ಭಟ್ಕಳ ಡೈರಿ ವರದಿ

ಬೆಂಗಳೂರು: ರಾಜ್ಯದಲ್ಲಿ ಭಾರಿ ರೋಮಾಂಚನ ಮೂಡಿಸಿದ್ದ ಪ್ರಥಮ ಆವೃತ್ತಿಯ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL) – 2026 ಟೂರ್ನಿಯಲ್ಲಿ ಭಟ್ಕಳದ ವಿನೋದ ನಾಯ್ಕ ಅಬ್ಬಿಹಿತ್ಲು ನಾಯಕತ್ವದಲ್ಲಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ ಚಾಂಪಿಯನ್ ಆಗಿ ಇತಿಹಾಸ ಬರೆದಿದೆ.

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಭಟ್ಕಳದ ಶ್ರೀಧರ ನಾಯ್ಕ ಮಣ್ಕುಳಿ ಮಾರ್ಗದರ್ಶನದಲ್ಲಿ ಕಣಕ್ಕಿಳಿದಿದ್ದ ಉತ್ತರ ಕನ್ನಡ ಸ್ಟಾಲಿಯನ್ಸ್, ಮಂಗಳೂರು ಇಂಡಿಯನ್ಸ್ ತಂಡವನ್ನು 33–27 ಅಂಕಗಳ ಅಂತರದಿಂದ ಮಣಿಸಿ ಚೊಚ್ಚಲ ಕೆಕೆಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ರೋಮಾಂಚನಕಾರಿ ಫೈನಲ್ ಪಂದ್ಯ:

ಆರಂಭದಿಂದಲೂ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಮಂಗಳೂರು ಇಂಡಿಯನ್ಸ್ ತಂಡವು ಕಠಿಣ ಹೋರಾಟ ನೀಡಿದರೂ, ಅಂತಿಮ ಕ್ಷಣಗಳಲ್ಲಿ ಉತ್ತರ ಕನ್ನಡ ಸ್ಟಾಲಿಯನ್ಸ್ ಆಟಗಾರರು ತೋರಿದ ಅದ್ಭುತ ರೇಡಿಂಗ್ ಮತ್ತು ಬಲಿಷ್ಠ ಟ್ಯಾಕಲ್ ಪ್ರದರ್ಶನ ಪಂದ್ಯದ ದಿಕ್ಕನ್ನೇ ಬದಲಿಸಿತು. ಅಂತಿಮವಾಗಿ 6 ಅಂಕಗಳ ಮುನ್ನಡೆಯೊಂದಿಗೆ ಸ್ಟಾಲಿಯನ್ಸ್ ಜಯಭೇರಿ ಬಾರಿಸಿತು.

ರೋಚಕ ನಾಕೌಟ್ ಹಂತದ ಪಂದ್ಯಗಳು:

ಲೀಗ್ ಹಂತದ ಮುಕ್ತಾಯದ ನಂತರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ತೀವ್ರ ಪೈಪೋಟಿ ಕಂಡುಬಂದಿತ್ತು. ಮೊದಲ ಸೆಮಿಫೈನಲ್‌ನಲ್ಲಿ ಮಂಗಳೂರು ಇಂಡಿಯನ್ಸ್ ತಂಡವು ಬಲಿಷ್ಠ ಹೊಯ್ಸಳ ಎಂಪೈರ್ ಹಾಸನ ತಂಡವನ್ನು 43-30 ಅಂಕಗಳಿಂದ ಸೋಲಿಸಿ ಫೈನಲ್ ತಲುಪಿತ್ತು. ಮತ್ತೊಂದು ಸೆಮಿಫೈನಲ್‌ನಲ್ಲಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡವು ಮೈಸೂರು ಮಹಾಸೇನೆ ವಿರುದ್ಧ 33-31 ರ ಜಿದ್ದಾಜಿದ್ದಿನ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತ್ತು. ಫೈನಲ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಉತ್ತರ ಕನ್ನಡ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು.

ಡಾ. ಸಿ. ಹೊನ್ನಪ್ಪ ಗೌಡ ಅವರ ಕನಸಿನ ಕೂಸಾದ ಈ ಪ್ರೀಮಿಯರ್ ಲೀಗ್, ಗ್ರಾಮೀಣ ಭಾಗದ ಪ್ರತಿಭಾನ್ವಿತ ಕಬಡ್ಡಿ ಆಟಗಾರರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಮತ್ತು ವೃತ್ತಿಪರ ಕಬಡ್ಡಿಗೆ ಹೆಜ್ಜೆ ಇಡಲು ಅತ್ಯುತ್ತಮ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಮೊದಲ ಸೀಸನ್‌ನಲ್ಲೇ ಅತ್ಯುತ್ತಮ ಯಶಸ್ಸು ಕಂಡಿರುವ ಈ ಟೂರ್ನಿಯು ರಾಜ್ಯದ ಯುವ ಕಬಡ್ಡಿ ಪ್ರತಿಭೆಗಳಿಗೆ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.

ಇದನ್ನೂ ಓದಿ :

ಭಟ್ಕಳದಲ್ಲಿ ಕಳೆದ ವಾರ ಏನೇನು ನಡೆಯಿತು? ಸಾವು-ನೋವು, ಪೊಲೀಸ್ ಕಾರ್ಯಾಚರಣೆ, ರಾಜಕೀಯ ಬೆಳವಣಿಗೆ ಮತ್ತು ಕ್ರೀಡಾ ಸಾಧನೆಯ ಸಮಗ್ರ ನೋಟ

ಶಿರಾಲಿಯಲ್ಲಿ ಹಾವು ಕಡಿದು ೭೫ ವರ್ಷದ ವೃದ್ಧೆ ಸಾವು