ಭಟ್ಕಳ ಡೈರಿ ವರದಿ
ಭಟ್ಕಳ: ಮುಟ್ಟಳ್ಳಿ–ತಲಾಂದದ ಎಕ್ಕೆಗೋಳಿ ಶ್ರೀ ಮಹಾಗಣಪತಿ, ಶ್ರೀ ದುರ್ಗಾಪರಮೇಶ್ವರಿ ಹಾಗೂ ಶ್ರೀ ಯಕ್ಷೇಶ್ವರಿ ಪರಿವಾರ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವವು ಅಕ್ಟೋಬರ್ ೧೧ರಿಂದ ೨೧ರವರೆಗೆ ಹನ್ನೊಂದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಉತ್ಸವದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದ್ದು, ಸಂಜೆ ೬.೩೦ರಿಂದ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ರಾತ್ರಿ ೮.೩೦ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಲಿದೆ.
ದಿನಂಪ್ರತಿ ವಿಶೇಷ ಅಲಂಕಾರ:
ನವರಾತ್ರಿ ಉತ್ಸವದ ಸಂದರ್ಭದಲ್ಲಿ ದೇವರಿಗೆ ವಿವಿಧ ದಿನಗಳಲ್ಲಿ ಅರಿಶಿನ, ಕುಂಕುಮ, ಬೆಣ್ಣೆ, ಗಂಧ, ಬಳೆ, ಶಾರದಾ, ದ್ರಾಕ್ಷಿ, ದುರ್ಗಾ, ಹತ್ತಿ ಹಾಗೂ ವಿಳ್ಯದೆಲೆ ಸೇರಿದಂತೆ ವಿವಿಧ ವಿಶೇಷ ಅಲಂಕಾರಗಳನ್ನು ಮಾಡಲಾಗುತ್ತದೆ.
೧೬ರಂದು ದುರ್ಗಾಹೋಮ, ೨೧ರಂದು ಚಂಡಿಕಾ ಹೋಮ: ಅಕ್ಟೋಬರ್ ೧೬ರಂದು ಬೆಳಿಗ್ಗೆ ೮ ಗಂಟೆಗೆ ದುರ್ಗಾಹೋಮ, ಬೆಳಿಗ್ಗೆ ೧೦.೩೦ಕ್ಕೆ ಕುಂಕುಮಾರ್ಚನೆ ನಡೆಯಲಿದೆ. ಬಳಿಕ ಸುಮಂಗಲಿಯರಿಗೆ ಅರಿಶಿನ–ಕುಂಕುಮ ಕಾರ್ಯಕ್ರಮ ಆಯೋಜಿಸಲಾಗಿದೆ. ಉತ್ಸವದ ಸಮಾರೋಪದ ದಿನವಾದ ಅಕ್ಟೋಬರ್ ೨೧ರಂದು ಬೆಳಿಗ್ಗೆ ೭.೩೦ಕ್ಕೆ ಚಂಡಿಕಾ ಹೋಮ ನೆರವೇರಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಅನ್ನದಾನ ಸೇವೆಗೆ ಭಕ್ತರಿಗೆ ಅವಕಾಶ: ಉತ್ಸವದ ಸಂದರ್ಭದಲ್ಲಿ ಅನ್ನದಾನ ಸೇವೆ ಸಲ್ಲಿಸಲು ದೇವಸ್ಥಾನದ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಒಂದು ದಿನದ ಅನ್ನದಾನ ಸೇವೆಗೆ ₹೨೫,೦೦೦, ಮಧ್ಯಾಹ್ನದ ಅನ್ನಸಂತರ್ಪಣೆಗೆ ₹೧೦,೦೦೦ ಹಾಗೂ ರಾತ್ರಿ ಅನ್ನಸಂತರ್ಪಣೆಗೆ ₹೧೫,೦೦೦ ನಿಗದಿಪಡಿಸಲಾಗಿದೆ. ಭಕ್ತರು ಅಕ್ಕಿ, ತರಕಾರಿ, ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅಥವಾ ದೇಣಿಗೆ ಸಲ್ಲಿಸುವ ಮೂಲಕ ಅನ್ನದಾನ ಸೇವೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಇದನ್ನೂ ಓದಿ :




