ಕುಮಟಾ: ಕಾಂಗ್ರೆಸ್ ಪಕ್ಷ ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಕಳೆದುಕೊಂಡು ೩೦ ವರ್ಷವಾಗಿದೆ. ಕಳೆದ ೧೦ ವರ್ಷದಿಂದ ಉತ್ತರ ಕನ್ನಡ ಕ್ಷೇತ್ರದಲ್ಲಿ ಯಾವ ಅಭಿವೃದ್ದಿ ಕೆಲಸ ನಡೆದಿಲ್ಲ ಎಂದು ರಾಜ್ಯ ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇದನ್ನೂ ಓದಿ : ಅಭಿವೃದ್ದಿಯ ದೃಷ್ಟಿಯಲ್ಲಿ ಈ ಬಾರಿಯ ಚುನಾವಣೆ : ಐವನ್ ಡಿಸೋಜಾ

ಪಟ್ಟಣದ ಪಕ್ಷದ ಕಚೇರಿಯಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತ, ಉತ್ತರ ಕನ್ನಡ ಕ್ಷೇತ್ರವನ್ನು ನಮ್ಮ ಪಕ್ಷ ಮರಳಿ ಪಡೆಯಬೇಕೆಂಬ ಉದ್ದೇಶದೊಂದಿಗೆ ನಾವೆಲ್ಲರೂ ಒಟ್ಟಾಗಿ, ಒಮ್ಮತದಿಂದ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಜನರು ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಿಸಬೇಕು ಎಂಬ ತೀರ್ಮಾನ ಮಾಡಿದ್ದಾರೆ. ನಮ್ಮಲ್ಲಿ ಇರುವುದು ಒಂದೇ ಗುಂಪು. ಹಾಗಾಗಿ ಯಾವುದೇ ಭಿನ್ನಾಬಿಪ್ರಾಯ ನಮ್ಮಲಿಲ್ಲ ಎಂದು ಹೇಳಿದರು.

ಮೇ ೩ರಂದು ಸಿಎಂ, ಡಿಸಿಎಂ
ನಮ್ಮ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಲು ಆಗಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಾವು ಕೋರಿಕೊಂಡಿದ್ದೇವು. ಅದರನ್ವಯ ಇಬ್ಬರೂ ನಾಯಕರು ಮೇ ೩ರಂದು ಜಿಲ್ಲೆಗೆ ಆಗಮಿಸಲಿದ್ದಾರೆ. ಬೆಳಿಗ್ಗೆ ಉಭಯ ನಾಯಕರು ಮುಂಡಗೋಡದಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಕುಮಟಾದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಜಿಲ್ಲೆಯ ಜನರಿಗೆ ನಮ್ಮ ಸರ್ಕಾರ ಬಂದ ಮೇಲೆ ಏನೇನನ್ನು ಕೊಟ್ಟಿದೆ, ಇನ್ನೇನು ಕೊಡಲಿದೆ ಎಂಬುದನ್ನು ಹೇಳಲಿದ್ದಾರೆ. ಇದರೊಟ್ಟಿಗೆ ಇಲ್ಲಿರುವ ಕೆಲವು ಸಮಸ್ಯೆಗಳ ನಿವಾರಣೆಗೂ ಮುಖ್ಯಮಂತ್ರಿಗಳು ಪರಿಹಾರ ನೀಡಲಿದ್ದಾರೆ. ಒಟ್ಟಿನಲ್ಲಿ ನಮಗೆಲ್ಲರಿಗೂ ನಮ್ಮ ಪಕ್ಷದ ಅಭ್ಯರ್ಥಿಯ ಗೆಲವು ಮುಖ್ಯವಾಗಿದೆ.
ಘಟ್ಟದ ಮೇಲ್ಭಾಗದ ತಾಲೂಕಿನ ಮತದಾರರಿಗಾಗಿ ಮುಂಡಗೋಡ ಸಭೆಯಾಗಿದ್ದರೆ, ಘಟ್ಟದ ಕೆಳಗಿನ ತಾಲೂಕುಗಳ ಮತದಾರರಿಗಾಗಿ ಕುಮಟಾದಲ್ಲಿ ಸಭೆ ಏರ್ಪಡಿಸಲಾಗಿದೆ. ಕುಮಟಾದ ಸಭೆಯಲ್ಲಿ ೨೫ ಸಾವಿರ ಜನ ಸೇರುವರೆಂಬ ವಿಶ್ವಾಸವಿದೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳಲೆಂದು ವಿವೇಕ ಹೆಬ್ಬಾರ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಪಕ್ಷ ಸೇರಿಕೊಂಡ ಅವರನ್ನು ನಾವು ಸ್ವಾಗತಿಸಿದ್ದೇವೆ. ಇನ್ನು ಅವರ ತಂದೆ ಶಿವರಾಮ ಹೆಬ್ಬಾರ ಅವರ ಬಗ್ಗೆ ನಾನೇನೂ ಮಾತನಾಡುವುದಿಲ್ಲ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಪತ್ರಿಕಾಗೋಷ್ಠಿಯಲ್ಲಿ ಮಾಲೂರು ಕ್ಷೇತ್ರದ ಶಾಸಕ, ಉತ್ತರ ಕನ್ನಡ ಕ್ಷೇತ್ರದಲ್ಲಿ ಚುನಾವಣಾ ಉಸ್ತುವಾರಿ ನಂಜೇಗೌಡ, ಡಿಡಿಸಿ ಅಧ್ಯಕ್ಷ ಸಾಯಿ ಗಾಂವ್ಕರ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ, ಕೆಪಿಸಿಸಿ ಉಪಾಧ್ಯಕ್ಷ ನಿವೇದಿತ ಆಳ್ವಾ, ಮುಖಂಡರಾದ ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ವಿ.ಎಲ್.ನಾಯ್ಕ, ಆರ್.ಎಚ್.ನಾಯ್ಕ ಇನ್ನಿತರರು ಉಪಸ್ಥಿತರಿದ್ದರು.