ಕಾರವಾರ : ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಏ.೧೨ರಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂಪಡೆಯುವ ಕಾರ್ಯಗಳು ನಡೆಯಲಿವೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚರಿಕೆ ಕ್ರಮವಾಗಿ ಏಪ್ರಿಲ್ ೧೨ರಂದು ಬೆಳಗ್ಗೆ ೬ ಗಂಟೆಯಿಂದ ಏಪ್ರಿಲ್ ೨೨ರ ಸಂಜೆ ೬ ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿಯ ಆವರಣದ ೧೦೦ ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಿ.ಆರ್.ಪಿ.ಸಿ ಸೆಕ್ಷನ್ 144 ಅನ್ವಯ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ನಿಷೇದಾಜ್ಞೆ ಹೊರಡಿಸಿ ಆದೇಶಿಸಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಏ.೧೭ರಂದು
ಈ ಅವಧಿಯಲ್ಲಿ ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಮಯದಲ್ಲಿ ನಿಷೇಧಿತ ೧೦೦ ಮೀಟರ್ ಪರಿಧಿಯಲ್ಲಿ ಅಭ್ಯರ್ಥಿಯ ವಾಹನವನ್ನು ಒಳಗೊಂಡಂತೆ ಗರಿಷ್ಠ ಮೂರು ವಾಹನಗಳಿಗೆ ಮಾತ್ರ ಕಚೇರಿ ಆವರಣದಲ್ಲಿ ನಿಲುಗಡೆಗೆ ಅನುಮತಿ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಚೇರಿಯನ್ನು ಪ್ರವೇಶಿಸಲು ಅಭ್ಯರ್ಥಿಯನ್ನು ಒಳಗೊಂಡಂತೆ ಗರಿಷ್ಠ ೫ ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ.
ಇದನ್ನೂ ಓದಿ : ರಮಜಾನ್ ಉಪವಾಸದ ವೇಳೆ ವಿದ್ಯುತ್ ಕಡಿತಗೊಳಿಸದಂತೆ ಮನವಿ
ಐದು ಮಂದಿಗಿಂತ ಹೆಚ್ಚು ಮಂದಿ ಗುಂಪುಗಾರಿಕೆ ನಡೆಸುವುದು, ಆಯುಧ/ಶಸ್ತ್ರಾಸ್ತ್ರಗಳು ಮತ್ತು ಮಾರಕಾಸ್ತ್ರಗಳನ್ನು ಹೊತ್ತು ತಿರುಗುವುದನ್ನು ನಿರ್ಬಂಧಿಸಿದೆ. ನಾಮಪತ್ರ ಸಲ್ಲಿಸುವ ಕೇಂದ್ರದ ನಿಷೇಧಿತ ೧೦೦ ಮೀಟರ್ ಪರಿಧಿಯಲ್ಲಿ ಚುನಾವಣಾ ನಡೆಯುವ ಕಾರ್ಯದ ಮೇಲೆ ನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿಗಳು ಅನುಮತಿ ಹೊಂದಿದ ರಕ್ಷಣಾ ಇಲಾಖೆಯವರು ಹಾಗೂ ಅನುಮತಿ ಪಡೆದ ಮಾಧ್ಯಮದವರನ್ನು ಹೊರತುಪಡಿಸಿ ಉಳಿದ ಎಲ್ಲಾ ತರಹದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.
ಯಾವುದೇ ರೀತಿಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗತರುವ ರೀತಿಯಲ್ಲಿ ವರ್ತಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳಿಗೆ ವಿರೂಪವನ್ನು ಉಂಟು ಮಾಡುವುದನ್ನಾಗಲಿ ಅಥವಾ ನಷ್ಟಗೊಳಿಸುವುದನ್ನಾಗಲಿ ಮಾಡತಕ್ಕದಲ್ಲ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಕಾನೂನಿನನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಎಚ್ಚರಿಕೆ ನೀಡಿದ್ದಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.