ಭಟ್ಕಳ : ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯಿತಿಯ ತೆಂಗಿನಗುಂಡಿ ಬೀಚ್ ಬಳಿ ಬಿಜೆಪಿ ಕಾರ್ಯಕರ್ತರು ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಸೋಮವಾರ ಅಳವಡಿಸಿದ್ದ ವೀರ ಸಾವರ್ಕರ ನಾಮಫಲಕ ಮತ್ತು ಹನುಮಧ್ವಜ ಬೆಳಗಾಗುವುದರೊಳಗೆ ತೆರವುಗೊಳಿಸಲಾಗಿದೆ.

ನಿನ್ನೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ಹೆಬಳೆ ಗ್ರಾಮ ಪಂಚಾಯತ ಪಿಡಿಓ ಮಂಜುನಾಥ ಗೊಂಡ ಸಮ್ಮುಖದಲ್ಲಿ ವಿವಾದಿತ ನಾಮಫಲಕ ಮತ್ತು ಧ್ವಜವನ್ನು ತೆರವುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಭಟ್ಕಳ ಡಿವೈಎಸ್ಪಿ, ಸರ್ಕಲ್ ಇನ್ಸಪೆಕ್ಟರ್ ಮತ್ತು ಗ್ರಾಮೀಣ ಠಾಣೆ ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿದೆ. ಇದಕ್ಕೂ ಪೂರ್ವ ನಿನ್ನೆ ರಾತ್ರಿ ಮುರುಡೇಶ್ವರಕ್ಕೆ ಆಗಮಿಸಿ, ವಾಸ್ತವ್ಯ ಹೂಡಿದ್ದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ ಡಿವೈಎಸ್ಪಿ ಅವರಿಂದ ಪ್ರಕರಣದ ಬಗ್ಗೆ ಚರ್ಚಿಸಿದ್ದರು.

ಪೊಲೀಸ್ ಬಂದೋಬಸ್ತ್:

ನಾಮಫಲಕ, ಹನುಮಧ್ವಜ ತೆರವುಗೊಳಿಸಿರು ವಿವಾದಿತ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಎರಡು ಕೆ ಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಗ್ರಾಮೀಣ ಠಾಣೆಯ ಜೀಪ್ ಕೂಡ ಸ್ಥಳದಲ್ಲಿದ್ದು, ಸ್ಥಳೀಯ ಪೊಲೀಸರು ಕೂಡ ಪಹರೆಯಲ್ಲಿದ್ದಾರೆ. ಈ ಪ್ರದೇಶದಲ್ಲಿ ಜನ ಸಂಚಾರ ಕಡಿಮೆಯಾಗಿದೆ. ಸನಿಹದ ಸೊಸೈಟಿ, ಅಂಗಡಿಗಳನ್ನು ತೆರೆದಿದ್ದರೂ ಜನರ ಓಡಾಟವಿಲ್ಲದೆ ಬಿಕೋ ಎನ್ನುವಂತಾಗಿದೆ.

ಪ್ರಕರಣದ ಹಿನ್ನೆಲೆ
ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿಯಲ್ಲಿ ಸಂಸದ ಅನಂತಕುಮಾರ ಹೆಗಡೆ, ಮಾಜಿ ಶಾಸಕ ಸುನೀಲ ನಾಯ್ಕ ಸಮ್ಮುಖದಲ್ಲಿ ಮಾ.೪ರಂದು ಬಿಜೆಪಿ ಕಾರ್ಯಕರ್ತರು ತಾಲೂಕಾಡಳಿತ ಧ್ವಜ ತೆರವುಗೊಳಿಸಿದ್ದ ಪ್ರದೇಶದಲ್ಲಿ ಹನುಮನ ಚಿತ್ರವಿರುವ ಭಗವಾದ್ವಜ (ಹನುಮಧ್ವಜ) ಆರೋಹಣ ಮಾಡಿದ್ದರು. ತಾಲೂಕಾಡಳಿತಕ್ಕೆ ನೀಡಿದ ಗಡುವು ಮುಗಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಧ್ವಜ ಆರೋಹಣ ಮಾಡಿದ್ದರು. ಅಲ್ಲದೇ ಧ್ವಜದ ಕಟ್ಟೆಯ ಮೇಲೆ ವೀರ ಸಾವರ್ಕರ ಬೀಚ್ ಎಂಬ ನಾಮಫಲಕ ಅಳವಡಿಸಿದ್ದರು. ಅನುಮತಿ ಪಡೆಯದೆ ಸಾರ್ವಜನಿಕ ಸ್ಥಳದಲ್ಲಿ ಧ್ವಜ ಕಟ್ಟೆ ನಿರ್ಮಿಸುವ ಜತೆಗೆ ನಾಮಫಲಕ ಅಳವಡಿಸಿ, ಧ್ವಜವೊಂದನ್ನು ಹಾರಿಸಿದ್ದಾಗಿ ಗ್ರಾಮ ಪಂಚಾಯಿತಿ ಪಿಡಿಒ ಮಂಜುನಾಥ ಗೊಂಡ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ 20ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿ ಮುಖಂಡರಾದ ಗೋವಿಂದ ನಾಯ್ಕ, ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ದೀಪಕ ನಾಯ್ಕ, ಸುರೇಶ ಕೋಣೆಮನೆ, ರವಿ ನಾಯ್ಕ ಜಾಲಿ ಸೇರಿ ಇತರ 15ಕ್ಕೂ ಹೆಚ್ಚು ಜನರು ಇತರ ಆರೋಪಿತರಾಗಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ನಿಯಮ ಉಲ್ಲಂಘಿಸಿ ಧ್ವಜ ಹಾರಿಸಿರುವುದು, ಗಲಭೆಗೆ ಪ್ರಚೋದನೆ ನೀಡಲು ಯತ್ನಿಸುವ ಜತೆಗೆ ಧಾರ್ಮಿಕ ಭಾವನೆಗೆ ಧಕ್ಕೆ ತರಲು ಯತ್ನಿಸಿದ ಕಾರಣಕ್ಕೆ ಐಪಿಸಿ ಸೆಕ್ಷನ್ 143, 147, 149, 1532 800 ಪ್ರಕರಣ ದಾಖಲಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ವರದಿಗಳು ಇಲ್ಲಿವೆ :

ತೆಂಗಿನಗುಂಡಿಯಲ್ಲಿ ಮತ್ತೆ ಹಾರಾಡಿದ ಭಗವಾಧ್ವಜ

ಭಗವಾಧ್ವಜ ಪ್ರಕರಣ : ಆರೋಪಿತರು ಯಾರು? ದೂರಿನಲ್ಲಿ ಏನಿದೆ?

ಸಂಸದ ಹೆಗಡೆ ಸಹಿತ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲು

ಭಗವಾಧ್ವಜ ಪ್ರಕರಣ : ಆರೋಪಿತರು ಯಾರು? ದೂರಿನಲ್ಲಿ ಏನಿದೆ?

ವೀರ ಸಾವರ್ಕರ ನಾಮಫಲಕ, ಭಗವಾಧ್ವಜ ತೆರವು – ಪಿಡಿಒ ವಿರುದ್ದ ಧರಣಿ ಕುಳಿತ ಪಂಚಾಯತ ಸದಸ್ಯರು