ಭಟ್ಕಳ ಡೈರಿ ವರದಿ

ಹೊಸನಗರ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಅಮೂಲ್ಯ ನೈಸರ್ಗಿಕ ಸಂಪತ್ತಿನ ಉಳಿವಿಗಾಗಿ ಡಾ. ಕಸ್ತೂರಿರಂಗನ್ ವರದಿಯ ಆಧಾರದಲ್ಲಿ ಅಂತಿಮ ಅಧಿಸೂಚನೆಯನ್ನು ಯಾವುದೇ ವಿಳಂಬವಿಲ್ಲದೆ ಹೊರಡಿಸಬೇಕು ಎಂದು ಜನ ಸಂಗ್ರಾಮ ಪರಿಷತ್‌ನ ಹೊಸನಗರ ತಾಲೂಕು ಘಟಕದ ಪರವಾಗಿ ಗಿರೀಶ ಆಚಾರ ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಸಲ್ಲಿಸಿರುವ ಅವರು, ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಶೀಘ್ರ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

೨೦೧೩ರ ವರದಿಯ ಅನುಷ್ಠಾನಕ್ಕೆ ಆಗ್ರಹ: ಡಾ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡವು ೨೦೧೩ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ ಸುಮಾರು ೧.೬ ಲಕ್ಷ ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಉಷ್ಣ ವಿದ್ಯುತ್ ಯೋಜನೆಗಳು ಹಾಗೂ ಮಾಲಿನ್ಯ ಉಂಟುಮಾಡುವ ಕೈಗಾರಿಕೆಗಳಿಗೆ ನಿರ್ಬಂಧ ವಿಧಿಸುವಂತೆ ವರದಿ ಶಿಫಾರಸು ಮಾಡಿದೆ. ಆದರೆ ವರದಿ ಸಲ್ಲಿಕೆಯಾಗಿ ಹಲವು ವರ್ಷಗಳು ಕಳೆದಿದ್ದರೂ ಅಂತಿಮ ಅಧಿಸೂಚನೆ ಹೊರಬಂದಿಲ್ಲ ಎಂಬುದು ಮನವಿದಾರರ ಆಕ್ಷೇಪವಾಗಿದೆ.

ರಾಜಕೀಯ ಹಿತಾಸಕ್ತಿಗಳಿಂದ ಸಂರಕ್ಷಣೆಗೆ ಅಡ್ಡಿ ಆರೋಪ:

ಪಶ್ಚಿಮ ಘಟ್ಟಗಳ ಪ್ರದೇಶದ ಕೆಲವು ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ರೈತರು, ಬಡವರು ಹಾಗೂ ಸಾಮಾನ್ಯ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿ ಅಧಿಸೂಚನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಗಿರೀಶ್ ಆಚಾರ ಆರೋಪಿಸಿದ್ದಾರೆ.

ಭೂ ವ್ಯವಹಾರಗಳು, ಗಣಿಗಾರಿಕೆ ಗುತ್ತಿಗೆಗಳು, ಕೈಗಾರಿಕಾ ಯೋಜನೆಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಹಿತಾಸಕ್ತಿಗಳು ಪರಿಸರ ಸಂರಕ್ಷಣೆಯ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ ಎಂಬ ಅಭಿಪ್ರಾಯವನ್ನು ಅವರು ಮನವಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಕೋಟ್ಯಂತರ ಜನರ ಬದುಕಿಗೆ ಪಶ್ಚಿಮ ಘಟ್ಟಗಳೇ ಆಧಾರ: ಕಾವೇರಿ, ಕೃಷ್ಣಾ, ತುಂಗಾ, ಭದ್ರಾ ಮತ್ತು ಶರಾವತಿ ಸೇರಿದಂತೆ ಹಲವು ಪ್ರಮುಖ ನದಿಗಳ ಉಗಮಕ್ಕೆ ಪಶ್ಚಿಮ ಘಟ್ಟಗಳು ಮೂಲವಾಗಿವೆ. ಈ ನದಿಗಳು ಕುಡಿಯುವ ನೀರು, ಕೃಷಿ ಹಾಗೂ ಜನಜೀವನಕ್ಕೆ ಆಧಾರವಾಗಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಅರಬ್ಬಿ ಸಮುದ್ರದಿಂದ ಬೀಸುವ ಮುಂಗಾರು ಮಾರುತಗಳ ಚಲನೆ ಮತ್ತು ಮಳೆಯ ಹಂಚಿಕೆಯಲ್ಲಿಯೂ ಪಶ್ಚಿಮ ಘಟ್ಟಗಳು ಪ್ರಮುಖ ಪಾತ್ರ ವಹಿಸುತ್ತವೆ. ಹೀಗಾಗಿ ಈ ಪ್ರದೇಶದ ಅರಣ್ಯ ಮತ್ತು ನೈಸರ್ಗಿಕ ಸಂಪತ್ತಿನ ನಾಶವು ಜಲಸಂಪನ್ಮೂಲ, ಕೃಷಿ ಹಾಗೂ ಹವಾಮಾನದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಅವರು ಎಚ್ಚರಿಸಿದ್ದಾರೆ.

ವಿಳಂಬವಾದರೆ ನೈಸರ್ಗಿಕ ಸಂಪತ್ತಿಗೆ ಅಪಾಯ: ಅಂತಿಮ ಅಧಿಸೂಚನೆ ವಿಳಂಬವಾಗುತ್ತಿರುವ ಅವಧಿಯಲ್ಲಿ ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿನ ಅಮೂಲ್ಯ ನೈಸರ್ಗಿಕ ಸಂಪತ್ತು ಹಾಗೂ ಭೂಪ್ರದೇಶಗಳು ಒತ್ತುವರಿಗೆ ಒಳಗಾಗುವ ಅಪಾಯವಿದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಭವಿಷ್ಯದ ಪೀಳಿಗೆಯ ಹಿತದೃಷ್ಟಿಯಿಂದ ಹಾಗೂ ವನ್ಯಜೀವಿಗಳು ಸೇರಿದಂತೆ ಎಲ್ಲ ಜೀವಿಗಳ ಉಳಿವಿಗಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಕೆಲವರ ವಿರೋಧದ ಕಾರಣಕ್ಕೆ ಕೋಟ್ಯಂತರ ಜನರ ಪರಿಸರ ಹಿತಾಸಕ್ತಿಯನ್ನು ಕಡೆಗಣಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರವು ವಿಷಯದ ಗಂಭೀರತೆಯನ್ನು ಪರಿಗಣಿಸಿ ಡಾ. ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದ ಅಂತಿಮ ಅಧಿಸೂಚನೆಯನ್ನು ಶೀಘ್ರ ಹೊರಡಿಸಬೇಕು ಎಂದು ಗಿರೀಶ್ ಆಚಾರ ಆಗ್ರಹಿಸಿದ್ದಾರೆ.