಆಗುತ್ತಿದೆಯೇ? ಖಂಡಿತ ಇಲ್ಲ.

ಸರ್ಕಾರದ ಅಂಕಿ-ಸಂಖ್ಯೆಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ೨೭೮ ಗೋಶಾಲೆಗಳಿವೆ. ೨೪೮ ಖಾಸಗಿ ಗೋಶಾಲೆಗಳಿದ್ದರೆ, ಉಳಿದ ೩೦ ಗೋಶಾಲೆಗಳು ಸರ್ಕಾರದಿಂದ ನಡೆಸಲ್ಪಡುತ್ತಿವೆ. ಸರ್ಕಾರಿ ಗೋಶಾಲೆಗಳಲ್ಲಿ ೧೦೧೪ ಮತ್ತು ಖಾಸಗಿಯಾಗಿ ೪೩೭೯೬ ಗೋವುಗಳ ಪಾಲನೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ೧೫ ಖಾಸಗಿ ಗೋಶಾಲೆಗಳಿವೆ. ಭಟ್ಕಳ ತಾಲೂಕಿನಲ್ಲಿ ನಾಲ್ಕು ಗೋಶಾಲೆಗಳು ಟ್ರಸ್ಟ್‌ ಮತ್ತು ಮಠಗಳಿಂದ ನಡೆಸಲ್ಪಡುತ್ತಿವೆ. ಉಳಿದಂತೆ ಹೊನ್ನಾವರ ಮತ್ತು ಕುಮಟಾದಲ್ಲಿ ತಲಾ ಮೂರು, ಶಿರಸಿ ತಾಲೂಕಿನಲ್ಲಿ ಎರಡು, ಅಂಕೋಲಾ, ಸಿದ್ದಾಪುರ ಮತ್ತು ಯಲ್ಲಾಪುರದಲ್ಲಿ ತಲಾ ಒಂದು ಗೋಶಾಲೆಗಳು ಕಾರ್ಯಾಚರಿಸುತ್ತಿವೆ.

ಗೋವುಗಳ ನಿರ್ವಹಣೆ ಹೆಚ್ಚಿನ ಹೊರೆಯಾಗಿದ್ದರೂ ಮಠ ಮಾನ್ಯಗಳು, ಸಂಘ-ಸಂಸ್ಥೆಗಳು ಗೋವುಗಳ ಸಾಕಾಣಿಕೆ ಮುಂದುವರಿಸಿದ್ದಾರೆ. ಪ್ರತಿ ಬೇಸಿಗೆಯಲ್ಲಿ ಮೇವಿನ ಕೊರತೆ ಉಂಟಾಗುತ್ತಿದೆ. ಕೂಲಿಕಾರ್ಮಿಕರ ಕೊರತೆಯಿಂದ ಪ್ರತಿ ದಿನ ಗೋವುಗಳಿಗೆ ಮೇವು ಹಾಕುವುದು, ಮಕ್ಕಳಂತೆ ಜೋಪಾನ ಮಾಡುವುದೂ ಕಷ್ಟಕರವಾದಂತಾಗಿದೆ. ಸರ್ಕಾರ ಗೋಶಾಲೆಗಳ ನಿರ್ಮಾಣ ಮಾಡದಿದ್ದರೂ ಕನಿಷ್ಠ ಪಕ್ಷ ಖಾಸಗಿ ಗೋಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಿದೆ. ಹಿಂದೆಲ್ಲ ಗೋಶಾಲೆಗಳ ನಿರ್ವಹಣೆಗೆ ಸರ್ಕಾರ ಕನಿಷ್ಟ ೧೦ ಲಕ್ಷ ರೂ. ಅನುದಾನ ಕೊಡುತ್ತಿತ್ತು. ಆದರೆ, ಕಳೆದೆರಡು ವರ್ಷಗಳಲ್ಲಿ ನಿರ್ವಹಣೆಗೆ ಅನುದಾನ ಕೊಡುವುದೂ ಕಡಿಮೆಯಾಗಿದೆ.

ಇನ್ನು, ಕಳೆದ ಮೂರು ವರ್ಷಗಳಲ್ಲಿ ೪೪ ಸರ್ಕಾರಿ ಗೋಶಾಲೆಗಳಿಗೆ ೩೭ ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.  ಹಳಿಯಾಳ ತಾಲೂಕಿನ ದುಸಗಿ ಗ್ರಾಮದಲ್ಲಿ ಏಕೈಕ ಸರ್ಕಾರಿ ಗಾಯರಾಣ ೨೦ ಎಕರೆಯಲ್ಲಿ ಕಾರ್ಯಾಚರಿಸುತ್ತಿದೆ, ಇದಕ್ಕೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಾರವಾರ ತಾಲೂಕಿನ ಕಣಸಗಿರಿ ಮತ್ತು ಶಿರಸಿ ತಾಲೂಕಿನ ಅಜ್ಜೀಬಳದಲ್ಲಿ ತಲಾ ೫೦ ಲಕ್ಷ ರೂ. ಅನುದಾನದಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.  ಇದರ ಜೊತೆ ಬೆಂಗಳೂರಿನಲ್ಲಿ ಒಂದು ಪಶುವೈದ್ಯಕೀಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ತುಮಕೂರು, ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ತಲಾ ಒಂದೊಂದು ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ರಾಜ್ಯದಲ್ಲಿ ೨೭ ಪಾಲಿಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಉತ್ತರ ಕನ್ನಡದ ಏಕೈಕ ಪಾಲಿಕ್ಲಿನಿಕ್‌ ಇರುವುದು ಯಲ್ಲಾಪುರದಲ್ಲಿ.

ವಿಶ್ವದಲ್ಲಿ ಎಲ್ಲೂ ಇಲ್ಲದಷ್ಟು ಗೋ ಸಂತತಿ ನಮ್ಮ ದೇಶದಲ್ಲಿದೆ. ದೇಶದಲ್ಲಿ ೩೦ ಸಾವಿರ ಕೋಟಿ ಗೋವುಗಳಿಗೆ ಆಶ್ರಯ ನೀಡುತ್ತಿದ್ದೇವೆ. ಅವುಗಳ ಸಂರಕ್ಷಣೆ ನಮ್ಮ ಮೊದಲ ಕರ್ತವ್ಯ ಆಗಬೇಕಾಗಿದೆ. ಗೋ ಸಂರಕ್ಷಣೆ ನಮ್ಮ ಸಂಸ್ಕೃತಿಯಾಗಿರುವುದರಿಂದಲೇ ಭಾರತದ ಸಂಸ್ಕೃತಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗೋವಿನ ಹಾಲು ಸೇರಿದಂತೆ ಗೋ ಉತ್ಪನ್ನಗಳು ನಮ್ಮ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ಗೋವುಗಳಿಗೆ ನಾವು ವಿಶೇಷ ಆದ್ಯತೆ ನೀಡಬೇಕು. ಗೋ ಹತ್ಯೆಗೆ ಕಡಿವಾಣ ಬೀಳಬೇಕಿದೆ. ಗೋ ರಕ್ಷಣೆ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ. ಗೋಶಾಲೆಗಳ ನಿರ್ಮಾಣ, ನಿರ್ವಹಣೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

(Editorial)

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಇದನ್ನೂ ಓದಿ : Tulsi Gowda/ ತುಳಸಿ ಅಜ್ಜಿಯ ಅದ್ಬುತ ಪಯಣ