ಭಟ್ಕಳ ಡೈರಿ ವರದಿ

ಭಟ್ಕಳ: ಶರನ್ನವರಾತ್ರಿ ಉತ್ಸವದ ಮೊದಲ ದಿನದ ಅಂಗವಾಗಿ ಮುಂಡಳ್ಳಿಯ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಭಾನುವಾರ ಸಂಜೆ ನಡೆದ ಭಕ್ತಿಸಂಗೀತ ಸೇವಾ ಕಾರ್ಯಕ್ರಮ ಭಕ್ತರ ಮನಸೂರೆಗೊಂಡಿತು.

ಅಕ್ಟೋಬರ್ ೧೧ರಂದು ಸಂಜೆ ೬ರಿಂದ ೮ ಗಂಟೆಯವರೆಗೆ ನಿನಾದ ಕಲ್ಚರಲ್ ಅಕಾಡೆಮಿ, ಭಟ್ಕಳ ವತಿಯಿಂದ ಉಮೇಶ ಮುಂಡಳ್ಳಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳ ಮೂಲಕ ದೇವಿಯ ಆರಾಧನೆಗೆ ಸಂಗೀತದ ಸೊಬಗು ತುಂಬಲಾಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶ ಮುಂಡಳ್ಳಿ ಅವರು ‘ಭಾಗ್ಯದ ಲಕ್ಷ್ಮೀ ಬಾರಮ್ಮ’, ‘ಜಗದಂಬೆ ದೇವಿ ಭವಾನಿ’ ಸೇರಿದಂತೆ ಹಲವು ಭಕ್ತಿಗೀತೆಗಳನ್ನು ಸುಮಧುರವಾಗಿ ಹಾಡಿ ಭಕ್ತಿಭಾವದ ವಾತಾವರಣ ನಿರ್ಮಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಸ್ತುತಪಡಿಸಿದ ‘ಭೈರವಿ ತಂಬೂರಿ ಮೀಟಿದವ’ ಗೀತೆ ನೆರೆದಿದ್ದ ಭಕ್ತರನ್ನು ಭಕ್ತಿಯ ಪರವಶತೆಯಲ್ಲಿ ತೇಲಿಸಿತು.

ಉಮೇಶ ಮುಂಡಳ್ಳಿ ಅವರ ಗಾಯನಕ್ಕೆ ನಿನಾದ ಉಮೇಶ ಸಾಥ್ ನೀಡಿದರು. ಉಡುಪಿಯ ಹಿರಿಯ ಕಲಾವಿದ ಉಮೇಶ ಮೇಸ್ತ ಶಿರೂರು ಹಾರ್ಮೋನಿಯಂನಲ್ಲಿ ಹಾಗೂ ಶ್ಯಾಮ್ ಮೇಸ್ತ ಶಿರೂರು ತಬಲಾದಲ್ಲಿ ಸಹಕರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಕಾರ್ಯಕ್ರಮದ ಅಂತ್ಯದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಅವರು ಉಮೇಶ ಮುಂಡಳ್ಳಿ ಸೇರಿದಂತೆ ಕಲಾವಿದರನ್ನು ಆಶೀರ್ವದಿಸಿ ಪ್ರಸಾದ ನೀಡಿ ಶುಭ ಹಾರೈಸಿದರು. ಶರನ್ನವರಾತ್ರಿಯ ಆರಂಭದಲ್ಲೇ ಭಕ್ತಿಗೀತೆಗಳ ಮೂಲಕ ನಡೆದ ಈ ಸಂಗೀತ ಸೇವೆ ಭಕ್ತರಲ್ಲಿ ಆಧ್ಯಾತ್ಮಿಕ ಅನುಭೂತಿ ಮೂಡಿಸಿತು.

ಇದನ್ನೂ ಓದಿ:

ಶಿರಾಲಿ ಚೆಕ್‌ಪೋಸ್ಟ್ ಬಳಿ ಮೋಟಾರ್ ಸೈಕಲ್‌ಗೆ ಇನ್ಸುಲೇಟರ್ ವಾಹನ ಡಿಕ್ಕಿ: ಅಂಗನವಾಡಿ ಶಿಕ್ಷಕಿಗೆ ಗಾಯ

ಸಂಪಾದಕೀಯ / ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಮುಖ್ಯ; ಸಂಘಟನೆಯ ಒಗ್ಗಟ್ಟು ಇನ್ನಷ್ಟು ಮುಖ್ಯ

ಭಟ್ಕಳ ಅಂಜುಮನ್ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ ಮೊಹಮ್ಮದ್ ಗೌಸ್ ಬಾಗ್ ಸಿರಾಜ್ ನಿಧನ