ಭಟ್ಕಳ ಡೈರಿ ವರದಿ
ಭಟ್ಕಳ: ಅಪರಾಧ ತನಿಖೆಯಲ್ಲಿ ಪ್ರತಿಯೊಂದು ಸಣ್ಣ ಸಾಕ್ಷ್ಯವೂ ಮಹತ್ವದ್ದಾಗಿದೆ. ಅಂತಹ ಸಾಕ್ಷ್ಯಗಳನ್ನು ನಿಖರವಾಗಿ ದಾಖಲಿಸುವಲ್ಲಿ ಛಾಯಾಗ್ರಹಣದ ಪಾತ್ರ ಎಷ್ಟು ಮುಖ್ಯ ಎಂಬುದನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸಲಾಯಿತು.
ಕಾಲೇಜಿನ ಬಿ.ಎಸ್ಸಿ. ಅಪರಾಧಶಾಸ್ತ್ರ ಮತ್ತು ನ್ಯಾಯವಿಜ್ಞಾನ (Criminology & Forensic Science) ವಿಭಾಗದ ವಿದ್ಯಾರ್ಥಿಗಳಿಗಾಗಿ ಅಪರಾಧ ಸ್ಥಳದ ಛಾಯಾಗ್ರಹಣ ಕುರಿತು ಈ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಛಾಯಾಗ್ರಹಣ ತಜ್ಞ ಕಿರಣ ಶಾನಭಾಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಪರಾಧ ಸ್ಥಳಗಳಲ್ಲಿ ಸಾಕ್ಷ್ಯಗಳನ್ನು ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಛಾಯಾಚಿತ್ರಗಳ ಮೂಲಕ ದಾಖಲಿಸುವ ವಿಧಾನಗಳನ್ನು ವಿವರಿಸಿದರು.
ಒಳಾಂಗಣ ಮತ್ತು ಹೊರಾಂಗಣ ಅಪರಾಧ ಸ್ಥಳಗಳಲ್ಲಿ ಛಾಯಾಗ್ರಹಣ ಮಾಡುವಾಗ ಅನುಸರಿಸಬೇಕಾದ ತಂತ್ರಗಳು, ಸೂಕ್ತ ಬೆಳಕಿನ ಬಳಕೆ ಹಾಗೂ ಛಾಯಾಗ್ರಹಣದ ವಿವಿಧ ತಾಂತ್ರಿಕ ಸೂಕ್ಷ್ಮತೆಗಳ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಶ್ರೀನಾಥ ಪೈ ಇದ್ದರು. ನ್ಯಾಯವಿಜ್ಞಾನ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ನೈಜ ತನಿಖಾ ಪರಿಸ್ಥಿತಿಗಳಲ್ಲಿ ಅಗತ್ಯವಿರುವ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಈ ಕಾರ್ಯಾಗಾರ ಸಹಕಾರಿಯಾಯಿತು.
ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ
ಇದನ್ನೂ ಓದಿ:
ಭಟ್ಕಳ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗುರು ವಿದ್ಯಾಧಿರಾಜ ವಿದ್ಯಾರ್ಥಿಗಳ ಸಾಧನೆಯ ಸರಮಾಲೆ


