ಭಟ್ಕಳ ಡೈರಿ ವರದಿ
ಭಟ್ಕಳ: ವಾಹನ ತಾಗಿದ ವಿಚಾರವಾಗಿ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭಟ್ಕಳ ತಾಲೂಕಿನ ಹಲ್ಲಂದಿ ಕಟಗಾರಕೊಪ್ಪ ಗ್ರಾಮದ ಗೌರೀಶ ಜೋಗಿ (೪೩) ಹಲ್ಲೆಗೊಳಗಾದವರು. ಅದೇ ಗ್ರಾಮದ ಮಂಜುನಾಥ ರಾಮ ಜೋಗಿ (೪೫) ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.
ದೂರಿನ ಪ್ರಕಾರ, ಅಕ್ಟೋಬರ್ ೯ರಂದು ಬೆಳಿಗ್ಗೆ ಸುಮಾರು ೭.೩೦ರ ವೇಳೆಗೆ ಗೌರೀಶ ಅವರು ಬಾಡಿಗೆ ಮುಗಿಸಿಕೊಂಡು ತಮ್ಮ ಇಕೋ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಆರೋಪಿ ಮಂಜುನಾಥ ಅವರ ಟಾಟಾ ಏಸ್ ವಾಹನ ಗೌರೀಶ ಅವರ ವಾಹನಕ್ಕೆ ತಾಗಿದೆ ಎನ್ನಲಾಗಿದೆ. ಈ ಕುರಿತು ಗೌರೀಶ ಅವರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಹೇಳಿದಾಗ, ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ರಸ್ತೆಯ ಪಕ್ಕದಲ್ಲಿದ್ದ ಕಲ್ಲಿನಿಂದ ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಗೌರೀಶ ಅವರು ಕೂಗಿಕೊಂಡಾಗ ಅವರ ತಂದೆ ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಆರೋಪಿ ಮತ್ತೊಮ್ಮೆ ತಮ್ಮ ತಂಟೆಗೆ ಬಂದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಗೌರೀಶ ಅವರು ಅಕ್ಟೋಬರ್ ೯ರಂದು ರಾತ್ರಿ ೮.೪೫ರ ಸುಮಾರಿಗೆ ಮುರ್ಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕಸ್ತೂರಿರಂಗನ್ ವರದಿ ಅಂತಿಮ ಅಧಿಸೂಚನೆ ತಕ್ಷಣ ಹೊರಡಿಸಿ: ಜನ ಸಂಗ್ರಾಮ ಪರಿಷತ್ ಒತ್ತಾಯ
ಭಟ್ಕಳ: ತಾ ಪಂ, ಜಿ ಪಂ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟ: ಹಲವು ಕ್ಷೇತ್ರಗಳಿಗೆ ಮಹಿಳಾ ಮೀಸಲಾತಿ




