ಭಟ್ಕಳ : ಉಳ್ಳವರಿಗೊಂದು ಕಾನೂನು… ಬಡವರಿಗೊಂದು ಕಾನೂನಾ? ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತವಾಗುತ್ತಿದೆ. ಇದಕ್ಕೆ ಕಾರಣ, ಹಾಡಿ ಜಾಗದಲ್ಲಿ (Forest Land) ಬಡಪಾಯಿಯೊಬ್ಬ ಕಟ್ಟುತ್ತಿದ್ದ ಮನೆಯನ್ನು ಅರಣ್ಯ ಅಧಿಕಾರಿಗಳು ನೆಲಸಮ ಮಾಡಿರುವುದು. ಅರಣ್ಯಾಧಿಕಾರಿಗಳ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅರಣ್ಯ ಜಾಗ ಅತಿಕ್ರಮಣ (enchroachment) ವಿರುದ್ಧ ಕಠಿಣ ಕಾನೂನು ಇದೆ ನಿಜ. ಅರಣ್ಯ ಜಾಗದಲ್ಲಿ (Forest Land) ಕಟ್ಟಡ ಕಟ್ಟುವುದು ದೊಡ್ಡ ಅಪರಾಧವೇ ಸರಿ. ಆದರೆ, ಉಳ್ಳವರಿಗೆ ಒಂದು ಕಾನೂನು, ಬಡವರಿಗೆ ಒಂದು ಕಾನೂನು ಎನ್ನುವ ಧೋರಣೆ ಕಂದಾಯ ಅಧಿಕಾರಿಗಳು ಭಟ್ಕಳ ಭಾಗದಲ್ಲಿ ಮಾಡುತ್ತಿದ್ದಾರೆ ಎಂದು ಭಟ್ಕಳದ ಜನತೆ ಆರೋಪಿಸುತ್ತಿದ್ದಾರೆ. ಉಳ್ಳವರು, ಶ್ರೀಮಂತರು ಹಾಡಿ ಜಾಗ, ಅರಣ್ಯ ಜಾಗ, ಚರಂಡಿ, ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿದ್ದರೆ ಯಾವುದೇ ತಪ್ಪು ಇಲ್ಲ. ಇದರ ಬಗ್ಗೆ ಸಾರ್ವಜನಿಕರು ದೂರು ಕೊಟ್ಟರೆ ರಾಜಕಾರಣಿಗಳ ಬೆಂಬಲವಿದೆ ನಾವೇನೂ ಮಾಡೋಕೆ ಆಗಲ್ಲ ಎನ್ನುತ್ತಾರೆ. ಆದರೆ ಬಡವ ಸಣ್ಣ ಮನೆ ಕಟ್ಟಿದ್ದರು ಇವರಿಗೆ ಕಾನೂನು ಅರಿವಿಗೆ ಬಂದು ಜೆಸಿಪಿ ತಂದು ಕ್ಷಣಮಾತ್ರದಲ್ಲಿ ನೆಲಸಮ ಮಾಡುತ್ತಾರೆ ಎಂದು ಭಟ್ಕಳಿಗರು ಆರೋಪಿಸಿದ್ದಾರೆ.

ಇದನ್ನೂ ಓದಿ : ಭಟ್ಕಳದಲ್ಲಿ ಗಾಂಜಾ ಘಾಟು

ಭಟ್ಕಳ ತಾಲೂಕಿನ ಜಾಲಿ ಗ್ರಾಮದ ಹಾರ್ನಗದ್ದೆಯ ಬಡ ಅಂಗವಿಕಲನೊಬ್ಬ ಮನೆ ಕಟ್ಟುತ್ತಿದ್ದ.  ಹಾಡಿ ಜಾಗದಲ್ಲಿ ಮನೆ ಕಟ್ಪತ್ತಿರುವ ಸುದ್ದಿ ಕೇಳಿ ದಡ ಬಡಾಯಿಸಿ ಬಂದ ಅಧಿಕಾರಿಗಳು ಜೆಸಿಬಿ ತಂದು ನಿರ್ಮಾಣ ಹಂತದಲ್ಲಿರುವುದನ್ನು ನೆಲಸಮ ಮಾಡಿದ್ದಾರೆ.  ಬಡವನ ಕಷ್ಟದ ಹಣ ಅಧಿಕಾರಿಗಳಿಗೆ ಕಾಣಲಿಲ್ಲ. ಸೌಜನ್ಯಕ್ಕೂ ಎಚ್ಚರಿಕೆ ಕೊಡುವ ವ್ಯವಧಾನ ತೋರಿಸಿಲ್ಲ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ತೋರುವ ಅಧಿಕಾರಿಗಳ ನಡೆಗೆ ಹಿಡಿಶಾಪ ಹಾಕಿರುವ ಜಾಲಿ ಗ್ರಾಮಸ್ಥರು, ಕೂಡಲೇ ಜಾಲಿ ಗ್ರಾಮದಲ್ಲಿ ಎಲ್ಲೆಲ್ಲಿ ಹಾಡಿ ಜಾಗ ಒತ್ತುವರಿ ಆಗಿದೆ ಎಲ್ಲವನ್ನೂ ಖುಲ್ಲಾ ಪಡಿಸಿ ನಿಮ್ಮ ನಿಷ್ಠೆ ಪ್ರಾಮಾಣಿಕತೆ ತೋರಿಸಿ ಎಂದು ಸವಾಲೆಸೆದಿದ್ದಾರೆ. ಇಲ್ಲವಾದರೆ ಈ ಬಡ ಕುಟುಂಬಕ್ಕೆ ಆದ ಅನ್ಯಾಯವನ್ನು ಕೂಡಲೇ ಸರಿಪಡಿಸಿಕೊಡಿ ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :  ಮದ್ಯ ಸೇವಿಸಿ ಬೈಕ್‌ ಚಲಾಯಿಸಿದವಗೆ ಬಿತ್ತು ದಂಡ

ಜಾಲಿ ಗ್ರಾಮದ ಹಾರ್ನಗದ್ದೆಯ ಗಣಪತಿ ನಾಯ್ಕ ಎಂಬುವವರು ಕಟ್ಟುತ್ತಿದ್ದ ಮನೆಯನ್ನು ಕೆಡವಲಾಗಿದೆ. ಗಣಪತಿ ನಾಯ್ಕ ಅಂಗವಿಕಲರು. ಶಿವಮೊಗ್ಗ (Shivamogga) ಮಿಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಮ್ಮ ಎಡಗೈಯನ್ನು ಕಳೆದುಕೊಂಡಿದ್ದಾರೆ. ಇನ್ನೊಂದು ಕೈ ಕೂಡ ಬಲಹೀನವಾಗಿದೆ.  ಗಣಪತಿ ನಾಯ್ಕ ಅವರು ತಮ್ಮ ಹಾಡಿಯಲ್ಲಿಯೇ ಆಸರೆಗೆಂದು ಮನೆ ಕಟ್ಟುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ಬಂದು ನೆಲಗಟ್ಟು ಹಾನಿಮಾಡಿದ್ದಾರೆ. ಜಾಲಿ ಗ್ರಾಮದಲ್ಲಿಯೇ ಇನ್ನೊಬ್ಬ ಬಡವ ಕಟ್ಟುತ್ತಿದ್ದ ಮನೆಗೂ ಅಧಿಕಾರಿಗಳ ವಕ್ರದೃಷ್ಟಿ ಬೀರಿದೆ. ಏಳು ಅಡಿವರೆಗೆ ಕಟ್ಟಿದ್ದ ಗೋಡೆಯನ್ನು ನೆಲಸಮ ಮಾಡಲಾಗಿದೆ. ಆದರೆ, ಉಳ್ಳವರ ಅತಿಕ್ರಮಣ ಇವರಿಗೆ ಯಾಕೆ ಕಾಣುತ್ತಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇದನ್ನೂ ಓದಿ :  ಬಹರೇನ್‌ನಲ್ಲಿ ಭಟ್ಕಳದ ಕಲಾವಿದನ ಪ್ರದರ್ಶನ