ಭಟ್ಕಳ: ಉತ್ತರ ಕನ್ನಡ ಜಿಲ್ಲೆಗೆ ಸಿಎಂ ಬಂದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಈಶ್ವರ ನಾಯ್ಕ ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ಪರಿಣಾಮ ಒಂದೇ ಕುಟುಂಬದ ಆರು ಜನರು ಸಾವಿಗೆ ಶರಣಾಗಿರುವ ಘಟನೆಯು ಆಘಾತಕಾರಿಯಾಗಿದೆ. ಈ ಬಗ್ಗೆ ಶೀಘ್ರ ಪರಿಹಾರ ಕಂಡುಕೊಳ್ಳುವ ಮಾರ್ಗ ಹುಡುಕುವ ಅನಿವಾರ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಬಹಿರ್ದೆಸೆಗೆ ಹೋದ ವ್ಯಕ್ತಿ ನದಿಯಲ್ಲಿ ಬಿದ್ದು ನಾಪತ್ತೆ
ಕಾರವಾರದಿಂದ ಕುಂದಾಪುರದವರೆಗೆ ನಿರ್ಮಾಣ ಹಂತದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಭೂಕುಸಿತ ನಡೆಯುವ ಸಾಧ್ಯತೆಗಳಿವೆ. ಆದರೆ, ಇದುವರೆಗೂ ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿಲ್ಲ ಎಂಬ ದೂರುಗಳಿವೆ. ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿನ ಮನೆಗಳು ಮಳೆಗಾಲದಲ್ಲಿ ಮುಳುಗಡೆಯಾಗುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಸಮರ್ಪಕ ಚರಂಡಿ ವ್ಯವಸ್ಥೆಗೆ ಮುಂದಾಗಿಲ್ಲ. ಈ ಹಿಂದೆ ಕುಮಟಾ ತಾಲೂಕಿನ ತಂಡರಕುಳಿ ಭಾಗದಲ್ಲಿ ಭೂಕುಸಿತವಾದಾಗಲೇ ರಾಜ್ಯ ಸರ್ಕಾರ ಎಚ್ಚರವಹಿಸಬೇಕಿತ್ತು. ಮುಂದಿನ ಅನಾಹುತಕ್ಕೆ ಪರಿಹಾರ ಕಂಡುಕೊಳ್ಳಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಜುಲೈ ೧೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ
ಉತ್ತರ ಕನ್ನಡದ ಹಲವಾರು ತಾಲೂಕುಗಳಲ್ಲಿ ಅತಿವೃಷ್ಟಿ ಕಾರಣದಿಂದ ಮನೆ ಹಾನಿ, ಭೂಕುಸಿತ ಮತ್ತು ಪ್ರಾಣ ಹಾನಿಗಳಾಗಿವೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಐ.ಆರ್.ಬಿ.ಯವರ ಅವೈಜ್ಞಾನಿಕ ರಸ್ತೆ ನಿರ್ಮಾಣ ಎಲ್ಲಾ ಅವಘಡಗಳಿಗೆ ಕಾರಣವಾಗಿದೆ. ಅವರ ಮೇಲೆ ಕ್ರಿಮಿನಲ್ ಕೇಸ್ ಮಾಡಿ, ಪ್ರಾಣ ಹಾನಿ ಆದ ಕುಟುಂಬಗಳಿಗೆ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಹುನ್ನಾರ ರಾಜ್ಯ ಸರ್ಕಾರದ್ದಾಗಿದೆ ಎಂದು ಈಶ್ವರ ನಾಯ್ಕ ಸಂಶಯ ವ್ಯಕ್ತಪಡಿಸಿದ್ದಾರೆ.
೨೦೧೯ರಲ್ಲಿಯೇ ಮುಗಿಸಬೇಕಾದ ರಾಷ್ಟ್ರೀಯ ಚತುಷ್ಪತ ಹೆದ್ದಾರಿ ಕಾಮಗಾರಿ ವಿಳಂಬವಾಗಲು ರಾಜ್ಯ ಸರ್ಕಾರದ ತಟಸ್ಥ ನೀತಿಯೇ ಕಾರಣವಾಗಿದೆ. ಚತುಷ್ಪಥ ಹೆದ್ದಾರಿ ಪ್ರಾಧಿಕಾರಕ್ಕೆ ಬೇಕಾದ ಭೂಮಿಯನ್ನು ಸಕಾಲದಲ್ಲಿ ಖರೀದಿಸಿ ನಿರ್ಮಾಣಕ್ಕೆ ಅನುವು ಮಾಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ ಈ ವಿಷಯದಲ್ಲಿ ಮೀನಾಮೇಷ ಮಾಡುತ್ತಾ, ಕಾಲಹರಣ ಮಾಡುತ್ತಿದೆ. ಹೆದ್ದಾರಿಯ ಕಾಮಗಾರಿಯನ್ನ ಸೂಕ್ತವಾದ ರೀತಿಯಲ್ಲಿ ಪರಿಶೀಲಿಸದೆ ಬೇಜವಾಬ್ದಾರಿಯಿಂದ ರಾಜ್ಯ ಸರ್ಕಾರ ನಡೆದುಕೊಂಡಿದೆ ಎಂದು ಈಶ್ವರ ನಾಯ್ಕ ಆರೋಪಿಸಿದ್ದಾರೆ.
ಇದನ್ನೂ ಓದಿ : ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಪತ್ರಕರ್ತರ ಪಾತ್ರ ಮುಖ್ಯ : ವಿ.ಡಿ.ಮೋಗೇರ
ಉತ್ತರ ಕನ್ನಡ ಭೀಕರವಾದ ಅತಿವೃಷ್ಟಿಯಿಂದ ಭಯದ ವಾತಾವರಣ ಸೃಷ್ಟಿಯಾದ ಈ ಸಂದರ್ಭದಲ್ಲಿ ಜಿಲ್ಲೆಗೆ ಸಿಎಂ ಬಂದು ಈ ಎಲ್ಲ ಅವಘಡಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ಕ್ರಮ ಕೈಗೊಳ್ಳಬೇಕು. ಐ ಆರ್ ಬಿ ಯವರ ಅವೈಜ್ಞಾನಿಕ ಕಾಮಗಾರಿ ಭೂಸ್ವಾಧೀನದ ವಿಳಂಬ ನೀತಿ ಮತ್ತು ಶೀಘ್ರ ಹೆದ್ದಾರಿ ಕಾಮಗಾರಿಯ ಮುಕ್ತಾಯ ವಿಷಯಗಳ ಬಗ್ಗೆ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಚರ್ಚೆಯಾಗಬೇಕು. ಈ ಸಂದರ್ಭದಲ್ಲಿ ಭೂವಿಜ್ಞಾನಿಗಳು, ಪರಿಸರ ತಜ್ಞರು, ಉತ್ತರ ಕನ್ನಡದ ಪ್ರಮುಖರು ಮತ್ತು ಅಧಿಕಾರಿಗಳ ಉಪಸ್ಥಿತರಿರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಸಶಸ್ತ್ರ ಕಾನ್ಸ್‌ಟೇಬಲ್ ಹುದ್ದೆಗೆ ದೇಹದಾರ್ಢ್ಯತೆ- ಸಹಿಷ್ಣುತೆ ಪರೀಕ್ಷೆ ಜು.೨೨ರಂದು
ಉತ್ತರ ಕನ್ನಡದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನ ಹೀಗೆಯೇ ಮುಂದುವರಿಸಿದ್ದಲ್ಲಿ ಹಿಂದುಳಿದ ಮೋರ್ಚಾ ಪ್ರಜಾಪ್ರಭುತ್ವದ ಪ್ರತಿಭಟನೆಯ ಮಾರ್ಗವನ್ನು ಅನುಸರಿಸಬೇಕಾದೀತು ಎಂದು ಈಶ್ವರ ನಾಯ್ಕ ಎಚ್ಚರಿಸಿದ್ದಾರೆ. ಪಶ್ಚಿಮ ಘಟ್ಟದ ಈ ಸೂಕ್ಷ್ಮ ವಲಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಗಳು ಉತ್ತರ ಕನ್ನಡದಲ್ಲಿಯೇ ಸಭೆ ನಡೆಸಿ ಸೂಕ್ತ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.