ಭಟ್ಕಳ ಡೈರಿ ವರದಿ

ಭಟ್ಕಳ: ಮುರಿನಕಟ್ಟೆ ಧ್ವಂಸ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪಪಟ್ಟಿಯಲ್ಲಿ ಬಿಜೆಪಿ ಮುಖಂಡ ಶ್ರೀಕಾಂತ ನಾಯ್ಕ ಅವರ ಹೆಸರು ಸೇರಿಸಿರುವುದನ್ನು ಖಂಡಿಸಿ, ಭಟ್ಕಳದ ಬಿಜೆಪಿ ಮುಖಂಡರು ಗುರುವಾರ ಆಸರಕೇರಿಯ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಮುರಿನಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ವ್ಯವಸ್ಥೆಯ ಉಪಸ್ಥಿತಿ ಇತ್ತು. ಆದರೆ ನಿರ್ಮಾಣವಾದ ದಿನವೇ ಅದನ್ನು ಧ್ವಂಸಗೊಳಿಸಲಾಗಿದೆ. ಧಾರ್ಮಿಕ ಅಸ್ಮಿತೆಗೆ ಧಕ್ಕೆಯಾದಾಗ ಪ್ರತಿಭಟನೆ ನಡೆಸುವುದು ಹಕ್ಕು ಎಂದು ಹೇಳಿದ ಅವರು, ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಕೆಲವರ ಹೆಸರುಗಳನ್ನು ಕೈಬಿಟ್ಟು ಶ್ರೀಕಾಂತ ನಾಯ್ಕ ಸೇರಿದಂತೆ ೧೭ ಕಾರ್ಯಕರ್ತರ ಹೆಸರುಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಿರುವುದು ಪ್ರಶ್ನಾರ್ಹವಾಗಿದೆ ಎಂದರು.

ಮುರಿನಕಟ್ಟೆ ಧ್ವಂಸ ಪ್ರಕರಣದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದ್ದ ಇಮ್ರಾನ್ ಲಂಕಾ ಅವರ ಹೆಸರನ್ನು ಆರೋಪಪಟ್ಟಿಯಿಂದ ಕೈಬಿಡಲಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಬೇಕು. ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನೀಡಿರುವ ಹೇಳಿಕೆಗಳು ಮತ್ತು ಆರೋಪಪಟ್ಟಿಯಲ್ಲಿನ ವಿವರಗಳ ನಡುವೆ ಗೊಂದಲವಿದೆ. ಪ್ರಕರಣದಲ್ಲಿ ನ್ಯಾಯಸಮ್ಮತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಮಂಕಾಳ ವೈದ್ಯರ ಒತ್ತಡ ಆರೋಪ:

ಸ್ಥಳೀಯ ಶಾಸಕ ಮಂಕಾಳ ವೈದ್ಯ ಅವರ ಒತ್ತಡದ ಹಿನ್ನೆಲೆಯಲ್ಲಿ ಹಿಂದೂ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂಬ ಆರೋಪವನ್ನೂ ಗೋವಿಂದ ನಾಯ್ಕ ಮಾಡಿದರು.

ಪೊಲೀಸ್ ಇಲಾಖೆಯ ನಡೆ ಖಂಡಿಸಿದ ಶಿವಾನಂದ ನಾಯ್ಕ: ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಮುರಿನಕಟ್ಟೆಯನ್ನು ಜನರ ನಿರೀಕ್ಷೆಗೆ ತಕ್ಕಂತೆ ಮರುನಿರ್ಮಿಸುವ ಅಗತ್ಯವಿದೆ. ಈ ಕುರಿತು ಸಂಸದರು ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆದಿದ್ದು, ಕಟ್ಟೆಯ ನಿರ್ಮಾಣವನ್ನು ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಬೇಕು ಎಂದರು.

ಪ್ರಕರಣದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಂಡಿದ್ದರೂ, ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಮುಸ್ಲಿಂ ಸಮುದಾಯದ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಅವರು ಆರೋಪಿಸಿದರು. ಪೊಲೀಸ್ ಇಲಾಖೆ ಒಂದು ಸಮುದಾಯದ ಪರವಾಗಿ ವರ್ತಿಸುತ್ತಿದೆ ಎಂಬುದು ತಮ್ಮ ಪಕ್ಷದ ಆಕ್ಷೇಪವಾಗಿದೆ. ಪೊಲೀಸ್ ಇಲಾಖೆ ಇದೇ ರೀತಿಯ ಧೋರಣೆ ಮುಂದುವರಿಸಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಿಜೆಪಿ ಹಿಂದೂ ಸಮಾಜದೊಂದಿಗೆ ನಿಲ್ಲಲಿದೆ ಎಂದೂ ಹೇಳಿದರು.

ಉಚಿತ ಕಾನೂನು ನೆರವು: ಸುರೇಶ ಕೋಣೆಮನೆ

ಬಿಜೆಪಿ ಜಿಲ್ಲಾ ಕಾನೂನು ಪ್ರಕೋಷ್ಠದ ಸುರೇಶ ಕೋಣೆಮನೆ ಮಾತನಾಡಿ, ಮುರಿನಕಟ್ಟೆ ಪ್ರಕರಣದಲ್ಲಿ ಆರೋಪಪಟ್ಟಿಯಲ್ಲಿ ಹೆಸರು ಸೇರಿಸಲಾದ ೧೭ ಕಾರ್ಯಕರ್ತರಿಗೆ ಉಚಿತ ಕಾನೂನು ನೆರವು ನೀಡಲಾಗುವುದು. ಜಾಮೀನು ಸೇರಿದಂತೆ ಮುಂದಿನ ಕಾನೂನು ಪ್ರಕ್ರಿಯೆಗಳಲ್ಲಿ ಪಕ್ಷದ ಪರವಾಗಿ ವಕೀಲರು ಸಹಕರಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀಕಾಂತ ನಾಯ್ಕ, ಸುಬ್ರಾಯ ದೇವಾಡಿಗ, ಮುಖಂಡರಾದ ರವಿ ನಾಯ್ಕ ಜಾಲಿ, ಭಾಸ್ಕರ ದೈಮನೆ, ಮೋಹನ ನಾಯ್ಕ ಸೇರಿದಂತೆ ಹಲವು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ :

ಭಟ್ಕಳ: ಎಕ್ಕೆಗೋಳಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಅ.೧೧ರಿಂದ ಶರನ್ನವರಾತ್ರಿ ಮಹೋತ್ಸವ

ಭಟ್ಕಳದಲ್ಲಿ ಎಂಡಿಎಂಎ ಮಾರಾಟಕ್ಕೆ ಯತ್ನ: ಯುವಕನ ಬಂಧನ, ಬುಲೆಟ್ ಜಪ್ತಿ