ಭಟ್ಕಳ ಡೈರಿ ವರದಿ

ಬೈಂದೂರು: ರಾಷ್ಟ್ರೀಯ ಹೆದ್ದಾರಿ ೬೬ರ ಬೈಂದೂರು ಸಮೀಪದ ವತ್ತಿನೆಣೆ ಬಳಿ ಶನಿವಾರ ಮಧ್ಯಾಹ್ನ ಸಂಭವಿಸಿದ ಬೈಕ್ ಅಪಘಾತದಲ್ಲಿ ಭಟ್ಕಳದ ಮೀನುಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅವರ ಪತ್ನಿ ಗಾಯಗೊಂಡಿದ್ದಾರೆ. ಮೃತರನ್ನು ಭಟ್ಕಳ ತಾಲೂಕಿನ ಬೆಳ್ಳಿ ನಿವಾಸಿ ಉಮೇಶ ಮಂಜುನಾಥ ಮೊಗೇರ್ (೪೩) ಎಂದು ಗುರುತಿಸಲಾಗಿದೆ. ಅವರು ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.

ಉಮೇಶ ಅವರು ತಮ್ಮ ಪತ್ನಿ ಪದ್ಮಾ ಮೊಗೇರ್ ಅವರೊಂದಿಗೆ ಕುಂದಾಪುರ ಆಸ್ಪತ್ರೆಗೆ ತೆರಳಿ, ಅಲ್ಲಿಂದ ಬೈಕ್‌ನಲ್ಲಿ ಭಟ್ಕಳದಲ್ಲಿರುವ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ವತ್ತಿನೆಣೆ ಸಮೀಪ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಉಮೇಶ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಅವರ ಪತ್ನಿ ಪದ್ಮಾ ಅವರಿಗೂ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಮೇಶ ಅವರು ರಾತ್ರಿ ಮೀನುಗಾರಿಕೆಗೆ ತೆರಳಿ, ಬೆಳಗ್ಗೆ ಬೈಕ್‌ನಲ್ಲಿ ಕುಂದಾಪುರಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ:

ಮುರ್ಡೇಶ್ವರ: ಕಲ್ಲಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಕಸ್ತೂರಿರಂಗನ್ ವರದಿ ಅಂತಿಮ ಅಧಿಸೂಚನೆ ತಕ್ಷಣ ಹೊರಡಿಸಿ: ಜನ ಸಂಗ್ರಾಮ ಪರಿಷತ್ ಒತ್ತಾಯ