ಭಟ್ಕಳ ಡೈರಿ ವರದಿ

ಭಟ್ಕಳ: ಇಲ್ಲಿನ ಅಂಜುಮನ್ ಆರ್ಟ್ಸ್, ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ಖ್ಯಾತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಮೊಹಮ್ಮದ್ ಘೌಸ್ ಬಾಗ್ ಸಿರಾಜ್ (೮೨) ಅವರು ಬೆಳಗಾವಿ ಜಿಲ್ಲೆಯ ತಮ್ಮ ಸ್ವಗ್ರಾಮ ಕುಡಚಿಯಲ್ಲಿ ನಿಧನರಾಗಿದ್ದಾರೆ.

ಡಾ. ಬಾಗ್ ಸಿರಾಜ್ ಅವರು ೧೯೭೯ರಿಂದ ೧೯೯೫ರವರೆಗೆ ಭಟ್ಕಳದ ಅಂಜುಮನ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ಶೈಕ್ಷಣಿಕ ನಾಯಕತ್ವ, ಮಾರ್ಗದರ್ಶನ ಹಾಗೂ ಬೋಧನೆಯ ಮೂಲಕ ನೂರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು. ಶಿಕ್ಷಣ ತಜ್ಞ, ವಿದ್ವಾಂಸ ಹಾಗೂ ಉತ್ತಮ ಪ್ರಾಧ್ಯಾಪಕರಾಗಿ ಗುರುತಿಸಿಕೊಂಡಿದ್ದ ಅವರು ಸರಳತೆ, ಸೌಜನ್ಯ, ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಹೆಸರಾಗಿದ್ದರು. ಅವರ ನಿಧನದಿಂದ ಶಿಕ್ಷಣ ಕ್ಷೇತ್ರಕ್ಕೆ ಹಾಗೂ ಅವರನ್ನು ಹತ್ತಿರದಿಂದ ಬಲ್ಲವರಿಗೆ ತುಂಬಲಾರದ ನಷ್ಟ ಉಂಟಾಗಿದೆ. ಮೃತರು ಪತ್ನಿ, ಮೂವರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಕುಡಚಿಯ ಮಸೀದಿಯಲ್ಲಿ ಮಗ್ರಿಬ್ ನಮಾಜಿನ ಬಳಿಕ ಮೃತರ ಜನಾಝಾ ನಮಾಜ್ ನೆರವೇರಿಸಲಾಯಿತು. ನಂತರ ಸ್ಥಳೀಯ ಖಬರಸ್ತಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅಂಜುಮನ್ ಹಾಮಿ-ಎ-ಮುಸ್ಲಿಮೀನ್ ಸಂಸ್ಥೆಯ ಪ್ರತಿನಿಧಿಗಳಾದ ಯಾಸೀನ್ ಅಸ್ಕರಿ ಮತ್ತು ಎಸ್.ಎಂ. ಪರ್ವೇಝ್, ಸಲ್ಮಾನ್ ಜುಬಾಪು, ಅಜೈಬ್ ಶಮ್ಸುದ್ದೀನ್ ಬಾಷಾ ಸೇರಿದಂತೆ ಭಟ್ಕಳದ ಹಲವು ಗಣ್ಯರು ಹಾಗೂ ಸಮುದಾಯದ ಸದಸ್ಯರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮೃತರ ಹಳೆಯ ವಿದ್ಯಾರ್ಥಿಗಳು, ಬಂಧುಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ :

ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಮುಖ್ಯ; ಸಂಘಟನೆಯ ಒಗ್ಗಟ್ಟು ಇನ್ನಷ್ಟು ಮುಖ್ಯ

ಖೇಲೋ ಇಂಡಿಯಾ, ರಾಷ್ಟ್ರೀಯ ಕಬಡ್ಡಿ ಆಡಿದ ಭಟ್ಕಳದ ಆಟಗಾರರಿಗೆ ಉದ್ಯೋಗಾವಕಾಶ ಯಾವಾಗ?