- ಪ್ರವಾಸ ಕಥನ :
ಉಮೇಶ ಮುಂಡಳ್ಳಿ, ಭಟ್ಕಳ/9945840552
ಕರ್ನಾಟಕದ ಪ್ರಸಿದ್ಧ ದ್ವೀಪವಾದ ನಮ್ಮೂರಿನ ನೇತ್ರಾಣಿ ದ್ವೀಪಯಾನ ಮಾಡುವ ನನ್ನ ಮಕ್ಕಳು ಮತ್ತು ಮಡದಿಯ ಆಸೆಯಂತೆ ಭೇಟಿನೀಡುವ ಅವಕಾಶ ಫೆ.24ರಂದು ಒದಗಿ ಬಂತು.
ನಸುಕಿನಲ್ಲೆ ಎದ್ದು, ನಿತ್ಯ ಕರ್ಮ ಮುಗಿಸಿ ಅಳ್ವೆಕೋಡಿ ಬಂದರು ತಲುಪಿದ್ದು, ಬೆಳಿಗ್ಗೆ ೬ ಗಂಟೆಗೆ. ಅದಾಗಲೇ ನೂರಾರು ಜನರು ನಮಗಿಂತ ಮುಂಚೆಯೇ ಅಲ್ಲಿ ಸಿದ್ದವಾಗಿದ್ದು ಕಂಡು ಅಚ್ಚರಿ ಜೊತೆ ಖುಷಿಕೂಡ.
ಪಯಣಕ್ಕೂ ಮೊದಲು ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದರ್ಶನ ಮಾಡಿ ಮನದಲ್ಲೇ ತಾಯಿಯ ಅನುಗ್ರಹ ಪ್ರಾರ್ಥನೆ ಮಾಡಿಕೊಂಡೆವು. ಶುದ್ಧ ಸಂಕಲ್ಪಕ್ಕೆ ತಾಯಿ ಎಂದಿಗೂ ಒಲಿಯದೇ ಇರಲಾರಳು. ಇದು ನನ್ನ ಅನುಭವ ಕೂಡ.
ಅಂತೆಯೇ ಆಗಲೇ ಸಾವಿರಕ್ಕೂ ಮಿಗಿಲೆಂಬಂತೆ ಜನರು ಸಿದ್ಧಗೊಂಡ ಬೋಟನ್ನು ಹತ್ತುತ್ತಿದ್ದರು. ಸಂಕಲ್ಪದಂತೆ ಆಗ ನಾವು ಹತ್ತಿದ್ದು ಶ್ರೀ ಮತ್ಸ್ಯಶ್ರೀ ಬೋಟ್.
ಈ ಸಾಹಸ ಪಯಣದಲ್ಲಿ ಅತ್ಯಂತ ಕಿರಿಯ ಪಯಣಿಗ ನನ್ನ ಮಗ ಉತ್ಥಾನ. ಅವನ ಪಾಲಿಗೆ ನೇತ್ರಾಣಿ ಎಂಬುದು ಪುನಿತಣ್ಣನ (ಪುನಿತ್ ರಾಜಕುಮಾರ) ದ್ವೀಪ. ಹೌದು ಸದಾ ಪುನಿತಣ್ಣ, ಅವನ ಹಾಡು ಡಾನ್ಸ್, ಮಾತು ದಿನಕ್ಕೆ ಒಮ್ಮೆಯಾದರೂ ಇರಬೇಕು. ಅವರು ನೇತ್ರಾಣಿ ಭೇಟಿ ನೀಡಿದ ಗಂಧದ ಗುಡಿ ಸಿನೆಮಾ ನೋಡಿದಾಗಿನಿಂದ ನೇತ್ರಾಣಿ ಕೂಡ ಪುನಿತಣ್ಣನ ದ್ವೀಪವಾಯಿತು. ಈ ಅಣ್ಣನ ದ್ವೀಪ ನೋಡುವ ಬಯಕೆಯೂ ಹೆಚ್ವುತ್ತಾ ಹೋಯಿತು.
ಸಮುದ್ರ ಪಯಣದ ಉದ್ದಕ್ಕೂ ಬೋಟ್ ಹತ್ತುವಾಗ ಇಳಿಯುವಾಗ ದೊಡ್ಡ ಬೋಟ್ ನಿಂದ ಚಿಕ್ಕ ಡಿಂಗಿಯಲ್ಲಿ ಇಳಿಯುವಾಗ, ಕಡಿದಾದ ಆತಂಕದ ದ್ವೀಪ ಬೆಟ್ಟ ದಾರಿ ಸ್ವಲ್ಪ ಎಚ್ಚರ ತಪ್ಪಿದರೂ ಸಮುದ್ರಕ್ಕೆ ಬಿದ್ದೆವು ಎನ್ನುವ ಸಣ್ಣ ಭಯ. ಈ ಬೆಟ್ಟವನ್ನು ಹತ್ತುವಾಗ ಇಳಿಯುವಾಗ ಶ್ರೀರಕ್ಷೆಯಾದವರು ವಿಠ್ಠಲಣ್ಣ ( ವಿಠ್ಠಲ ಮೊಗೇರ ಅಳ್ವೆಕೋಡಿ). ಈ ಪಯಣದಲ್ಲಿ ಎಲ್ಲರಿಗೂ ಎಲ್ಲರೂ ಸಹಾಯಮಾಡುತ್ತಾರೆ ಇದು ಈ ಕ್ಷೇತ್ರದ ದ್ವೀಪದ ಆರಾಧ್ಯ ದ್ವೈವ ನೇತ್ರಾಣಿ ಜಟಗೇಶ್ವರ ಮಹಿಮೆ ಎನ್ನುತ್ತಾರೆ ಆಸ್ತಿಕ ಭಕ್ತರು.
ಅಳ್ವೆಕೋಡಿ ಬಂದರಿನಿಂದ ಸುಮಾರು 90 ನಿಮಿಷ ಸಮುದ್ರ ಪಯಣ ಬೇಕಾಯ್ತು ಕನಸಿನ ದ್ವೀಪ ತಲುಪಲು. ಸಮುದ್ರದಲ್ಲಿ ಹತ್ತು ನಿಮಿಷ ಕ್ರಮಿಸಿ ಸುತ್ತಲೂ ಕಣ್ಣಡಿಸಿದ ಉತ್ಥಾನ, ನಿನಾದ ಕೇಳಿದ್ದು… ಎಲ್ಲಿ ಮರೆಯಾದವು ಪಪ್ಪ ಊರು ಮನೆಗಳು, ದೇವಸ್ಥಾನ. ಹೌದು ನಿಜ.. ಎಲ್ಲಿ ನೋಡಿದರೂ ಜನರಿಲ್ಲದ ಬರಿ ನೀರಿನ ಊರು ಮಾತ್ರ. ನೀರೇ ನೀರು. ನನ್ನನ್ನೇ ಗೊಂದಲಕ್ಕಿಳಿಸುವ ಅನೇಕ ಪ್ರಶ್ನೆಗಳು ಉತ್ಥಾನನ ಬಾಯಲ್ಲಿ. ಈ ರಾಶಿ ರಾಶಿ ನೀರು ಸುರಿದವರು ಯಾರು? ಎಲ್ಲಿಂದ ಬಂತು ಇಷ್ಟು ನೀರು? ಒಂದೊ ಎರಡೊ… ನಡುನಡುವೆ ಪುನಿತಣ್ಣನ ನೆನಪು.
ಬೋಟ್ ನಲ್ಲಿ ಬರುವ ವೈಯರಲೆಸ್ ಮಾತುಗಳು. ಇನ್ನೊಂದು ಬೋಟ್ ನಲ್ಲಿ ಇರುವವರ ಜೊತೆ ಸಾಮೂಹಿಕ ಸಂವಹನ ಸಂಭಾಷಣೆ ಒಂದು ರೀತಿ ರೇಡಿಯೋ ನೆನಪಿಸುತ್ತಿತ್ತು. ಅಂತೂ ಸುಮಾರು 10-12 ಬೋಟ್ ಗಳಿಂದ ಬಂದವರನ್ನು ಸಣ್ಣ ದೋಣಿಗೆ ಇಳಿಸುವ ಕಡಲ ಮಕ್ಕಳ ಕಾಳಜಿ ದೈವದ ಅಪ್ಪುಗೆಯಂತಿತ್ತು.
ಹರಸಾಹಸ ಪಟ್ಟು ದಾರಿ ಹುಡುಕುತ್ತಾ, ದಾರಿ ಮಾಡಿಕೊಳ್ಳುತ್ತಾ, ಮುಂದಿನವರ ಹಿಂದೆ ಹಿಂದೆಯೇ ನಡೆಯುತ್ತಾ ಹೊರಟೆವು. ನೇತ್ರಾಣಿ ದ್ವೀಪದ ಬೆಟ್ಟದ ತುದಿಗೆ ತಲುಪಿದ ನಮಗೆ ಕಂಡದ್ದು ಇಲ್ಲಿನ ಪರಮೋಚ್ಚ ಶಕ್ತಿ ಹಾಗೂ ಕಡಲಮಕ್ಕಳ ಒಡಲು ತುಂಬುವ ಕಾಯುವ ಆರಾಧ್ಯ ದೈವ ನೇತ್ರಾಣಿ ಜಟಗೇಶ್ವರ ಹಾಗೂ ಪರಿವಾರ ದೇವರುಗಳು. ಪ್ರತಿವರ್ಷಕ್ಕೊಮ್ಮೆ ಈ ದೇವರಿಗೆ ಪೂಜೆ ಹರಕೆ ಸಲ್ಲಿಸುವುದು ನೂರಾರು ವರ್ಷದಿಂದ ನಡೆದುಕೊಂಡ ಬಂದ ಮರೆಯಲಾಗದ ಸಂಪ್ರದಾಯ, ಸಂಸ್ಕಾರ. ಒಂದು ವಿಶೇಷ ಎಂದರೆ ಇಲ್ಲಿನ ದೇವರಿಗೆ ಕುರಿ ಕೋಳಿಗಳನ್ನು ಬಲಿ ಕೊಡದೆ ದೇವರ ಹೆಸರಲ್ಲಿ ಅಲ್ಲಿ ಬಿಟ್ಟು ಬರುವ ಜಗ ಒಪ್ಪುವ ಆಚರಣೆಯೂ ಇದೆ. ಎಲ್ಲ ಬೋಟುಗಳಿಂದ ತಂದಂತಹ ಕುರಿ ಕೋಳಿಗಳನ್ನು ಅರ್ಚಕರು ದೇವರಿಗೆ ಪೂಜೆ ಮಾಡಿದ ನಂತರ ಬೆಟ್ಟದಲ್ಲಿ ಹಾರಿಸಿ ಬಿಡಲಾಯಿತು.
ಅಂತೂ ಎರಡು ಗಂಟೆಗಳ ಪೂಜಾ ಕೈಂಕರ್ಯದ ನಂತರ ಮತ್ತೆ ವಾಪಸ್ ಪಯಣ. ಹತ್ತುವಾಗ ಇರುವ ಅತಂಕಕ್ಕಿಂತ ಇಳಿಯುವಾಗ ಇನ್ನೂ ಹೆಚ್ಚೇ ಅನ್ನುವಂತಿತ್ತು. ಈ ಮರುಪಯಣದಲ್ಲಿ ಅತ್ಯಂತ ಮನಕಲಕ್ಕಿದ್ದ ಸನ್ನಿವೇಶ ಎಂದರೆ ಜೊತೆಗೆ ಬಂದಂತಹ ಹಾಗೂ ಅಲ್ಲಿಯೇ ಮೊದಲು ಇದ್ದ ಕುರಿಕೋಳಿಗಳು ಬೆಟ್ಟ ಇಳಿದು ಅತ್ಯಂತ ಕೆಳಗಡೆ ಬರುವವರೆಗೂ ನಮ್ಮಲ್ಲಿಯೇ ಒಬ್ಬರಂತೆ ಜೊತೆಜೊತೆ ಕೂಗುತ್ತಾ ಬರುವಾಗ. ಕೊನೆಗೂ ಎಲ್ಲರೂ ಅವುಗಳನ್ನು ಅಲ್ಲಿಯೇ ಬಿಟ್ಟು ಬೋಟ್ ಹತ್ತುವಾಗ ಅವುಗಳ ಮುಖದಲ್ಲಿ ಕಾಣುವ ಆಸರೆಯ ದಯನೀಯ ಕಣ್ಗಳು ಮಾತ್ರ ಮನಸ್ಸನ್ನು ಆರ್ದ್ರಗೊಳಿಸಿತು. ಕಣ್ಣಂಚಲಿ ಹನಿಮೂಡಿಸಿತು.
ಹಸಿವು ಹಸಿವು ಎನ್ನುತ್ತಲೇ ಬೋಟ್ ಹತ್ತಿದ ನಮಗೆ ಅಲ್ಲಿ ಕಾದಿತ್ತು ರುಚಿ ರುಚಿಯಾದ ಪಾಯಸದ ಊಟ. ಹೌದು… ಬೋಟಿನವರಿಂದ ರುಚಿಯಾದ ಊಟದ ಸಿದ್ದವಾಗಿತ್ತು. ಪ್ರತಿಯೊಬ್ಬರೂ ಸಾಕೊ.. ಬೇಕೊ.. ಎನ್ನುವಷ್ಟು ರುಚಿಯಾದ ಊಟ. ಊಟ ಮುಗಿಸಿದ ಅರ್ಧಗಂಟೆಯಲ್ಲಿ ಮತ್ತೆ ಟೀ ಎಲ್ಲರಿಗೂ. ಮನೆಮಂದಿಯಂತೆ ಎಲ್ಲರಿಗೂ ಉಣಬಡಿಸಿದ ಈ ಆತ್ಮೀಯತೆಯನ್ನು ಮರೆಯಲೂ ಸಾಧ್ಯವೇ!? ಅಂತೂ ಪಯಣದಲ್ಲಿ ದಾರಿ ತೋರಿದ ಸಹಕರಿಸಿದ ಹಸಿವೆಂದಾಗ ಊಟ ಬಡಿಸಿದ ಎಲ್ಲರನ್ನೂ ಕೈ ಮುಗಿದು ನಮಸ್ಕರಿಸುವುದು ಒಂದೇ ನಮ್ಮ ಕೃತಜ್ಞತೆಯಾಗಿತ್ತು.
ಯಾಕೊ ಗೊತ್ತಿಲ್ಲ, ಮತ್ತೆ ಬೈಕ್ ಏರಿ ಮನೆಕಡೆ ಹೊರಟ ನನ್ನ ಮನದಲ್ಲಿ ನೆನಪಾಗಿದ್ದು ಡಿ.ವಿ.ಜಿಯವರ ಈ ಸಾಲುಗಳು:
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ,
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ.
ಉಮೇಶ ಮುಂಡಳ್ಳಿಯವರ ಲೇಖನಕ್ಕೆ ನನ್ನ ಅನಿಸಿಕೆ 👇
ತಮ್ಮ ಲೇಖನ ಓದಿದೆ ಸರ್…ಇದೊಂದು ಅದ್ಭುತವಾದ ಅನುಭವ ಕಥನ.
ಈ ಸಾಹಸಮಯ ಪಯಣದಲ್ಲಿ ಅತಿ ಕಿರಿಯ ಪಯಣಿಗನಾಗಿದ್ದಿದ್ದು, ಅದು ಪುಟಾಣಿ ಉತ್ಥಾನನ ಸೌಭಾಗ್ಯ. ಉತ್ಥಾನ ಪುಟ್ಟ ನೇತ್ರಾಣಿ ದ್ವೀಪಕ್ಕೆ ಪುನೀತ ದ್ವೀಪವೆಂದು ಮರುನಾಮಕರಣಗೊಳಿಸಿದ್ದು ಮನದಲ್ಲಿ ಒಂದು ಚಿಕ್ಕ ಖುಷಿಯ ನಗು ತರಿಸಿತು. ದೊಡ್ಡವರಿಗೆ ಗೊಂದಲಕ್ಕಿಳಿಸುವ ಪುಟಾಣಿ ಉತ್ಥಾನನ ಕಠಿಣ ಪ್ರಶ್ನೆಗಳಿಗೆ ಖಂಡಿತ ಉತ್ತರ ನೀಡಲು ಅಸಾಧ್ಯದ ಮಾತು.
ಬೋಟ್ ನವರು ಆತ್ಮೀಯತೆಯಿಂದ ರುಚಿರುಚಿಯಾದ ಪಾಯಸದ ಊಟ ಉಣಬಡಿಸಿ, ಹಸಿವು ನೀಗಿಸಿದ ಸನ್ನಿವೇಶಗಳನ್ನು ಹೇಗೆ ಮರೆಯಲು ಸಾಧ್ಯ ಸರ್..?
ಲೇಖನದ ಆ ಒಂದು ಸಾಲಂತೂ ನನ್ನ ಮನಸ್ಸನ್ನೂ ಕಲಕಿಬಿಟ್ಟಿತು. ” ಜೊತೆಗೆ ಬಂದಂತಹ ಹಾಗೂ ಅಲ್ಲಿಯೇ ಮೊದಲು ಇದ್ದ ಕುರಿಕೋಳಿಗಳು ಬೆಟ್ಟ ಇಳಿದು ಅತ್ಯಂತ ಕೆಳಗಡೆ ಬರುವವರೆಗೂ ನಮ್ಮಲ್ಲಿಯೇ ಒಬ್ಬರಂತೆ ಜೊತೆಜೊತೆ ಕೂಗುತ್ತಾ ಬರುವಾಗ ಕೊನೆಗೆ ಎಲ್ಲರೂ ಅವುಗಳನ್ನು ಅಲ್ಲಿಯೇ ಬಿಟ್ಟು ಬೋಟ್ ಹತ್ತುವಾಗ ಅವುಗಳ ಮುಖದಲ್ಲಿ ಕಾಣುವ ಆಸರೆಯ ದಯನೀಯ ಕಣ್ಗಳು ಮಾತ್ರ ಮನಸ್ಸನ್ನು ಆರ್ದೃಗೊಳಿಸಿತು. ಕಣ್ಣಂಚಲಿ ಹನಿ ಮೂಡಿಸಿತು.” ಖಂಡಿತ ಸರ್…ಓದುಗರ ಕಣ್ಣಲ್ಲಿಯೂ ನೀರು ತರಿಸುವಂತಿದೆ ಈ ಸಾಲು…
ಅಲ್ಲಿನ ಪಯಣದ ದಾರಿಯ ಬಗ್ಗೆ ಮನದಲ್ಲಿ ಭಯ ಮೂಡಿದರೂ ಕೂಡ ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆನಿಸುವಂತಿದೆ ಈ ಲೇಖನ…
*ರಾಮ ಹೆಬಳೆ, ಶೇಡಬರಿ, ಭಟ್ಕಳ