ಮೀನುಗಾರಿಕೆ ಅಲ್ಲ, ಮೀನುಗಾರರ ಇಲಾಖೆ ಎಂದ ಸಚಿವ ಮಂಕಾಳ
ಭಟ್ಕಳ : ಇದು ಮೀನುಗಾರಿಕೆ ಅಲ್ಲ, ಮೀನುಗಾರರ ಇಲಾಖೆ. ಇಲ್ಲಿ ಮೀನುಗಾರರೇ ಮುಖ್ಯಸ್ಥರು, ನಾವು ಇಲ್ಲಿ ಸೇವಕರು. ಮೀನುಗಾರರಿಂದ ಮೀನುಗಾರರಿಗಾಗಿ ಇರುವ ಈ ಇಲಾಖೆಯ ಯಾವುದೇ ಕೆಲಸಗಳಿಗಾಗಿ ಮಿನುಗಾರರು ಯಾವ ರಾಜಕಾರಣಿ, ಜನಪ್ರತಿನಿಧಿಗಳ ಎದುರು ಕೈಕಟ್ಟಿ ನಿಲ್ಲುವ ಅಗತ್ಯ ಇಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವ ಮಂಕಾಳ ಎಸ್ ವೈದ್ಯ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಬುಧವಾರ ಇಲ್ಲಿನ ಖಾಸಗಿ ರೇಸಾರ್ಟನಲ್ಲಿ ಮೀನುಗಾರಿಕೆ ಇಲಾಖೆ, ಉತ್ತರಕನ್ನಡ ಜಿಲ್ಲಾ ಪಂಚಾಯಿತಿ ನೇತೃತ್ವದಲ್ಲಿ ಮೀನು ಕೃಷಿಕರ ದಿನಾಚರಣೆ ನಿಮಿತ್ತ ನಡೆದ ಸಭೆಯಲ್ಲಿ ಮಾತನಾಡಿದರು. ಕರಾವಳಿಯಲ್ಲಿ ಒಟ್ಟು ೧೩ ಬಂದರುಗಳಿವೆ. ಪ್ರತಿ ಬಂದರು ಅಭಿವೃದ್ಧಿಗೆ ಮತ್ತು ಹೂಳೆತ್ತಲು ೨೫ ಕೋಟಿ ರೂ. ಮೀಸಲಿಟ್ಟಿದ್ದೇನೆ. ಅದರಲ್ಲಿ ಬಂದರು ಆಧುನೀಕರಣ, ಅಲ್ಲಿ ಕೆಲಸ ಮಾಡುವ ವಿಶೇಷವಾಗಿ ಮಹಿಳೆಯರ ಅನುಕೂಲಕ್ಕಾಗಿ ಮೂಲಸೌಕರ್ಯ, ವಿಶ್ರಾಂತಿ ಗೃಹ ಸೇರಿದಂತೆ ಮನೆಯಂತೆ ಅಲ್ಲಿ ಎಲ್ಲ ಸೌಕರ್ಯ ಒದಗಿಸಲಾಗುವದು. ಮಂಗಳೂರು ಬಂದರು ಅಭಿವೃದ್ಧಿಗೆ ೪೫ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಮಂಕಿಯಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ತೆರಯಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ವಿಶೇಷವಾಗಿ ಮುರ್ಡೇಶ್ವರದಲ್ಲಿ ೨೫೦ ಕೋಟಿ ರೂ. ವೆಚ್ಚದಲ್ಲಿ ಆಧುನೀಕೃತ ಬಂದರು ನಿರ್ಮಾಣ ಮಾಡಲಾಗುವದು. ಇದರಿಂದ ಇಲ್ಲಿನ ಪ್ರವಾಸೋದ್ಯಮಕ್ಕೂ ಬಲ ಬರಲಿದೆ. ಮೀನುಗಾರರಿಗೂ ಉತ್ತಮ ಅವಕಾಶ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಂಕಾಳ ವೈದ್ಯ ಹೇಳಿದರು.
ಇದನ್ನೂ ಓದಿ : ಚಲಿಸುತ್ತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೋರ್ವನ ಕೈ ತುಂಡು
ಈ ಬಾರಿ ಬಜೆಟಿನಲ್ಲಿ ಮೀನುಗಾರಿಕೆ ಇಲಾಖೆಯ ಇತಿಹಾಸದಲ್ಲೇ ಕಂಡು ಕೇಳರಿಯದಂತಹ ೩೦೦೦ ಕೋಟಿ ರೂ. ಮೀಸಲಿಡಲಾಗಿದೆ. ಈಗಾಗಲೇ ೨೦೦ ಮೀನುಗಾರರಿಗೆ ಮತ್ಸ್ಯ ಆಶ್ರಯ ಯೋಜನೆ ಮಂಜೂರಿ ಮಾಡಲಾಗಿದೆ. ಮೀನುಗಾರಿಕೆ ನಡೆಸುವಾಗ ಅಕಸ್ಮಾತ ಮೀನುಗಾರ ಮೃತಪಟ್ಟರೆ, ೨೪ ಗಂಟೆಯಲ್ಲಿ ಅವರಿಗೆ ಪರಿಹಾರ ಧನವನ್ನು ನೀಡುವ ವ್ಯವಸ್ಥೆ ಜಾರಿಯಾಗಿದೆ. ಅಲ್ಲದೆ ೬ ಲಕ್ಷ ರೂ. ಇದ್ದ ಪರಿಹಾರಧನವನ್ನು ೮ ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಮೀನುಗಾರ ಗಾಯಗೊಂಡರೆ ಅವರ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಒಂದು ವೇಳೆ ಕೈ ಕಾಲು ಕಳೆದುಕೊಂಡರೂ ಅವರಿಗೆ ೪ ಲಕ್ಷದ ಪರಿಹಾರದ ಮೊತ್ತವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: “ಅಮ್ಮನ ನೆರಳಿನಲ್ಲಿ” ಕಥಾ ಸಂಕಲನ ಬಿಡುಗಡೆ
ಕರಾವಳಿಯಲ್ಲಿ ಹುಟ್ಟಿದ ನಾವು ಪುಣ್ಯವಂತರು. ಮಲೆನಾಡಿನಲ್ಲಿ ಮೀನು ಮರಿಗಳನ್ನು ಕೃಷಿ ಮಾಡಿ, ಮೀನು ಸಾಕಣೆ ಮಾಡಬೇಕು. ಅಲ್ಲಿ ಮೀನುಗಳನ್ನು ಸಾಕಣೆ ಮಾಡಬೇಕು. ಆದರೆ ನಮಗೆ ಇಲ್ಲಿ ಎಲ್ಲವೂ ಪ್ರಕೃತಿ ನೀಡಿದೆ. ಮೀನುಗಾರರಿಗಾಗಿ ಇನ್ನೂ ಹತ್ತು ಹಲವು ಅಭಿವೃದ್ಧಿ ಕಾರ್ಯಗಳ ಯೋಜನೆ ನನ್ನ ಮನಸ್ಸಿನಲ್ಲಿದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಅನುಷ್ಠಾನಕ್ಕೆ ತರಲಾಗುವದು ಎಂದರು.
ಇದನ್ನೂ ಓದಿ : ಜುಲೈ ೧೦ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಮೀನುಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ ಮಗದ ಉಪನ್ಯಾಸ ನೀಡಿದರು. ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ ಕುಮಾರ ಕಳ್ಳೇರ, ಕಡಲ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ರಾಜಕುಮಾರ ನಾಯಕ, ಬೆಳಕೆ ಗ್ರಾ.ಪಂ. ಅಧ್ಯಕ್ಷ ಜಗದೀಶ ನಾಯ್ಕ, ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯ ಸದಸ್ಯರಾದ ವೆಂಕಟ್ರಮಣ ಮೊಗೇರ, ಮದನ ಕುಮಾರ ಬೈಂದೂರು, ಅಳ್ವೆಕೋಡಿ ಮೀನುಗಾರರ ಸಮಿತಿ ಅಧ್ಯಕ್ಷ ವಿಠಲ ದೈಮನೆ, ಜೈ ವಿಠಲ ಕುಬಾಲ, ಮೀನುಗಾರಿಕೆ ಉಪನಿರ್ದೇಶಕ ಪ್ರತೀಕ ಶೆಟ್ಟಿ, ಜಂಟಿ ನಿರ್ದೇಶಕ ಬಬಿನ್ ಭೋಪಣ್ಣ ಇದ್ದರು. ನಾಗರಾಜ ಮೊಗೇರ ಕಾರ್ಯಕ್ರಮ ನಿರ್ವಹಿಸಿದರು.