ಭಟ್ಕಳ: ತಾಲೂಕಿನ ಬೆಣಂದೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟಾಟಾ ಏಸ್ ವಾಹನ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ನಾಲ್ವರ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ವಿಡಿಯೋ ನೋಡಿ:  https://fb.watch/qdz5B8Or1I/?mibextid=Nif5oz

ಬೆಳಕೆ ಜನತಾ ಕಾಲೋನಿ ನಿವಾಸಿ ಮಂಜಮ್ಮ ಮಾಸ್ತಿ ಮೊಗೇರ(40) ಹಾಗೂ ಬೆಳಕೆ ಗರಡಿಹಿತ್ಲು ನಿವಾಸಿ ವೆಂಕಟ್ರಮಣ ಸುಬ್ಬಯ್ಯ ನಾಯ್ಕ(52) ಗಂಭೀರವಾಗಿ ಗಾಯಗೊಂಡವರು. ಆಟೋ ಚಾಲಕ ಪಾಂಡು ನಾಯ್ಕ ಹಾಗೂ ಮಂಜುನಾಥ ವೆಂಕಟೇಶ ಭಂಡಾರಿ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಟಾಟಾ ಏಸ್ ವಾಹನ ಚಾಲಕ ಗೋಳಿಮರ ಕ್ರಾಸ್ ಕಡೆಯಿಂದ ಭಟ್ಕಳಕ್ಕೆ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ. ಬೆಣಂದೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುತ್ತಿದ್ದಂತೆ ಟಾಟಾ ಏಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವೆ ಇರುವ ಡಿವೈಡರ್ ದಾಟಿ ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ರಿಕ್ಷಾ ಸ್ಥಳದಲ್ಲೇ ಪಲ್ಟಿಯಾದ ಪರಿಣಾಮ ರಿಕ್ಷಾದಲ್ಲಿದ್ದ ಮಂಜಮ್ಮಾ ಮಾಸ್ತಿ ಮೊಗೇರ ಹಾಗೂ ವೆಂಕಟ್ರಮಣ ಸುಬ್ಬಯ್ಯ ನಾಯ್ಕ ಅವರ ತಲೆ ಹಾಗೂ ಕೈಗೆ ಗಂಭೀರವಾಗಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ.

ಆಟೋ ಚಾಲಕ ಹಾಗೂ ಇನ್ನೋರ್ವ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದು ಟಾಟಾ ಏಸ್ ವಾಹನ ಚಾಲಕನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಜಾಲಿ ಪಟ್ಟಣ ಪಂಚಾಯತ್ ಕಚೇರಿಗೆ ಸಾರ್ವಜನಿಕರ ಮುತ್ತಿಗೆ – ಸ್ಥಳಕ್ಕೆ ತಹಸೀಲ್ದಾರ ಆಗಮನಕ್ಕೆ ಪಟ್ಟು ಹಿಡಿದ ಜನ