ಯಲ್ಲಾಪುರ: ತುಳಿತಕ್ಕೆ ಒಳಗಾದಂತಹ ಸಮುದಾಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ದೃಷ್ಟಿಯಿಂದ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ರವರು ಡಮಾಮಿ ಸಿದ್ದಿ ಸಮುದಾಯ ಪ್ರವಾಸೋದ್ಯಮ ಮನೆ ಅಭಿವೃದ್ಧಿಪಡಿಸಿ ಆ ಬುಡಕಟ್ಟು ಜನರನ್ನು ಸಮಾಜದ ಮೇಲ್ಪಂಕ್ತಿಯಲ್ಲಿ ತೆಗೆದುಕೊಂಡು ಹೋಗುವಂತಹ ಅತ್ಯಂತ ಶ್ಲಾಘನೀಯ ಕಾರ್ಯ ಮಾಡಿದ್ದಾರೆ ಎಂದು ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ ಹೇಳಿದರು.

ಇದನ್ನೂ ಓದಿ : ನಕಲಿ ಡ್ರೈವಿಂಗ್ ಲೈಸೆನ್ಸ್ ಪತ್ತೆ : ಭಟ್ಕಳದ ಇಬ್ಬರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಇಡಗುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗದಬೈಲ್ ಗ್ರಾಮದಲ್ಲಿ ಜಿಲ್ಲಾ, ತಾಲ್ಲೂಕಾ ಹಾಗೂ ಗ್ರಾಮ ಪಂಚಾಯತಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾದ ಡಮಾಮಿ ಸಿದ್ದಿ ಸಮುದಾಯ ಮನೆ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.


ಹಲವು ಅಡೆತಡೆಗಳ ನಡುವೆಯೂ ಜಿಲ್ಲಾ ಪಂಚಾಯತ್‌ನ ಸಿಇಒ ರವರು ಬುಡಕಟ್ಟು ಸಮುದಾಯದ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ರೂಪಿಸಿಕೊಳ್ಳಲು ಪೂರಕವಾಗುವಂತೆ ಉತ್ತಮ ಕಾರ್ಯ ಮಾಡಿದ್ದಾರೆ. ಒಂದು ಸಮುದಾಯದ ಕಲೆ, ಸಂಸ್ಕೃತಿ, ಜೀವನ ಶೈಲಿ, ಪರಿಸರ ಪರಿಚಯಿಸುವಂತಹ ನೈಸರ್ಗಿಕ ಪರಿಸರದ ಮಧ್ಯದಲ್ಲಿ ಈ ಸುಸಜ್ಜಿತ ಕಟ್ಟಡವಿದೆ. ಮುಂಬರುವ ಯಾವುದೇ ಅಡೆತಡೆಗಳಿಗೆ ಕಿವಿ ಕೊಡದೆ ಈ ಡಮಾಮಿ ಪ್ರವಾಸೋದ್ಯಮ ಸ್ಥಳಕ್ಕೆ ಬರುವ ಪ್ರವಾಸಿಗರಿಗೆ ಉತ್ತಮ ಸೇವೆ ನೀಡುವ ಮೂಲಕ ನಿಸರ್ಗ ಸ್ಪರ್ಶ ಸಂಜೀವಿನಿ ಪ್ರವಾಸೋದ್ಯಮ ಗುಂಪಿನ ಮಹಿಳೆಯರು ಕಾರ್ಯ ನಿರ್ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ನಡುವೆಯೇ ಪ್ರವಾಸೋದ್ಯಮ ಕ್ಷಣಗಳನ್ನು ಅನುಭವಿಸಲಾಗುತ್ತಿದೆ. ಆದರೆ ಈ ಕಟ್ಟಡದ ಸುತ್ತಲೂ ಅರಣ್ಯ ಪ್ರದೇಶ ಆವರಿಸಿದ್ದು, ವಾಯು ಮಾಲಿನ್ಯ ಮುಕ್ತವಾಗಿದೆ. ಹೀಗಾಗಿ ಇಲ್ಲಿಗೆ ಆಗಮಿಸಿದ ಅತಿಥಿಗಳಿಗೆ ಒಳ್ಳೆಯ ರೀತಿಯಿಂದ ಕಾಣಬೇಕು. ಸ್ಥಳೀಯ ನೆಲ, ಜಲ, ಭಾಷೆ, ಸಂಸ್ಕೃತಿ ಬಗ್ಗೆ ತಿಳಿಸಿ ಕೊಡಬೇಕು. ಅರಣ್ಯದಲ್ಲಿನ ಆದಾಯೋತ್ಪನ್ನ ಪದಾರ್ಥಗಳ ಕುರಿತು ಸಮಗ್ರ ಮಾಹಿತಿ ನೀಡುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ : ಕಂಟೇನರ್ ವಾಹನದಲ್ಲಿ ಸಾಗಿಸುತ್ತಿದ್ದ ಎತ್ತುಗಳ ರಕ್ಷಣೆ  https://www.facebook.com/share/p/apWZqnS5UexStohC/?mibextid=Nif5oz

ಜಿಲ್ಲಾ ಪಂಚಾಯತ್‌ನ ಪ್ರಭಾರ ಯೋಜನಾ ನಿರ್ದೇಶಕ ಮಂಜುನಾಥ ನಾವಿ ಮಾತನಾಡಿ, ಸಿದ್ದಿ ಸಮುದಾಯ ಸಮಾಜದಲ್ಲಿ ಅತ್ಯಂತ ಹಿಂದುಳಿದ ಹಾಗೂ ವಿಶಿಷ್ಠವಾದ ಸಮುದಾಯವಾಗಿದೆ. ಈ ಸಮುದಾಯದ ಜನರ ಆರ್ಥಿಕ, ಸಾಮಾಜಿಕ ಸಬಲೀಕರಣ ಮತ್ತು ಈ ಸಮುದಾಯದ ವಿಶಿಷ್ಟತೆಗಳನ್ನು ವಿವಿಧ ಪ್ರದೇಶದಿಂದ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಪರಿಚಯಿಸಲು ಸಿದ್ದಿ ಪ್ರವಾಸೋದ್ಯಮ ಕಟ್ಟಡ ನಿರ್ಮಿಸಲಾಗಿದೆ. ಇದರ ಸದುಪಯೋಗವನ್ನು ಸಮುದಾಯದ ಮಹಿಳೆಯರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಡಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಉಪಾಧ್ಯಕ್ಷ ಕುಮಾರಿ ನಾಗವೇಣಿ ಸಿದ್ದಿ, ಸದಸ್ಯರಾದ ವಿಶ್ವೇಶ್ವರ ಹೆಗಡೆ, ವಿ.ಎನ್. ಭಟ್, ಗೋಪಾಲ ಸಿದ್ದಿ, ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಆರ್. ಹೆಗಡೆ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ ಆಗೇರ, ಸೀತಾರಾಮ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಅಧ್ಯಕ್ಷ ಪ್ರೇಮಾ ಜೋಶಿ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಪಿಡಿಒ, ಎನ್‌ಆರ್‌ಎಲ್‌ಎಂ ಹಾಗೂ ನರೇಗಾ ಅಧಿಕಾರಿಗಳು, ಸಿಬ್ಬಂದಿ, ಸ್ವಸಹಾಯ ಸಂಘದ ಮಹಿಳಾ ಸದಸ್ಯರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.