ಭಟ್ಕಳ ಡೈರಿ ವರದಿ

ಭಟ್ಕಳ: ನಗರಸಭೆ ಸಮೀಪದ ಕಿದ್ವಾಯಿ ರಸ್ತೆಯಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟಕ್ಕೆ ಸಿದ್ಧವಾಗಿದ್ದ ಆರೋಪದ ಮೇಲೆ ಭಟ್ಕಳ ಶಹರ ಠಾಣೆ ಪೊಲೀಸರು ದಾಳಿ ನಡೆಸಿ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಆರೋಪಿಯಿಂದ ೨.೧೮೦ ಗ್ರಾಂ ಎಂಡಿಎಂಎ ಹಾಗೂ ಸಾಗಾಟಕ್ಕೆ ಬಳಸಲಾಗಿದೆ ಎನ್ನಲಾದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ಬಂದರು ರಸ್ತೆ ೫ನೇ ಕ್ರಾಸ್ ನಿವಾಸಿ ಮಹ್ಮದ್ ರಿಜ್ವಾನ್ (೩೪) ಎಂದು ಗುರುತಿಸಲಾಗಿದೆ. ಅಕ್ಟೋಬರ್ ೮ರಂದು ಮಧ್ಯಾಹ್ನ ಸುಮಾರು ೧೨.೪೫ರ ವೇಳೆಗೆ ಕಿದ್ವಾಯಿ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಆರೋಪಿ ಬುಲೆಟ್ ಬೈಕ್‌ನಲ್ಲಿ ಎಂಡಿಎಂಎ ಇಟ್ಟುಕೊಂಡಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

₹೧.೨೧ ಲಕ್ಷ ಮೌಲ್ಯದ ಮಾದಕ ವಸ್ತು, ಬೈಕ್ ಜಪ್ತಿ:

ಬಂಧಿತನಿಂದ ಸುಮಾರು ₹೨೧,೮೦೦ ಮೌಲ್ಯದ ೨.೧೮೦ ಗ್ರಾಂ ಎಂಡಿಎಂಎ ಹಾಗೂ ಸುಮಾರು ₹೧ ಲಕ್ಷ ಮೌಲ್ಯದ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ ೮(ಸಿ) ಮತ್ತು ೨೨(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಹಾಗೂ ಎಎಸ್‌ಪಿ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ, ಸಿಪಿಐ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್‌ಐ ನವೀನ್ ಎಸ್. ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಗಳಾದ ದಿನೇಶ ನಾಯಕ, ದೀಪಕ ನಾಯ್ಕ, ಸುರೇಶ ಮರಾಠಿ, ಕೃಷ್ಣ ಎನ್.ಜಿ., ಮಲ್ಲಿಕಾರ್ಜುನ ಉಟಗಿ, ಕಿರಣ ಪಾಟೀಲ್, ಜಗದೀಶ್ ನಾಯ್ಕ, ಮಹೇಶ ಅಮಗೋತ, ಚಂದ್ರು ಮರಾಠಿ, ವಿದ್ಯಾ ಆಚಾರಿ ಮತ್ತು ಶ್ವೇತಾ ಹೆಚ್.ಎನ್. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ : 

ಹೆಬ್ಳೆಯ ರಹಮತ್ ಆಬಾದ್ ರಸ್ತೆ ದುರಸ್ತಿ, ಕುಡಿಯುವ ನೀರಿಗೆ ಆಗ್ರಹ

ಭಟ್ಕಳದಲ್ಲಿ ಅ. ೧೧ರಿಂದ ಶರನ್ನವರಾತ್ರಿ ಉತ್ಸವ: ಶ್ರೀ ಶ್ರೀಧರ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ