ಭಟ್ಕಳ (Bhatkal) : ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಭಟ್ಕಳ ತಾಲೂಕಿನ ಬೇಂಗ್ರೆಯ ದೇವಾಡಿಗ ಸಭಾಭವನದಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್.ವೈದ್ಯ (Mankal Vaidya) ಅಧ್ಯಕ್ಷತೆಯಲ್ಲಿ ಜನಸ್ಪಂದನ (Janaspandana) ಸಭೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ತಮ್ಮ ಅಹವಾಲು ಸಲ್ಲಿಸಿದರು. ಕೆಲವರು ಸ್ಥಳದಲ್ಲೆ ಪರಿಹಾರ ಪಡೆದುಕೊಂಡರೆ, ಇನ್ನೂ ಹಲವರಿಗೆ ಶೀಘ್ರದಲ್ಲೆ ಸಮಸ್ಯೆ ಪರಿಹರಿಸುವ ಭರವಸೆ ಸಿಕ್ಕಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ಬೆಂಗ್ರೆ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಪಂಚಾಯತ್ ವ್ಯಾಪ್ತಿಯಲ್ಲಿ ಬಹು ವರ್ಷದ ಬೇಡಿಕೆಯಾದ ಕ್ಯಾಂಟೀನ್ ನಿಂದ ಸಣಬಾವಿ ತನಕ ರಸ್ತೆಯನ್ನು ಚುನಾವಣೆ ಪೂರ್ವದಲ್ಲಿ ಮಾಡಿಕೊಡುವ ಭರವಸೆಯನ್ನು ನೀಡಿದ್ದೆ. ಅದರಂತೆ ಈಗ ಅಂದಾಜು ೧ ಕೋಟಿ ರೂಪಾಯಿ ಮೊತ್ತದಲ್ಲಿ ರಸ್ತೆ ಕಾಮಗಾರಿ ಆರಂಭವಾಗಿದೆ. ಸ್ಥಳೀಯ ಪುರಾತನ ಶಕ್ತಿ ದೇವರಾದ ಯಕ್ಷಿಮನೆ ದೇವಸ್ಥಾನದ ಅಭಿವೃದ್ಧಿಗೂ ೧ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ ಎಂದರು.
ಇದನ್ನೂ ಓದಿ : Police raid/ ೭ ಜನರ ವಿರುದ್ಧ ಪ್ರಕರಣ ದಾಖಲು
ಬೇಂಗ್ರೆ ಗ್ರಾಪಂ ಸದಸ್ಯ ವಿಷ್ಣು ದೇವಡಿಗ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ (National Highway) ಜನರ ಬದುಕನ್ನು ಹೈರಾಣಾಗಿಸಿದೆ. ರಸ್ತೆಯ ಪಕ್ಕದಲ್ಲಿ ಚರಂಡಿ ಇಲ್ಲದೆ ನೀರು ಕೃಷಿ ಭೂಮಿಗೆ ನುಗ್ಗಿ ಬಂದ ಫಸಲು ನಾಶವಾಗಿದೆ. ಹೆದ್ದಾರಿ ಇಲಾಖೆ ಈ ಕುರಿತು ಸ್ಪಂದನೆ ನೀಡುತ್ತಿಲ್ಲ. ಅತಿಯಾದ ಮಳೆ ಸುರಿದರೆ ಹೆದ್ದಾರಿಯಲ್ಲಿ ನೀರು ನಿಲ್ಲುತ್ತದೆ. ಇದರಿಂದ ದ್ವಿಚಕ್ರ ಸವಾರರು ಮಾತ್ರವಲ್ಲದೆ ಎಲ್ಲಾ ವಾಹನ ಸವಾರರು ನೀರಿನಲ್ಲಿ ತೇಲಿ ವಾಹನ ಅಪಘಾತಗಳು ಹೆಚ್ಚುತ್ತಿವೆ. ಇದಕ್ಕೊಂದು ಅಂತ್ಯ ಹಾಡದಿದ್ದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದರು.
ಇದನ್ನೂ ಓದಿ : ಭಟ್ಕಳದಲ್ಲಿ ಬೈಕುಗಳ ಮುಖಾಮುಖಿ ಡಿಕ್ಕಿ
ಬೇಂಗ್ರೆಯ ಸಣ್ಣಹೊಳೆ, ದೊಡ್ಡಹೊಳೆಯಲ್ಲೂ ಹೂಳು ತುಂಬಿಕೊಂಡಿದೆ. ಇದರಿಂದ ಉಪ್ಪು ನೀರು ಸರಾಗವಾಗಿ ಹರಿದು ಬಂದು ಕೃಷಿ ಭೂಮಿ ಹಾಳಾಗುತ್ತಿದೆ. ಹೂಳು ತೆಗೆಯುವ ಕಾರ್ಯ ಹಾಗೂ ನದಿಗೆ ದಂಡು ಕಟ್ಟುವ ಕಾರ್ಯವಾಗಬೇಕು ಎಂದು ವಿಷ್ಣು ದೇವಾಡಿಗ ಸಚಿವರ ಬಳಿ ಗ್ರಾಮಸ್ಥರ ಪರವಾಗಿ ಅಹವಾಲು ಸಲ್ಲಿಸಿದರು. ಹಿರಿಯ ಮುಖಂಡ ವೆಂಕ್ಟಯ್ಯ ಭೈರುಮನೆ ಕೂಡ ಹೆದ್ದಾರಿಯ ಸಮಸ್ಯೆಯ ಕುರಿತು ಪ್ರಸ್ತಾಪಿಸಿದರು.
ಇದನ್ನೂ ಓದಿ : ಡಿ.೨೨ರಂದು ಭಟ್ಕಳದಲ್ಲಿ ಸಂಗೀತೋತ್ಸವ
ಜನಸ್ಪಂದನ (Janaspandana) ಸಭೆಯಲ್ಲಿ ನೆರೆದ ನೂರಾರು ಸಂಖ್ಯೆಯ ಗ್ರಾಮಸ್ಥರು ಸಾಮಾಜಿಕ ಕಲ್ಯಾಣ, ಉದ್ಯೋಗ, ಅನಾರೋಗ್ಯ, ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ, ರಸ್ತೆ ಕಾಮಗಾರಿ, ಶಾಲೆಗಳ ದುರಸ್ಥಿ ಅರಣ್ಯ ಅತಿಕ್ರಮಣ ಮುಂತಾದ ಸಮಸ್ಯೆಗಳ ಬಗ್ಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ತಕ್ಷಣ ಪರಿಹಾರ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ಇದನ್ನೂ ಓದಿ : ಭಗವದ್ಗೀತಾ ಕಂಠಪಾಠ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಸಭೆಯಲ್ಲಿ ಬೇಂಗ್ರೆ ಗ್ರಾ.ಪಂ ಅಧ್ಯಕ್ಷೆ ಪ್ರಮೀಳಾ ಡಿಕೋಸ್ತಾ, ಉಪಾಧ್ಯಕ್ಷ ಗೋವಿಂದ ನಾಯ್ಕ, ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಭಾಸ್ಕರ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಗ್ರಾಮಸ್ಥರೊಂದಿಗೆ ಸರತಿಯ ಸಾಲಿನಲ್ಲಿ ನಿಂತು ಸಚಿವ ಮಂಕಾಳ ವೈದ್ಯ ಭೋಜನ ಸೇವಿಸಿದರು.
ಇದನ್ನೂ ಓದಿ : ಶೈಕ್ಷಣಿಕ ಪ್ರವಾಸಕ್ಕೆ ಬಂದ ಶಾಲಾ ಬಸ್ ಪಲ್ಟಿ