ಭಟ್ಕಳ ಡೈರಿ ವರದಿ
ಭಟ್ಕಳ: ಮುರಿನಕಟ್ಟೆ ಪ್ರಕರಣದಲ್ಲಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸುವ ವಿಚಾರ ಇದೀಗ ಪಕ್ಷದೊಳಗಿನ ಸಮನ್ವಯ, ಮಂಡಲ ಅಧ್ಯಕ್ಷರ ಪಾತ್ರ ಹಾಗೂ ಹಿರಿಯ ನಾಯಕರ ನಡುವಿನ ವಿಶ್ವಾಸದ ಕುರಿತು ಚರ್ಚೆಗೆ ಕಾರಣವಾಗಿದೆ. ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಅಗತ್ಯ ಎಂಬ ಒಮ್ಮತದ ನಡುವೆಯೇ, ಪಕ್ಷದ ಜವಾಬ್ದಾರಿಯುತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ನಡೆಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಅವರ ಹೆಸರು ಮುರಿನಕಟ್ಟೆ ಪ್ರಕರಣದ ಚಾರ್ಜ್ ಶೀಟ್ ನಲ್ಲಿ ನಮದಾಗಿರುವುದನ್ನು ಖಂಡಿಸಿ , ಬಿಜೆಪಿ ಸುದ್ದಿಗೋಷ್ಠಿ ನಡೆಸಿತ್ತು. ಈ ಸುದ್ದಿಗೋಷ್ಠಿಯಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. ಆದರೆ ಪಕ್ಷದ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಅನುಪಸ್ಥಿತಿ ಇದೀಗ ಕಾರ್ಯಕರ್ತರಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ವಿಚಾರವಾಗಿ ಹನುಮಾನ್ ನಗರದ ಶ್ರೀನಿವಾಸ ನಾಯ್ಕ ಅವರು ಪಕ್ಷದೊಳಗಿನ ಒಗ್ಗಟ್ಟು ಮತ್ತು ಸಮನ್ವಯಕ್ಕೆ ಒತ್ತು ನೀಡಿ ಕಾರ್ಯಕರ್ತರು, ಮಾಧ್ಯಮದವರು ಇರುವ ವಾಟ್ಸಪ್ ಗ್ರೂಪ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಆಸರಕೇರಿಯ ಈಶ್ವರ ನಾಯ್ಕ, ಪೊಲೀಸ್ ಇಲಾಖೆಯ ಕ್ರಮಗಳ ವಿರುದ್ಧ ಮಂಡಲ ಅಧ್ಯಕ್ಷರು ಈ ಹಿಂದೆ ಸಮರ್ಪಕವಾಗಿ ಧ್ವನಿ ಎತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಪಕ್ಷದ ಮಂಡಲ ಅಧ್ಯಕ್ಷರು ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿ ಹೊಂದಿರುವ ವ್ಯಕ್ತಿಯಾಗಿದ್ದು, ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದು ಅಗತ್ಯವೆಂದು ಅವರು ಪ್ರತಿಪಾದಿಸಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿರುವುದು ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವ ಪ್ರಯತ್ನವಾಗಿದ್ದರೂ, ಅದಕ್ಕೆ ಮಂಡಲ ಅಧ್ಯಕ್ಷರಿಗೆ ಮಾಹಿತಿ ಇರಲಿಲ್ಲ ಎಂಬ ಮಾತು ಕೇಳಿಬಂದಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಮಂಡಲ ಅಧ್ಯಕ್ಷರ ಮೌನದ ಬಗ್ಗೆ ಪ್ರಶ್ನೆ:
ಇದಕ್ಕೆ ಪ್ರತಿಕ್ರಿಯಿಸಿರುವ ಈಶ್ವರ ನಾಯ್ಕ, ‘ಪ್ರಕರಣದಲ್ಲಿ ತಮ್ಮವರ ಹೆಸರುಗಳನ್ನು ಸೇರಿಸಲಾಗಿದೆ, ಆದರೆ ಮುಸ್ಲಿಂ ಮುಖಂಡರ ಹೆಸರುಗಳನ್ನು ಸೇರಿಸಿಲ್ಲ’ ಎಂಬ ವಿಚಾರ ತಿಳಿದಿದ್ದರೂ ಪೊಲೀಸ್ ಇಲಾಖೆಯ ವಿರುದ್ಧ ಮಂಡಲ ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಲು ಮುಂದಾಗದಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಗೋವಿಂದ ನಾಯ್ಕ ಅವರ ವಿರುದ್ಧ ಪ್ರಕರಣ ದಾಖಲಾದ ಸಂದರ್ಭದಲ್ಲಿಯೂ ಮಂಡಲ ಅಧ್ಯಕ್ಷರು ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಪೊಲೀಸ್ ಇಲಾಖೆಯ ಕ್ರಮಗಳ ಕುರಿತು ಪ್ರಶ್ನಿಸುವಾಗ ಎಲ್ಲರ ವಿಚಾರದಲ್ಲಿಯೂ ಸಮಾನವಾಗಿ ಧ್ವನಿ ಎತ್ತಬೇಕೆಂಬುದು ಅವರ ನಿಲುವಾಗಿದೆ.
ಮಂಡಲ ಅಧ್ಯಕ್ಷರು ಸೂಕ್ತ ಸಮಯದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸಿದ್ದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಯಾರದ್ದೇ ಒತ್ತಡಕ್ಕೆ ಒಳಗಾಗದೆ, ಎಲ್ಲ ಕಾರ್ಯಕರ್ತರ ಪರವಾಗಿಯೂ ಧ್ವನಿ ಎತ್ತುವಂತೆ ಅವರು ಆಗ್ರಹಿಸಿದ್ದಾರೆ.
ಈ ಎರಡೂ ಅಭಿಪ್ರಾಯಗಳನ್ನು ಗಮನಿಸಿದರೆ, ಕಾರ್ಯಕರ್ತರ ಪರವಾಗಿ ಹೋರಾಟ ನಡೆಸಬೇಕೆಂಬ ವಿಚಾರದಲ್ಲಿ ಒಮ್ಮತವಿದ್ದರೂ, ಅದನ್ನು ಹೇಗೆ ಮುನ್ನಡೆಸಬೇಕು ಮತ್ತು ಮಂಡಲ ಅಧ್ಯಕ್ಷರ ಪಾತ್ರ ಹೇಗಿರಬೇಕು ಎಂಬುದರಲ್ಲಿ ಭಿನ್ನಾಭಿಪ್ರಾಯವಿರುವುದು ಸ್ಪಷ್ಟವಾಗುತ್ತದೆ.
ಒಂದು ಕಡೆ, ಪಕ್ಷದ ನಾಯಕರು ಮತ್ತು ಮಂಡಲ ಅಧ್ಯಕ್ಷರ ನಡುವೆ ಸಮನ್ವಯ ಇರಬೇಕು ಎಂಬ ಒತ್ತಾಯವಿದೆ. ಮತ್ತೊಂದು ಕಡೆ, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾದಾಗ ನಾಯಕತ್ವವು ತಕ್ಷಣ ಸ್ಪಂದಿಸಬೇಕು ಮತ್ತು ಪೊಲೀಸ್ ಇಲಾಖೆಯ ಕ್ರಮಗಳ ಬಗ್ಗೆ ಪ್ರಶ್ನಿಸಬೇಕು ಎಂಬ ಆಗ್ರಹವಿದೆ.
ಇದನ್ನೂ ಓದಿ:
ಮುರಿನಕಟ್ಟೆ ಪ್ರಕರಣದ ಆರೋಪಪಟ್ಟಿಗೆ ಬಿಜೆಪಿ ಆಕ್ಷೇಪ; ೧೭ ಕಾರ್ಯಕರ್ತರಿಗೆ ಕಾನೂನು ನೆರವಿನ ಭರವಸೆ




