ಭಟ್ಕಳ (Bhatkal) : ದೈವ ಸಂಕಲ್ಪ, ಸಮಾಜ ಬಾಂಧವರು, ಗ್ರಾಮಸ್ಥರರು, ಊರಿನ ಎಲ್ಲಾ ಜನರ ಸಹಕಾರದಿಂದ ಪಟ್ಟಣದ ಮಣ್ಕುಳಿಯಲ್ಲಿ ನೂತನ ವಾಸ್ತು ಶಾಸ್ತç ಪ್ರಕಾರ, ದ್ರಾವಿಡ ಶೈಲಿಯ ಶಿಲ್ಪಕಲೆ ಹೋಲುವ ಶ್ರೀ ಲಕ್ಷ್ಮೀ ನಾರಾಯಣ ಹಾಗೂ ಹನುಮಂತ ದೇವರ  ನೂತನ ಶಿಲಾಮಯ ದೇವಸ್ಥಾನ (rock temple) ಮೇ ೭ರಿಂದ ೧೧ರವರೆಗೆ ಪುನರ್‌ಪ್ರತಿಷ್ಠೆಗೆ (Punar Pratistha programme) ಸಿದ್ದವಾಗಿದೆ.
ರಾಷ್ಟ್ರೀಯ ಹೆದ್ದಾರಿ (National Highway) ಅಗಲಿಕರಣದ ಹಿನ್ನಲೆಯಲ್ಲಿ  ದೇವಸ್ಥಾನದ ಸ್ಥಳವನ್ನು ಬಿಟ್ಟು ಕೊಡಲೇಬೇಕಾದ ಪ್ರಮೇಯ ಒದಗಿ ಬಂತು. ಎರಡೂ ದೇವಸ್ಥಾನಗಳನ್ನು ಸ್ಥಳಾಂತರಿಸುವ ಪರಿಸ್ಥಿತಿ ಎದುರಾಯಿತು. ಇರುವ ಸ್ಥಳದಲ್ಲೇ ನೂತನ ದೇವಸ್ಥಾನವನ್ನು ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಒಳ ಭಾಗದಲ್ಲಿರುವ ಎರಡೂ ದೇವರ ಗರ್ಭಗುಡಿಯನ್ನು ಶಿಲೆಯಿಂದ, ಮೇಲ್ಛಾವಣಿಯನ್ನು ಉತ್ತಮ ಗುಣಮಟ್ಟದ ಕಟ್ಟಿಗೆಯಿಂದ ನಿರ್ಮಿಸಿ ಅದರ ಮೇಲೆ ತಾಮ್ರದ ಹೊದಿಕೆಯನ್ನು ಹೊದೆಸಿ ಅತ್ಯಂತ ಸುಂದರವಾಗಿ ಕಾಣುವಂತೆ ಮಾಡಲಾಗಿದೆ.
ಅಗ್ರ ಸಭಾದ ಒಳಗಡೆಗೆ ಪ್ರವೇಶಿಸಿದಾಗ ಗರ್ಭಗೃಹದ ಕಳಸಗಳು ಕಾಣುವಂತೆ ಸುಮಾರು ೩೦ ಅಡಿ ಎತ್ತರದ ಕಾಂಕ್ರೀಟ್ ಕಟ್ಟಡವನ್ನು ನಿರ್ಮಿಸಿ ಅದರ ಮೇಲ್ಗಡೆ ನಾಲ್ಕು ಮಾಡಿನ ಛಾವಣಿ ಮಾಡಿ ಮಂಗಳೂರು ಹಂಚಿನ ಹೊದಿಕೆ ಮಾಡಲಾಗಿದೆ. ದೇವಸ್ಥಾನದ ಮುಖ ಮಂಟಪವು ಸಂಪೂರ್ಣವಾಗಿ ಶಿಲಾಮಯವಾಗಿದೆ. ಶಿಲ್ಪಿಗಳು ಅತ್ಯಂತ ನೈಪುಣ್ಯತೆಯಿಂದ ನಾಜೂಕಿನ ಕುಸುರಿ ಕಲೆಯನ್ನು ಕೆತ್ತಲಾಗಿದೆ. ಆಧುನಿಕ ಮತ್ತು ಪುರಾತನ ವಾಸ್ತುಶಿಲ್ಪಗಳ (Modern and ancient architecture) ಸಮ್ಮಿಳಿತಗೊಂಡ ಈ ದೇವಸ್ಥಾನದ ಕಟ್ಟಡವು ಬಹು ಆಕರ್ಷಣೀಯವಾಗಿ ಎಲ್ಲರನ್ನೂ ಕೈಬೀಸಿ ಕರೆಯುವಂತಿದೆ.
ದೇವಸ್ಥಾನದ ಎದುರು ಭಾಗದಲ್ಲಿ ಸರಿ ಸುಮಾರು ೪೧ ಅಡಿ ಎತ್ತರದ ಹನುಮಂತನ ಸಿಮೆಂಟ್ ಶಿಲ್ಪವನ್ನು ನಿರ್ಮಿಸಲಾಗಿದೆ. ಅಭಯ ಹಸ್ತದಿಂದ ಕರುಣಿಸುವ (ಆಶೀರ್ವದಿಸುವ) ಭಂಗಿಯಲ್ಲಿರುವ ಈ ವಿಗ್ರಹವು ಮಂಗಳೂರಿನಿಂದ (Mangaluru) ಕಾರವಾರದ (Karwar) ಕರಾವಳಿ ಭಾಗದ (coastal area) ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರ-ಪ್ರಥಮವಾಗಿ ನಿರ್ಮಾಣಗೊಂಡ ಬೃಹತ್ ಹನುಮಂತನ ಮೂರ್ತಿಯಾಗಿದೆ. ಇಂತಹ ವಿಶೇಷತೆಯಿಂದ ಪುನರ್ ನಿರ್ಮಾಣಗೊಂಡ ಈ ಹನುಮಂತ ದೇವಸ್ಥಾನದಲ್ಲಿ ನವಗ್ರಹ, ನಾಗ ಚೌಡಿ ಮತ್ತು ಪರಿವಾರ ದೇವತೆಗಳ ಸಾನ್ನಿಧ್ಯವೂ ಇದೆ.
ಮೇ ೭ ಮತ್ತು ೮ ರಂದು ಶ್ರೀ ಕ್ಷೇತ್ರ ಗೋಕರ್ಣದ (Gokarna) ವೇದಮೂರ್ತಿ ಸಾಂಬ ಹರೇಗಂಗೆ ಇವರ ಮುಂದಾಳತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ ೯ರಂದು ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಜೀಯವರ (Sadyojat Shankarashram Swamiji) ದಿವ್ಯಕರಕಮಲಗಳಿಂದ ಮಣ್ಕುಳಿ ಕುಬೇರ ಸದೃಶ ಶ್ರೀ ಹನುಮಂತ (Hanumant) ದೇವರ ಹಾಗೂ ಶ್ರೀ ಲಕ್ಷ್ಮೀ ನಾರಾಯಣ (Laxmi Narayan) ದೇವರ ಪ್ರಾಣಪ್ರತಿಷ್ಠೆ (Punar Pratistha programme) ನಡೆಯಲಿದೆ. ಬೆಳಿಗ್ಗೆ ೧೧ ಗಂಟೆಗೆ ಸಚಿವ ಮಂಕಾಳ ವೈದ್ಯ (Mankal Vaidya) ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ, ಚಕ್ರವರ್ತಿ ಸೂಲಿಬೆಲೆ (Chakravarty Sulibele) ಅವರಿಂದ ದೇವಾಲಯ ಮತ್ತು ನೈತಿಕ ಮೌಲ್ಯಗಳು, ಯುವಜನತೆಯ ಜವಾಬ್ದಾರಿ ಎನ್ನುವ ವಿಷಯದಲ್ಲಿ ಉಪನ್ಯಾಸ ಇರಲಿದೆ. ಅಂದು ಸಂಜೆ ೨.೩೦ಕ್ಕೆ ಶ್ರೀ ರಾಘವೇಶ್ವರ ಸ್ವಾಮೀಜಿಯವರ (Raghaveshwar Swamiji) ಆಶೀರ್ವಚನ ನಡೆಯಲಿದೆ. ಮೇ ೧೧ರಂದು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿಯವರ (Vishwapriya Theertha Swamiji) ಅಮೃತ ಹಸ್ತದಿಂದ ಬ್ರಹ್ಮಕಲಶೋತ್ಸವ (Brahmakalashotsava) ನಡೆಯಲಿದೆ. ಪ್ರತಿದಿನ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಆರಂಭದಲ್ಲಿ ೧.೫ ಕೋಟಿ ರೂ. ಖರ್ಚು ಎಂದು ಅಂದಾಜಿಸಿದ್ದು ಬಳಿಕ ಇದು ೩.೫ಕೋಟಿಗೆ ತಲುಪಿದೆ. ಉಸ್ತುವಾರಿ ಸಚಿವರು ಸರ್ಕಾರದಿಂದ ೫೦ ಲಕ್ಷ ರೂ.ಗಳನ್ನು ಒದಗಿಸಿದ್ದು ಮಾತ್ರವಲ್ಲದೆ ಅವರ ಪುತ್ರಿ ಬೀನಾ ವೈದ್ಯ ಅವರು ದೊಡ್ಡ ಮೊತ್ತದ ದೇಣಿಗೆ ನೀಡಿ ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಜಿರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಶ ಎಂ ಶೆಟ್ಟಿ ತಿಳಿಸಿದರು. ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ನಾರಾಯಣ ಎಂ ಶೆಟ್ಟಿ, ಕಾರ್ಯದರ್ಶಿ ಉದಯ ವಿ. ಶೆಟ್ಟಿ, ಸದಸ್ಯರಾದ  ಶಂಕರ ಶೆಟ್ಟಿ, ಎಂ.ಆರ್. ಮುರ್ಡೇಶ್ವರ,  ಗಜಾನನ ಶೆಟ್ಟಿ, ಗಜಾನನ ವಿ. ಶೆಟ್ಟಿ ತೆರ್ನಮಕ್ಕಿ, ರಾಮದಾಸ ಶೆಟ್ಟಿ, ಮಂಜುನಾಥ ಶೆಟ್ಟಿ, ಪೂರ್ಣಿಮಾ ಶೆಟ್ಟಿ, ಮನೋರಮಾ ಮುರ್ಡೇಶ್ವರ, ಕೃಷ್ಣಮೂರ್ತಿ ಶೆಟ್ಟಿ ಇದ್ದರು.  ಸದಸ್ಯರಾದ ಪ್ರಕಾಶ ಶಿರಾಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ ಶೆಟ್ಟಿ ವಂದಿಸಿದರು.