ಭಟ್ಕಳ: ಪಟ್ಟಣದ ಹೃದಯ ಭಾಗವಾದ ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಯ ಹೊಂಡದಿಂದ ಆವೃತವಾಗಿದೆ. ಇದರಿಂದ ಬೇಸತ್ತ ಆಟೋ ಚಾಲಕರು ರಸ್ತೆಯ ಹೊಂಡದಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೋ ನೋಡಿ : ರಸ್ತೆ ಮೇಲೆ ಗಿಡ ನೆಟ್ಟು ಆಕ್ರೋಶ
ಈ ಹೊಂಡಮಯ ರಸ್ತೆಯಲ್ಲಿ ದಿನ ನಿತ್ಯ ಆಸ್ಪತ್ರೆಯಿಂದ ಓಡಾಡುವ ಅಂಬ್ಯುಲೆನ್ಸ, ರೋಗಿಗಳನ್ನು ಕರೆತರುವ ಆಟೋ ರಿಕ್ಷಾ ಹಾಗೂ ದ್ವಿ ಚಕ್ರ ವಾಹನ ಸವಾರರಿಗೆ ಕಿರಿಕಿರಿಯುಂಟಾಗುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಶೀಘ್ರವಾಗಿ ಈ ರಸ್ತೆ ದುರಸ್ತಿ ಕಾರ್ಯವಾಗಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ.
ಇದನ್ನೂ ಓದಿ : ವಿದ್ಯುತ್ ಹರಿಯುತ್ತಿದ್ದ ತಂತಿ ಬೇಲಿ ಮುಟ್ಟಿದ ಮಹಿಳೆ ಸಾವು
ಇತ್ತೀಚಿನ ವರ್ಷಗಳಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಇದರಿಂದಾಗಿ ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದೇ ರೀತಿ ಕೆಲವು ಅಪಘಾತದ ಸಮಯದಲ್ಲಿ ಅಥವಾ ಇನ್ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರೋಗಿಗಳನ್ನು ನೆರೆಯ ಉಡುಪಿ, ಮಣಿಪಾಲ, ಮಂಗಳೂರಿಗೆ ತೆರಳುವ ಅಂಬ್ಯುಲೆನ್ಸ ಸಹ ಇದೇ ರಸ್ತೆಯನ್ನು ಅವಲಂಬಿಸಿದೆ. ಇಂತಹ ಸ್ಥಿತಿಯಲ್ಲಿ ರಾಷ್ಟೀಯ ಹೆದ್ದಾರಿ-೬೬ಕ್ಕೆ ಹೊಂದಿಕೊಂಡಿರುವ ಸಂತೆ ಮಾರುಕಟ್ಟೆಯಿಂದ ಸರಕಾರಿ ಆಸ್ಪತ್ರೆಯ ತನಕ ತೆರಳುವ ರಸ್ತೆಯ ಮಧ್ಯ ಭಾಗದಲ್ಲಿ ಸಂಪೂರ್ಣವಾಗಿ ರಸ್ತೆ ಹೊಂಡದಿಂದ ಕೂಡಿದೆ. ಮಳೆಗಾಲದಲ್ಲಿ ಅಡಿಯಷ್ಟು ನೀರು ನಿಲ್ಲುತ್ತದೆ. ಇದಕ್ಕೆ ಕಾರಣ ಗುಡ್ಡದ ಪ್ರದೇಶದಿಂದ ಮಳೆಗಾಲದಲ್ಲಿ ಹರಿಯುವ ನೀರು ಅಸಮರ್ಪಕವಾದ ಚರಂಡಿ ವ್ಯವಸ್ಥೆಯಿಂದ ರಸ್ತೆಯ ಮೇಲೆ ಹರಿಯುತ್ತಿದೆ. ಈ ಪರಿಸ್ಥಿತಿ ಸಾಕಷ್ಟು ವರ್ಷದಿಂದ ಇದ್ದು, ನೀರು ರಸ್ತೆಗೆ ಬರುವುದರಿಂದ ಡಾಂಬರು ಸಂಪೂರ್ಣವಾಗಿ ಹಾಳಾಗಿ ರಸ್ತೆಯೆಲ್ಲ ಹೊಂಡದಿಂದ ಕೂಡಿದೆ.
ಇದನ್ನೂ ಓದಿ : ಜೂನ್ ೨೧ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಇಲ್ಲಿನ ಸ್ಥಳೀಯರು ಹೇಳುವ ಪ್ರಕಾರ, ರಸ್ತೆಯ ಮೇಲೆ ನೀರು ಹರಿಯುತ್ತಿರುವ ಬಗ್ಗೆ ಈ ಹಿಂದೆ ಪುರಸಭೆಗೆ ಮನವಿ ಮಾಡುತ್ತಾ ಬಂದಿದ್ದರೂ ಚರಂಡಿಯ ವ್ಯವಸ್ಥೆ ಸರಿಪಡಿಸುವ ಕೆಲಸವನ್ನೇ ಮಾಡಿಲ್ಲ. ಈ ಹಿಂದೆ ಹೊಂಡ ಬಿದ್ದ ಜಾಗದಲ್ಲಿ ಪುರಸಭೆಯಿಂದ ಮಣ್ಣು ಹಾಕಿ ತೇಪೆ ಹಚ್ಚುವ ಕೆಲಸವೊಂದೇ ಆಗಿದೆ. ಯಾರಾದರು ಸಚಿವರು ಬಂದಲ್ಲಿ ಮಾತ್ರ ಈ ರಸ್ತೆಯನ್ನು ತುರ್ತಾಗಿ ಸರಿಪಡಿಸುತ್ತಾರೆ ಹೊರತೂ ಶಾಶ್ವತವಾಗಿ ಈ ರಸ್ತೆ ಅಭಿವೃದ್ಧಿಗೆ ಪುರಸಭೆ ಅಥವಾ ಜನಪ್ರತಿನಿಧಿಗಳ ಶ್ರಮವಿಲ್ಲವಾಗಿರುವುದು ರಸ್ತೆ ನೋಡಿದರೆ ಗೋಚರಿಸುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ರಸ್ತೆಯಲ್ಲಿ ಸರಕಾರಿ ಆಸ್ಪತ್ರೆ, ಶಾಲಾ ಕಾಲೇಜು, ಸರಕಾರಿ ಕಚೇರಿ, ಮಿನಿ ವಿಧಾನ ಸೌಧ, ಸಂತೆ ಮಾರುಕಟ್ಟೆ, ಅಂಗಡಿ ಮುಂಗಟ್ಟು, ಜಿಮ್ ಗಳಿವೆ. ಹಳ್ಳಿ ಪ್ರದೇಶವಾದ ಮಾರುಕೇರಿ, ಕೋಣಾರ ಮುಂತಾದ ಭಾಗದಿಂದ ಬರುವ ಗ್ರಾಮೀಣ ಭಾಗದ ಜನರು ಪೇಟೆಗೆ ತೆರಳಲು ಸರಕಾರಿ ಆಸ್ಪತ್ರೆಯ ಈ ರಸ್ತೆಯನ್ನು ಅವಲಂಬಿಸುವುದು ಇತ್ತೀಚೆಗೆ ಹೆಚ್ಚಾಗಿದೆ. ಈ ರಸ್ತೆಯ ಹೊಂಡದಿಂದಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದ ಬಗ್ಗೆ ಗಮನ ಹರಿಸಿ ನಡೆದುಕೊಂಡು ಹೋಗಬೇಕಾಗಿದೆ. ಕೆಲವೊಂದು ವಾಹನಗಳು ಹೊಂಡವನ್ನು ಗಮನಿಸದೇ ತೆರಳಿದರೆ ವಿದ್ಯಾರ್ಥಿಗಳ ಸಮವಸ್ತ್ರವೆಲ್ಲ ಕೆಸರುಮಯವಾಗಲಿದೆ. ಅದೆಷ್ಟೋ ಮಂದಿ ದ್ವಿ ಚಕ್ರ ವಾಹನ ಸವಾರರು ಆಯತಪ್ಪಿ ಹೊಂಡದಲ್ಲಿ ಬಿದ್ದಿರುವುದು ಸಹ ಇದೆ. ಹೀಗಾಗಿ ಇವಕ್ಕೆಲ್ಲ ಒಂದು ಶಾಶ್ವತ ಪರಿಹಾರ ಬೇಕೆ ಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಆಟೋ ಚಾಲಕರ ಪ್ರತಿಭಟನೆ ವೇಳೆ ಮಂಜು ನಾಯ್ಕ, ಅಪ್ಪು ನಾಯ್ಕ ಜಾಲಿ, ಸುರೇಶ ನಾಯ್ಕ ಗುಳ್ಮಿ, ಚಂದ್ರಕಾಂತ ನಾಯ್ಕ, ಶಂಕರ ನಾಯ್ಕ, ಹನುಮಂತ ನಾಯ್ಕ ನಾರಾಯಣ ನಾಯ್ಕ, ಕೃಷ್ಣ ನಾಯ್ಕ, ಶನಿಯಾರ ಮೋಗೇರ ಇದ್ದರು.
ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ. ದಿನ ನಿತ್ಯ ಈ ರಸ್ತೆಯಲ್ಲಿ ಓಡಾಡುವ ರೋಗಿಗಳಿಗೆ, ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈಗಾಗಲೇ ಹಲವು ಬಾರಿ ರಸ್ತೆ ದುರಸ್ತಿಗಾಗಿ ಪುರಸಭೆಗೆ, ಸಹಾಯಕ ಆಯುಕ್ತರಿಗೆ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ದಿನ ನಿತ್ಯ ಬರುವ ರೋಗಿಗಳಿಗೆ ಹಾಗೂ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ.
– ಮಂಜುನಾಥ ನಾಯ್ಕ, ಆಟೋ ಚಾಲಕ